Latest

ಮತ್ತೊಮ್ಮೆ ಕಸ್ತೂರಿ ರಂಗನ್ ವರದಿ ತಿರಸ್ಕರಿಸಿದ ರಾಜ್ಯಸರಕಾರ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಡಾ.ಕಸ್ತೂರಿ ರಂಗನ್ ವರದಿಯ ಬಗ್ಗೆ ಇಂದು ಸಚಿವ ಸಂಪುಟ ಉಪಸಮಿತಿಯ ಸಭೆಯನ್ನು ಸಮಿತಿ ಅಧ್ಯಕ್ಷ ಆನಂದ ಸಿಂಗ್ ಅವರ ನೇತೃತ್ವದಲ್ಲಿ ನಡೆಸಿ, ವರದಿ ಕುರಿತು ಸಮಿತಿ ಸದಸ್ಯರೊಂದಿಗೆ ವರದಿಯ ಸಾಧಕ – ಭಾದಕಗಳ ಕುರಿತು ವಿಸ್ತೃತವಾಗಿ  ಚರ್ಚಿಸಲಾಯಿತು.
 ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೇಂದ್ರ ಪರಿಸರ ಖಾತೆ ಸಚಿವ  ಪ್ರಕಾಶ್ ಜಾವಡೇಕರ್ ಅವರಿಗೆ ಪತ್ರ ಬರೆದು ಈ  ವರದಿಯನ್ನು ಯಾವುದೇ ಕಾರಣಕ್ಕೂ ಒಪ್ಪುವುದಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಕಸ್ತೂರಿ ರಂಗನ್ ವರದಿಯು ಸಂಪೂರ್ಣ ಅವೈಜ್ಞಾನಿಕವಾಗಿದೆ. ಈ ವರದಿಯಿಂದಾಗಿ ರಾಜ್ಯದ ಹಲವಾರು ಜಿಲ್ಲೆಗಳಿಗೆ ಸಾಕಷ್ಟು ಸಮಸ್ಯೆ ಉಲ್ಬಣವಾಗಲಿದೆ. ಈ ನಿಟ್ಟಿನಲ್ಲಿ ವರದಿಯನ್ನು ಪುನರ್ ಪರಿಶೀಲಿಸಿದ ನಂತರವೇ ವರದಿಯನ್ನು ಒಪ್ಪಿಕೊಳ್ಳಲಾಗುವುದು. ಈ ವರದಿಯನ್ನು ಸಾರಾಸಗಟಾಗಿ ತಿರಸ್ಕರಿಸಲಾಯಿತು ಹಾಗೂ ಕೇಂದ್ರ ಪರಿಸರ ಖಾತೆ ಸಚಿವರಿಗೆ ಈ  ಸಭೆಯ ಮಾಹಿತಿಯನ್ನು ತುರ್ತಾಗಿ ತಿಳಿಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಈ ಸಭೆಯಲ್ಲಿ ಉಪಸಮಿತಿಯ ಅಧ್ಯಕ್ಷರು ಹಾಗೂ ಅರಣ್ಯ ಸಚಿವರಾದ ಆನಂದ ಸಿಂಗ್, ಕಾರ್ಮಿಕ ಮತ್ತು ಸಕ್ಕರೆ ಸಚಿವ ಶಿವರಾಮ ಹೆಬ್ಬಾರ್ ,  ಗೃಹಸಚಿವ ಬಸವರಾಜ ಬೋಮ್ಮಾಯಿ , ಕಂದಾಯ ಸಚಿವ ಆರ್.ಅಶೋಕ್, ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ ಪಾಟೀಲ್ ಹಾಗೂ ಉಪ ಸಮಿತಿಯ ಎಲ್ಲಾ ಸದಸ್ಯರು ಹಾಜರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button