ಪ್ರಗತಿವಾಹಿನಿ ಸುದ್ದಿ; ಕಲಬುರ್ಗಿ: ಎಸ್ ಎಸ್ ಎಲ್ ಸಿ ಗಣಿತ ವಿಷಯದ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ಪ್ರಕರಣದಲ್ಲಿ 16 ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ.
ಕೊಪ್ಪಳ ಜಿಲ್ಲೆಯ ಮೂರು ಪರೀಕ್ಷಾ ಕೇಂದ್ರದಲ್ಲಿ ಎಸ್ ಎಸ್ ಎಲ್ ಸಿ ಗಣಿತ ವಿಷಯ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ನಡೆದಿತ್ತು. ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಅಫಜಲಪುರ ತಾಲೂಕಿನ ಗೊಬ್ಬೂರ ಬಿ ಪರೀಕ್ಷಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮುಖ್ಯ ಶಿಕ್ಷಕ ಸೇರಿ ಒಟ್ಟು 16 ಶಿಕ್ಷಕರನ್ನು ಶಿಕ್ಷಣ ಇಲಾಖೆ ಅಮಾನತು ಮಾಡಿ ಆದೇಶ ಹೊರಡಿಸಿದೆ.
ಎಸ್ ಎಸ್ ಎಲ್ ಸಿಯ ಗಣಿತ ಪರೀಕ್ಷೆ ಏ.3ರಂದು ನಡೆದಿತ್ತು. ಎಸ್ ಪಿ ಇಶಾ ಪಂತ್ ಪರೀಕ್ಷಾ ಕೇಂದ್ರದ ಭದ್ರತೆ ಪರೀಶೀಲನೆಗೆ ತೆರಳಿದ್ದರು. ಈ ವೇಳೆ ವಿದ್ಯಾರ್ಥಿಗಳು ಮೈಕ್ರೋ ಜರಾಕ್ಸ್ ಪುಸ್ತಕ ಹಾಗೂ ಚೀಟಿಗಳ ಸಹಾಯದಿಂದ ಪರೀಕ್ಷೆ ಬರೆದು ಬಳಿಕ ಮೈಕ್ರೋ ಜೆರಾಕ್ಸ್ ಪುಸ್ತಕ, ಚೀಟಿಗಳನ್ನು ಎಸೆದಿರುವುದು ಹಾಗೂ ಪರೀಕ್ಷಾ ಕೇಂದ್ರದಲ್ಲಿ ವ್ಯಕ್ತಿಯೊಬ್ಬರು ಮೈಕ್ರೋ ಜೆರಾಕ್ಸ್ ಪುಸ್ತಕ, ಚೀಟಿಗಳನ್ನು ಸುಟ್ಟು ಹಾಕಿರುವುದು ಪತ್ತೆಯಾಗಿತ್ತು. ಈ ಬಗ್ಗೆ ಶಿಕ್ಷಣ ಇಲಾಖೆಗೆ ಮಾಹಿತಿ ನೀಡಲಾಗಿತ್ತು.
ಎಸ್ ಎಸ್ ಎಲ್ ಸಿ ಗಬ್ಬೂರು ಬಿ ಪರೀಕ್ಷಾ ಕೇಂದ್ರದಲ್ಲಿ ಸಾಮೂಹಿಕ ನಕಲು ನಡೆದಿರುವುದು ದೃಡಪಟ್ಟ ಹಿನ್ನೆಲೆಯಲ್ಲಿ ಕೇಂದ್ರದ ಎಲ್ಲಾ ಸಿಬ್ಬಂದಿಗಳನ್ನು ಅಮಾನತುಗೊಳಿಸಲಾಗಿದೆ. ಅಲ್ಲದೇ ಆತನೂರು ಪರೀಕ್ಷಾ ಕೇಂದ್ರದ ಸಿಬ್ಬಂದಿಯನ್ನು ಬದಲಿಸಿ ಹೊಸಬರನ್ನು ನೇಮಕ ಮಾಡಲಾಗಿದೆ ಎಂದು ಕಲಬುರ್ಗಿ ಅಪರ ಆಯುಕ್ತ ಆನಂದ ಪ್ರಕಾಶ್ ಮೀನಾ ತಿಳಿಸಿದ್ದಾರೆ.
ಇನ್ನು ಯಾರೂ ಆತಂಕ ಪಡುವ ಅಗತ್ಯವಿಲ್ಲ ಮರು ಪರೀಕ್ಷೆ ಇಲ್ಲ. ಆದರೆ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ