ಲೇಖನ : ರವಿ ಕರಣಂ.
ದಿನಂ ಪ್ರತಿ ಸಾವಿರಾರು ಜನನ ಮರಣಗಳ ಪಟ್ಟಿ ಸಿದ್ಧಪಡಿಸುವ ಒಂದು ವಿಭಾಗ ಪ್ರತಿ ತಾಲೂಕು ಕೇಂದ್ರಗಳಲ್ಲಿರುತ್ತದೆ. ಆ ಮೂಲಕ ಭೂಮಿಯ ಮೇಲಿನ ಜನಸಂಖ್ಯೆಯ ಒಟ್ಟು ಅಂದಾಜು ಮೊತ್ತವನ್ನು ಕಂಡು ಹಿಡಿಯಲಾಗುತ್ತದೆ. ಅದರಾಧಾರದ ಮೇಲೆ ಹಲವು ಆಡಳಿತಾತ್ಮಕ ಯೋಜನೆಗಳು ರುಪಗೊಳ್ಳುತ್ತವೆ. ಈ ಭೂಮಿಯ ಮೇಲಿನ ಜನಸಂಖ್ಯೆ ಹೆಚ್ಚು ಕಡಿಮೆ 725 ಕೋಟಿ ಇದ್ದಿರಬಹುದು. ನಮ್ಮ ಜ್ಞಾನ ಮತ್ತು ಸ್ಮೃತಿಯ ವ್ಯಾಪ್ತಿಯಲ್ಲಿ ಇರಬಹುದಾದ ವ್ಯಕ್ತಿಗಳ ಸಂಖ್ಯೆ
ಎಷ್ಟಿರಬಹುದು ? ಸ್ಮರಿಸಿಕೊಳ್ಳಿ.
ಕೇವಲ ಬೆರಳೆಣಿಕೆಯಷ್ಟು ಅಲ್ಲವೇ ? ಅಂತಹ ವ್ಯಕ್ತಿಗಳು ಬಯಸದಿದ್ದರೂ ನಮ್ಮಮನಸಿನ ಪರದೆಯ ಮೇಲೆ ಅಳಿಸಲಾಗದ ಚಿತ್ರವಾಗಿ ಉಳಿದು ಬಿಡುತ್ತಾರೆ. ಅಂತಹವರಲ್ಲಿ ರುಕ್ಮಿಣಿ ಅರುಂಡೇಲ್ ಒಬ್ಬರು. ಅವರು ರುಕ್ಮಿಣಿ 1904 ರ ಫೆಬ್ರವರಿ 29 ರಂದು ಮಧುರೈ ಯ ಮೇಲ್ವರ್ಗದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ತಂದೆ ನೀಲಕಂಠ ಶಾಸ್ತ್ರಿ. ತಾಯಿ ಶೇಷಾಮ್ಮಾಳ್.
ಬಹುಶಃ ನೀವು ಭರತನಾಟ್ಯ ಕಲಾವಿದರು, ಭರತನಾಟ್ಯ ನೃತ್ಯ ಪ್ರಿಯರು ಆಗಿದ್ದವರಿಗಂತೂ ಈ ಹೆಸರು ನೆನಪಿರಲಿಕ್ಕೇ ಬೇಕು. ಇಲ್ಲವೆಂದರೆ ಅಪರಿಪೂರ್ಣ ವ್ಯಕ್ತಿ ಎಂದು ನಿರ್ಧಾರಕ್ಕೆ ಬಂದು ಬಿಡುವವರಿದ್ದಾರೆ. ಏಕೆಂದರೆ ಅಕ್ಕಿ ಬೇಯಿಸಿ, ಅನ್ನ ಮಾಡಿಕೊಂಡವರಿಗೆ ಅನ್ನದ ಮೂಲ ಯಾವುದೆಂದು ಗೊತ್ತಿರುತ್ತದೆ. ಹಾಗೆಯೇ ಇದು. ಪ್ರಾಚೀನ ಕಾಲದ ಭರತ ನಾಟ್ಯಕ್ಕೆ ಆಧುನಿಕ ಸ್ಪರ್ಶ ನೀಡಿದವರು ಯಾರೆಂದು ಗೊತ್ತಿರದೇ ಹೋದರೆ ತಪ್ಪಾದೀತು. ಕಾರಣ ತನ್ನ ಇಡೀ ಜೀವನವನ್ನು ಈ ಕಲೆಗಾಗಿ ಧಾರೆಯೆರೆದವರಿಗೆ, ಪ್ರಶಸ್ತಿ, ಬಿರುದು, ನಿವೇಶನ, ಮಾಸಾಶನ ಕೊಟ್ಟು ಗೌರವಿಸದಿದ್ದರೂ ಪರವಾಗಿಲ್ಲ. ಅವರ ಕಲಾ ಸೇವೆಯ ಬಗೆಗಿನ ಕಡೆಗಣನೆ ದೊಡ್ಡ ಅಪಚಾರವಾದೀತು. ಆ ದೃಷ್ಟಿಯಿಂದಲೇ ರುಕ್ಮಿಣಿ ದೇವಿ ಅರುಂಡೇಲ್ ಮತ್ತು ಅವರ ಪತಿಯ ಬಗ್ಗೆ ಹೇಳಲೇಬೇಕು.
ನಿಮಗೀಗಾಲೇ ಗೊತ್ತಿರುವಂತೆ ಭಾರತೀಯ ಸಮಾಜ ಅತ್ಯಂತ ಸಂಪ್ರದಾಯ, ಶುದ್ಧ ವಿಚಾರಗಳ ಆಧಾರದ ಮೇಲೆ ನಿರ್ಮಾಣವಾದದ್ದು. ಇಲ್ಲಿ ಶೀಲ ಮತ್ತು ಅಶ್ಲೀಲಗಳ ಬಗೆಗಿನ ವಿಚಾರಗಳು ಅತ್ಯಂತ ಸೂಕ್ಷ್ಮ. ಪದ ಉಚ್ಛಾರಣೆಯಲ್ಲಿ ಕೊಂಚ ಎಡವಿದರೂ ಅರ್ಥ ಅನರ್ಥವಾಗುವ ಸಂಭವ! ಅಂಥದ್ದರಲ್ಲಿ, ಇಪ್ಪತ್ತನೆಯ ಶತಮಾನದ ಮೊದಲರ್ಧದಲ್ಲಿ ಇನ್ನೂ ವೈಜ್ಞಾನಿಕ ಲೋಕದ ಶಕೆ ಸಣ್ಣಗೆ ಶುರುವಾಗುತಿದ್ದ ಸಮಯದಲ್ಲಿ, ಸಮಾಜ ಹೊಸತನದ ಬೆಳಕನ್ನು ಬರಮಾಡಿಕೊಳ್ಳಲು ಸಿದ್ಧರಿಲ್ಲದ ದಿನಗಳಲ್ಲಿ ರುಕ್ಮಿಣಿ ಅರುಂಡೇಲ್ ರ ಕ್ರಾಂತಿಕಾರಕ ಹೆಜ್ಜೆಗಳು ನಮ್ಮ ದೇಶದಲ್ಲಿ ಒಂದೇ ಅಲ್ಲ. ಜಗತ್ತಿನಾದ್ಯಂತ ಮೂಡಲು ಆರಂಭವಾದವು.
ವೈವಾಹಿಕ ಸಂಗತಿ ಭಾರತೀಯ ಸಮಾಜಕ್ಕೆ ಆಘಾತ :
ರುಕ್ಮಿಣಿ ಯವರ ತಂದೆ ನೀಲಕಂಠ ಶಾಸ್ತ್ರಿಯವರು, ಲೋಕೋಪಯೋಗಿ ಇಲಾಖೆಯಲ್ಲಿ ಇಂಜಿನಿಯರಾಗಿದ್ದರು. ತಾಯಿ ಶೇಷಮ್ಮಾಳ್ ಸಂಗೀತಾಸಕ್ತರು. ತಂದೆಯವರು 1901 ರಲ್ಲಿ ಬ್ರಹ್ಮವಿದ್ಯಾವಾದ ಸಮಾಜಕ್ಕೆ ಪರಿಚಯವಾದರು. ಅಲ್ಲೇ ಮನೆ ಮಾಡಿಕೊಂಡು ಹತ್ತಿರದವರೂ ಆಗಿದ್ದರು. ಇದು ರುಕ್ಮಿಣಿಯವರಿಗೆ ವರವಾಯಿತು.
1920 ರಲ್ಲಿ ಇವರ ವಿವಾಹವಾಯಿತು. ಅದು ಪ್ರಸಿದ್ಧ ಬ್ರಹ್ಮವಿದ್ಯಾವಾದಿ ಡಾಕ್ಟರ್. ಜಾರ್ಜ್ ಅರುಂಡೇಲ್ ರೊಂದಿಗೆ. ಇವರು ಥಿಯೊಸೊಫಿಕಲ್ ಸೊಸೈಟಿಯ ಡಾ॥ ಅನ್ನಿ ಬೆಸೆಂಟ್ ರವರ ಆಪ್ತ ರಲ್ಲೊಬ್ಬರು. ಅಲ್ಲದೇ ವಾರಣಾಸಿಯ ಸೆಂಟ್ರಲ್ ಹಿಂದು ಕಾಲೇಜ್ ನ ಪ್ರಾಂಶುಪಾಲರಾಗಿದ್ದರು. ಅಲ್ಲದೇ ರುಕ್ಮಿಣಿ ಇವರೊಡನೆ ಆಗ ನಿಕಟ ಸಂಬಂಧ ಬೆಳೆಸಿಕೊಂಡಿದ್ದರು. ಇದು ಶುದ್ಧ ಸಂಪ್ರದಾಯದ ಭಾರತೀಯ ಸಮಾಜಕ್ಕೆ ಬಲವಾದ ಪೆಟ್ಟು ಕೊಟ್ಞಿತ್ತು.
ಅವರ ಚಿತ್ತ ಭರತನಾಟ್ಯದತ್ತ :
ಅದೊಮ್ಮೆ 1933 ರಲ್ಲಿ ಮದ್ರಾಸ್ ಸಂಗೀತ ಅಕಾಡೆಮಿಯ ವಾರ್ಷಿಕ ಸಮ್ಮೇಳನ ಏರ್ಪಟ್ಟಿತ್ತು. ಕಲಾವಿದರು ಮೊಟ್ಟ ಮೊದಲ ಸಾಧಿರ್ ಶೈಲಿಯಲ್ಲಿ ಮಾಡಿದ ನೃತ್ಯ ಪ್ರದರ್ಶನವನ್ನು ಅವರು ವೀಕ್ಷಿಸಿದರು. ಆಗವರ ಮನಸ್ಸಲ್ಲಿ ಚಿಗುರೊಡೆದ ಬಯಕೆಯು ಅವರನ್ನು ಜಗದ್ವಿಖ್ಯಾತ ಕಲಾವಿದೆಯನ್ನಾಗಿ ರೂಪಿಸಿತು.
ಮೈಲಾಪೊರೆ ಗೌರಮ್ಮ ಎಂಬುವರಿಂದ ಹಾಗೂ ಇ. ಕೃಷ್ಣ ಐಯ್ಯರ್ ರವರ ಸಲಹೆ,ಸಹಾಯದೊಂದಿಗೆ ‘ಪಂಡನಲೂರ್ ಮೀನಾಕ್ಷಿ ಸುದರಂ ಪಿಳ್ಳೈ’ಯವರಿಂದ ನೃತ್ಯಾಭ್ಯಾಸ ಮಾಡಿದರು. ಸಮಾಜ ಹೇಗಾದರೂ ಸ್ವೀಕರಿಸಲಿ. ಅದರೆಡೆಗೆ ಗಮನ ಕೊಡುವುದಕ್ಕಿಂತ, ಅದ್ಭುತ ಪ್ರದರ್ಶನದೊಂದಿಗೆ ಜನಮನ ಸೆಳೆವ ಯೋಚನೆ ಅವರಲ್ಲಿತ್ತು.
ಕಲೆಯ ಹೊಸೆದು ವೇದಿಕೆಯ ಮೇಲೆ ಬಸಿದ ಬಗೆ:
ಅರುಂಡೇಲ್ ರನ್ನು ವಿವಾಹವಾದ ಮೇಲೆ ಅವರು ಹಲವು ದೇಶಗಳನ್ನು ಸುತ್ತಿದರು. ಥಿಯೊಸೊಫಿಕಲ್ ಸೊಸೈಟಿಯ ಸಂಪರ್ಕ ದೊರೆತು,ಅನೇಕರ ಪರಿಚಯವಾಯಿತು. ಶಿಕ್ಷಕರಾದ ಮರಿಯಾ ಮಾಂಟಸ್ಸರಿ, ಕವಿ ಜೇಮ್ಸ್ ಕಸಿನ್ಸ್ , ರಷ್ಯಾದ ಪ್ರಸಿದ್ಧ ಬ್ಯಾಲೆ ನರ್ತಕಿ ಅನ್ನಾ ಪಾವಲೋವ ಮುಂತಾದವರು.
ಹೀಗೊಮ್ಮೆ ನೃತ್ಯ ಪ್ರದರ್ಶನಕ್ಕೆಂದು ಹಡಗಿನಲ್ಲಿ ಪ್ರಯಾಣ ಮಾಡುತಿದ್ದಾಗ ಅನ್ನಾ ಮಾವಲೋವ್ ನೃತ್ಯದ ಬಗೆಗಿನ ಆಳ ಅಗಲಗಳನ್ನು ಜಗತ್ತಿಗೆ ತೋರ್ಪಡಿಸುವ ಬಗ್ಗೆ ಕೇಳಿದಾಗಲೇ, ರುಕ್ಮಿಣಿಯವರು ನಿರ್ಧರಿಸಿದರಂತೆ. ‘ತಮ್ಮ ಜೀವನವೆಲ್ಲ ಕಲೆಗಾಗಿ’ ಎಂದು. ಮುಂದೆ ಆಗಿದ್ದು ಇತಿಹಾಸ.
ತಮ್ಮ ಪತಿಯೊಂದಿಗೆ 1936 ರಲ್ಲಿ ಕಲಾಕ್ಷೇತ್ರವನ್ನು ಸ್ಥಾಪಿಸಿದರು. ಇದು ನೃತ್ಯ ಮತ್ತು ಸಂಗೀತದ ಅಕಾಡೆಮಿ, ಚೆನ್ನೈನ ಆಡ್ಯರ್ ನಲ್ಲಿ ಪ್ರಾಚೀನ ಭಾರತದ ಗುರುಕುಲ ಪದ್ದತಿಯಂತೆ ಸ್ಥಾಪಿಸಲಾಗಿದೆ.
ಮೊದಲ ನೃತ್ಯ ಪ್ರದರ್ಶನ :
1935 ರಲ್ಲಿ ಬ್ರಹ್ಮವಿದ್ಯಾ ಸಮಾಜದ ‘ವಜ್ರಮಹೋತ್ಸವ ಸಮ್ಮೇಳನದಲ್ಲಿ ತಮ್ಮ ಪ್ರಥಮ ಪ್ರದರ್ಶನ ನೀಡಿದರು. ಇದರಿಂದ ಸಮಾಜದಲ್ಲಿ ಮೆಚ್ಚುಗೆಯೂ, ಅಚ್ಚರಿಯೂ, ಮಿಂಚಿನ ಸಂಚಾರವೂ ಉಂಟಾಯಿತು. ಅವರ ಭರತನಾಟ್ಯದಲ್ಲಿ ಹಲವು ನೃತ್ಯ ಸಂಯೋಜನೆ ಮಾಡಿದ್ದಕ್ಕೆ ಮೆಚ್ಚುಗೆ, ಸಂಪ್ರದಾಯಸ್ಥ ಮನೆತನದ ಹೆಣ್ಣು ಮಗಳು ಬಹಿರಂಗ ವೇದಿಕೆ ಮೇಲೆ, ಗೆಜ್ಜೆ ಕಟ್ಟಿ ನೃತ್ಯ ಮಾಡಿದ್ದಕ್ಕೆ ಅಚ್ಚರಿಯೂ, ಈ ನೃತ್ಯ ಕೇವಲ ದೇವದಾಸಿಯರ ನೃತ್ಯವೆಂದು, ಅದು ಕಾಮ ಪ್ರಚೋದಕದ ಒಂದು ಭಾಗವೆಂದು ನಂಬಿದ್ದ ಜನರ ಮುಂದೆ, ಯಾವ ಸಂಕೋಚ, ಮುಜುಗರವಿಲ್ಲದೇ ಕಲಾ ಪ್ರದರ್ಶನ ನೀಡಿದ್ದು ಮಿಂಚಿನ ಸಂಚಾರಕ್ಕೆ ಕಾರಣ.
ಅಂದು ಅವರ ದಿಟ್ಟ ನಿಲುವಿನಿಂದ ಎಲ್ಲ ಅಶ್ಲೀಲಗಳ ಪಟ್ಟ ಕಳಚಿಕೊಂಡ ನಾಟ್ಯ, ಇಂದು ಭಾರತೀಯ ನೃತ್ಯ ಶಾಸ್ತ್ರದ ಸಿಂಹಾಸನವೇರಿದೆಯೆಂದರೆ ಅದಕ್ಕೆ ರುಕ್ಮಿಣಿ ದೇವಿಯವರೇ ಕಾರಣ. ಇಂದು ಅಸಂಖ್ಯಾತ ಸುಸಂಸ್ಕೃತ ಮನೆತನದ ಹೆಣ್ಣು ಮಕ್ಕಳು ಈ ಕ್ಷೇತ್ರದಲ್ಲಿ ಸಾಧನೆಗೈದಿದ್ದಾರೆ, ಆ ಸಾಧನೆಯ ಹಾದಿಯಲ್ಲಿ ಮತ್ತೂ ಕೆಲವರಿದ್ದಾರೆ. ದೇಶ ವಿದೇಶಗಳಿಂದ ಪ್ರಶಸ್ತಿ, ಗೌರವಗಳು ದೊರೆತಿವೆ. ಪ್ರಾಣಿಗಳ ಬಗೆಗಿನ ಕಾಳಜಿ, 1956 ರಲ್ಲಿ ರಾಜ್ಯ ಸಭೆಗೆ ನಾಮಕರಣಗೊಂಡು, 1960 ಪ್ರಾಣಿ ಸಂರಕ್ಷಣಾ ಕಾಯಿದೆ ತರುವಲ್ಲಿ ಇವರ ಪಾತ್ರವಿದೆ. ಒಟ್ಟು ಹಲವು ಸಾಧನೆಗಳ ಗಣಿ. ಇವರ ಬದುಕೇ ರೋಚಕ ಮತ್ತು ಆಸಕ್ತಿದಾಯಕ. ರುಕ್ಮಿಣಿ ದೇವಿ ಅರುಂಡೇಲ್ ಚೆನ್ನೈನಲ್ಲಿ 1986 ರ ಫೆಬ್ರವರಿ 24 ರಂದು ನಿಧನರಾದರು.
ರಕ್ತದಾನದೊಂದಿಗೆ ಅಭಿಮಾನ ಮೆರೆದ ಕಾರ್ಮಿಕರು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ