ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಜುಲೈ 1ರಿಂದ ಶಾಲೆಗಳು ಆರಂಭವಾಗುವುದು ಬಹುತೇಕ ನಿಶ್ಚಿತವಾಗಿದೆ. ಈ ಬಗ್ಗೆ ಕೇಂದ್ರ ಸರಕಾರದ ಹಸಿರು ನಿಶಾನೆ ಕೂಡ ಸಿಕ್ಕಿದೆ.
ಆದರೆ ಸಂಬಂಧಿಸಿದವರೊಂದಿಗೆ ಒಮ್ಮೆ ಚರ್ಚಿಸಿ ಅಂತಿಮ ನಿರ್ಧಾರ ಪ್ರಕಟಿಸಲು ಯೋಚಿಸಿರುವ ಶಿಕ್ಷಣ ಸಚಿವ ಸುರೇಶ ಕುಮಾರ, ಪಾಲಕರು, ಮುಖ್ಯ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳೊಂದಿಗೆ ಚರ್ಚಿಸಿ, ಅವರ ಅಭಿಪ್ರಾಯ ಸಂಗ್ರಹಿಸಲು ಸೂಚಿಸಿದ್ದಾರೆ.
ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಮುಚ್ಚಲ್ಪಟ್ಟಿರುವ ಶಾಲೆಗಳು ಬೇಸಿಗೆ ರಜೇಯ ಅವಧಿಯನ್ನೂ ಮುಗಿಸಿ ಪುನಾರಂಭಕ್ಕೆ ಕಾದಿವೆ. ಜೂನ್ ಮೊದಲ ವಾರವೇ ಶಾಲೆ ಆರಂಭವಾಗಬೇಕಿತ್ತು. ಆದರೆ ಕೊರೋನಾ ಎಫೆಕ್ಟ್ ಇನ್ನೂ ಜೋರಾಗಿರುವುದರಿಂದ ಶಾಲೆಗಳನ್ನು ಆರಂಭಿಸಲು ಶಿಕ್ಷಣ ಇಲಾಖೆ ಹಿಂದಿ ಮುಂದೆ ನೋಡುತ್ತಿದೆ.
ಜೊತೆಗೆ ಎಸ್ಎಸ್ಎಲ್ ಸಿ ಪರೀಕ್ಷೆ ಕೂಡ ಇನ್ನೂ ಬಾಕಿ ಇರುವುದರಿಂದ ಶಾಲೆಗಳ ಆರಂಭಕ್ಕೆ ನಿರ್ಧಾರವಾಗಿಲ್ಲ.
ಇದೀಗ ಶಿಕ್ಷಣ ಸಚಿವ ಸುರೇಶ ಕುಮಾರ ಹೇಳಿಕೆ ನೀಡಿದ್ದು, ಜೂನ್ 12ರೊಳಗೆ ಸಂಬಂಧಿಸಿದವರೊಂದಿಗೆ ಚರ್ಚಿಸಿ ಅವರ ಅಭಿಪ್ರಾಯ ತಿಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಎಲ್ಲಡೆ ಸರಕಾರ, ಖಾಸಗಿ, ಅನುದಾನ ಮತ್ತು ಅನುದಾನ ರಹಿತ ಶಾಲೆಗಳ ಮುಖ್ಯಧ್ಯಾಪಕರು, ಪಾಲಕರು ಹಾಗೂ ಎಸ್ ಡಿಎಂಸಿ ಸದಸ್ಯರ ಸಭೆ ನಡೆಸಿ ಅವರ ಅಭಿಪ್ರಾಯಗಳನ್ನು ಕಳುಹಿಸುವಂತೆ ಆದೇಶಿಸಿದ್ದಾರೆ.
ಈ ಅಭಿಪ್ರಾಯದ ಆಧಾರದ ಮೇಲೆ ಶಾಲೆ ಆರಂಭದ ಸ್ಪಷ್ಟ ದಿನಾಂಕ ನಿರ್ಧರಿಸಲು ಅವರು ಉದ್ದೇಶಿಸಿದ್ದಾರೆ.
ಕೊರೆನಾ ಪೂರ್ಣ ನಿಯಂತ್ರಣಕ್ಕೆ ಬರುವವರೆಗೆ ಶಾಲೆಗಳನ್ನು ಆರಂಭಿಸಬಾರದು. ಮಕ್ಕಳಿಂದ ಸಾಮಾಜಿಕ ಅಂತರವನ್ನು ನಿರೀಕ್ಷಿಸಲು ಸಾಧ್ಯವೇ ಇಲ್ಲ ಎನ್ನುವ ಅಭಿಪ್ರಾಯ ಸಾಮಾಜಿಕ ವಲಯದಲ್ಲಿದೆ. ಈ ಹಿನ್ನೆಲೆಯಲ್ಲಿ ಸರಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಕಾದು ನೋಡಬೇಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ