
ಪ್ರಗತಿವಾಹಿನಿ ಸುದ್ದಿ; ಮೂಡಬಿದಿರೆ: ನನ್ನ ತಂದೆ ನನಗೆ ಉತ್ತಮ ಶಿಕ್ಷಣ ಕೊಡಿಸಲು ತಮ್ಮ ಕನಸುಗಳನ್ನು ತ್ಯಾಗ ಮಾಡಿದ್ದಾರೆ. ಅವರ ಕನಸು ಈಡೇರಿಸಲು ನಾನು ಈ ವಿದ್ಯಾರ್ಥಿ ವೇತನ ಬಳಕೆ ಮಾಡುವುದಾಗಿ ಮೂಡಬಿದಿರೆಯ ಎಕ್ಸಲೆಂಟ್ ಪಿಯು ಕಾಲೇಜಿನ ಭಾವನಾ ಭಾವುಕಳಾಗಿ ನುಡಿದಳು.
ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ರೈತ ವಿದ್ಯಾನಿಧಿ ಯೋಜನೆಯ ಫಲಾನುಭವಿ ವಿದ್ಯಾರ್ಥಿಗಳೊಂದಿಗೆ ಮುಖ್ಯಮಂತ್ರಿಗಳ ಸಂವಾದ ಕಾರ್ಯಕ್ರಮದಲ್ಲಿ ಮಂಡ್ಯ ಮೂಲದ ಈ ವಿದ್ಯಾರ್ಥಿನಿ ತನ್ನ ಮನದ ಮಾತು ಬಿಚ್ಚಿಟ್ಟಳು.
ವಿದ್ಯಾರ್ಥಿ ವೇತನದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಬೇಕೆಂಬ ಬೇಡಿಕೆಯನ್ನೂ ಮುಂದಿಟ್ಟಳು.
ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿಯವರು ಈ ವರ್ಷ ಮುಖ್ಯಮಂತ್ರಿ ಮಾರ್ಗದರ್ಶಿನಿ ಕಾರ್ಯಕ್ರಮದಡಿ ಆಪ್ ಆಧಾರಿತವಾಗಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಬೈಜುಸ್ ಅವರೊಂದಿಗೆ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಲಾಗಿದೆ ಎಂದು ತಿಳಿಸಿದರು.
ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ನೆರವು
ಅದೇ ಕಾಲೇಜಿನ ಮತ್ತೊಬ್ಬ ವಿದ್ಯಾರ್ಥಿನಿ, ಚನ್ನರಾಯಪಟ್ಟಣದ ವಿದ್ಯಾಶ್ರೀ ವಿದ್ಯಾರ್ಥಿ ವೇತನದ ಮೊತ್ತವನ್ನು ಪಠ್ಯಪುಸ್ತಕ ಖರೀದಿಗೆ ಬಳಸಿಕೊಂಡಿದ್ದೇನೆ. ಉಳಿದ ಮೊತ್ತವನ್ನು ನೀಟ್ ಶುಲ್ಕ ಭರಿಸಲು ಉಳಿಸಿಕೊಂಡಿರುವುದಾಗಿ ತಿಳಿಸಿದಳು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಜೊತೆಗೆ ಪರೀಕ್ಷೆ ಎದುರಿಸುವ ಮಕ್ಕಳಿಗೆ ನೆರವು ನೀಡುವ ಕಾರ್ಯಕ್ರಮವನ್ನು ರೂಪಿಸುವುದಾಗಿ ಘೋಷಿಸಿದರು.
ಅರ್ಜಿ ಸಲ್ಲಿಸದೆಯೇ ವಿದ್ಯಾರ್ಥಿ ವೇತನ
ಮಂಗಳೂರಿನ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನ ರಕ್ಷಿತಾ ವಿದ್ಯಾರ್ಥಿ ವೇತನ ಬಂದಿದ್ದೇ ತಿಳಿಯಲಿಲ್ಲ. ಯಾವುದೇ ಅರ್ಜಿ ಸಲ್ಲಿಸದೆ ವಿದ್ಯಾರ್ಥಿ ವೇತನ ದೊರೆತಿದೆ. ತುರ್ತು ಸಂದರ್ಭಗಳಲ್ಲಿ ಹೆತ್ತವರಿಗೆ ಹೊರೆಯಾಗದಂತೆ ಈ ಮೊತ್ತವನ್ನು ಬಳಕೆ ಮಾಡುತ್ತಿರುವುದಾಗಿ ತಿಳಿಸಿದಳು.
ಇದೇ ಕಾಲೇಜಿನ ರಾಯ್ಸನ್ ಡಿ’ಸೋಜಾ ಮತ್ತಿತರ ಕೆಲವು ವಿದ್ಯಾರ್ಥಿಗಳು, ಬೇರೆ ವಿದ್ಯಾರ್ಥಿ ವೇತನದೊಂದಿಗೆ ಹೆಚ್ಚುವರಿಯಾಗಿ ರೈತ ವಿದ್ಯಾನಿಧಿಯ ಸೌಲಭ್ಯ ದೊರೆತಿರುವುದು ಅನುಕೂಲಕರವಾಗಿದೆ ಎಂದು ವಿವರಿಸಿದರು.
ಹೈಸ್ಕೂಲು ವಿದ್ಯಾರ್ಥಿನಿಯರಾದ ಸಾನ್ವಿತ ಶೆಟ್ಟಿ, ಡ್ಯಾನಿಶಾ ಫೆರ್ನಾಂಡಿಸ್ ವಿದ್ಯಾರ್ಥಿ ವೇತನ ನೀಡಿರುವುದಕ್ಕೆ ಮುಖ್ಯಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಉಜಿರೆ ಪಾಲಿಟೆಕ್ನಿಕ್ನಲ್ಲಿ ಓದುತ್ತಿರುವ ನಿಶ್ಮಿತಾ ತನ್ನ ಪ್ರಾಜೆಕ್ಟ್ ತಯಾರಿಗೆ ಈ ಹಣ ಬಳಕೆ ಮಾಡಿರುವುದಾಗಿ ತಿಳಿಸಿದರೆ, ಮಂಗಳೂರಿನ ಕಾರ್ ಸ್ಟ್ರೀಟ್ ನ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿನಿ ಶರಣ್ಯ ಕಾಲೇಜು ಶುಲ್ಕ, ಲೇಖನ ಸಾಮಗ್ರಿ ಖರೀದಿಸಿ, ಉಳಿದ ಮೊತ್ತವನ್ನು ಸಣ್ಣ ಪುಟ್ಟ ವೆಚ್ಚಗಳಿಗೆ ಬಳಕೆ ಮಾಡುತ್ತಿರುವುದಾಗಿ ತಿಳಿಸಿದರು.
ಪಾಲಿಟೆಕ್ನಿಕ್ ಉನ್ನತೀಕರಣ
ಮಂಗಳೂರು ಕೆಪಿಟಿ ವಿದ್ಯಾರ್ಥಿ ಮಂಜುನಾಥ, ಮೊದಲಿಗೆ 2,500 ರೂ. ಅತಿ ಸಣ್ಣ ಮೊತ್ತವೆನಿಸಿತು. ಆದರೆ ತಮ್ಮನ ಶಾಲಾ ಶುಲ್ಕ ಪಾವತಿಗೆ ತೊಂದರೆ ಆದಾಗ ಒಂದೊಂದು ರೂಪಾಯಿಗೂ ಇರುವ ಮಹತ್ವ ಅರಿವಿಗೆ ಬಂತು ಎಂದು ತಿಳಿಸಿದರು. ಜೊತೆಗೆ ಸರ್ಕಾರಿ ಪಾಲಿಟೆಕ್ನಿಕ್ ಗಳಲ್ಲಿಯೂ ಅತ್ಯುತ್ತಮ ಸೌಲಭ್ಯ ಒದಗಿಸುವಂತೆ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿಗಳು ಮಕ್ಕಳಿಗೆ ಪ್ರತಿ ರೂಪಾಯಿಯ ಬೆಲೆಯೂ ತಿಳಿದಿರಬೇಕು. ಅದಕ್ಕಿಂತ ಮುಖ್ಯವಾಗಿ ಸಮಯದ ಬೆಲೆಯೂ ತಿಳಿದಿರಬೇಕು. ಸಮಯದ ಸದುಪಯೋಗ ಪಡಿಸಿಕೊಂಡು ಸಮಯವನ್ನು ನಿಮ್ಮ ಗುಲಾಮನಾಗಿಸಿಕೊಳ್ಳಬೇಕು. ನೀವು ಸಮಯದ ಗುಲಾಮನಾಗಬಾರದು ಎಂದು ಸಲಹೆ ನೀಡಿದರು. ಅಲ್ಲದೆ, ಈ ವರ್ಷ ರಾಜ್ಯ ಸರ್ಕಾರಿ ಸರ್ಕಾರಿ ಪಾಲಿಟೆಕ್ನಿಕ್ ಗಳನ್ನು ಉನ್ನತೀಕರಿಸಲು ಕಾರ್ಯಕ್ರಮ ರೂಪಿಸಿದೆ ಎಂದು ತಿಳಿಸಿದರು.
ರೈತರು ಹಲವಾರು ಸಂಕಷ್ಟದ ನಡುವೆಯೂ ತಮ್ಮ ಮಕ್ಕಳನ್ನು ಓದಿಸುತ್ತಾರೆ. ಈ ವಿದ್ಯಾರ್ಥಿ ವೇತನವನ್ನು ಮಕ್ಕಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಸಲಹೆ ನೀಡಿದರು.
ಅರ್ಹರಿಗೆ ನೇರ ಸೌಲಭ್ಯ: ಪ್ರಧಾನಿ ಕನಸು ನನಸು
ಅರ್ಹರಿಗೆ ಸೌಲಭ್ಯಗಳು ನೇರವಾಗಿ ತಲುಪಿಸಬೇಕೆಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಆಶಯ. ಅದಕ್ಕೆ ತಕ್ಕಂತೆ ರೈತರ ಮಾಹಿತಿ ಇರುವ ಫ್ರೂಟ್ಸ್ ತಂತ್ರಾಂಶ ಆಧರಿಸಿ, ಎಸ್ ಎಸ್ ಪಿ ಪೋರ್ಟಲ್ ಮೂಲಕ ನೇರವಾಗಿ ವಿದ್ಯಾರ್ಥಿಗಳ ಖಾತೆಗೆ ವಿದ್ಯಾರ್ಥಿ ವೇತನ ವರ್ಗಾಯಿಸಲಾಗುತ್ತಿದೆ. ಇಂತಹ ತಂತ್ರಾಂಶ ದೇಶದ ಬೇರೆಲ್ಲೂ ಇಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ