Latest

ದೇಶದ್ರೋಹಿಗಳಿಗೆ ಬೆಂಬಲಿಸುವುದನ್ನು ಯಾವ ಕಾರಣಕ್ಕೂ ಕ್ಷಮಿಸಲಾಗದು: ಸಿಎಂ ಬಸವರಾಜ ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಕೆಲವು ರಾಜಕೀಯ ಪಕ್ಷಗಳು ಹಾಗೂ ವ್ಯಕ್ತಿಗಳು ದೇಶದ್ರೋಹಿಗಳಿಗೆ ನೇರವಾಗಿ ದೇಶದ್ರೋಹಿಗಳನ್ನು ಬೆಂಬಲಿಸುತ್ತಿದ್ದು ರಾಷ್ಟ್ರದ ಭದ್ರತೆ, ಸುರಕ್ಷತೆಯ ವಿಷಯದಲ್ಲಿ ಈ ರೀತಿಯ ಕೃತ್ಯಗಳನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬಸವನಗುಡಿಯ ಮರಾಠಾ ಗೋಸಾಯಿ ಮಠದಲ್ಲಿ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದ ಭದ್ರತೆಯ ವಿಚಾರದಲ್ಲಿ ರಾಜಕೀಯ ಮಾಡಲಾಗುತ್ತಿದೆ. ಇಂತಹ ಜನರಿಂದ ಎಷ್ಟರಮಟ್ಟಿಗೆ ದೇಶದ ರಕ್ಷಣೆ ಸಾಧ್ಯ ಎನ್ನುವುದು ಜನಸಾಮಾನ್ಯರಿಗೆ ತಿಳಿದಿದೆ. ಯಾರೂ ಸಹ ಇಂಥ ವಿಚಾರಗಳನ್ನು ಬೆಂಬಲಿಸುವುದಿಲ್ಲ. ದೇಶದ ಉಳಿಸಲು ಶಿವಾಜಿ ಮಹಾರಾಜರ ಮಾದರಿಯ ಹೋರಾಟ ಅಗತ್ಯವಾಗಿದೆ ಎಂದರು.

ಗೋಸಾಯಿ ಮಠದ ಪರಂಪರೆ ರಾಷ್ಟ್ರದಲ್ಲಿಯೇ ಅತ್ಯಂತ ಶ್ರೇಷ್ಠವಾಗಿದೆ. ಈ ಸಮುದಾಯಕ್ಕೆ ಭವಾನಿ ಮಾತೆಯ ಆಶೀರ್ವಾದವಿದೆ. ಶಿವಾಜಿ ಮಹಾರಾಜರು ವಿಂಧ್ಯದಿಂದ  ಕನ್ಯಾಕುಮಾರಿವರೆಗೂ ಸಾಮ್ರಾಜ್ಯ ವಿಸ್ತರಣೆ ಮಾಡಿದರು. ಆದರೂ ಸ್ಥಳೀಯ ನಾಯಕರಿಗೆ ಆದ್ಯತೆ ನೀಡಿದರು. ಒಂದು ಸಾಮ್ರಾಜ್ಯದಲ್ಲಿ ಎಷ್ಟು ಜನರಿದ್ದಾರೆ ಎನ್ನುವುದಕ್ಕಿಂತ ಎದ್ದವರ ಆತ್ಮಸ್ಥೈರ್ಯ ಮುಖ್ಯ ಎನ್ನುವುದನ್ನು ಶಿವಾಜಿ ಮಹಾರಾಜರು ಬೃಹತ್ ಮುಘಲ್ ಸಾಮ್ರಾಜ್ಯವನ್ನು ಎದುರಿಸುವ ಮೂಲಕ ತೋರಿಸಿ ಕೊಟ್ಟಿದ್ದಾರೆ ಎಂದರು.

ಶಿವಾಜಿ ಮಹಾರಾಜರು  ಯೋಜನಾಬದ್ಧ, ನಿರ್ದಿಷ್ಟ ಗುರಿ ಇಟ್ಟುಕೊಂಡು ಕಾರ್ಯಪ್ರವೃತ್ತರಾಗುತ್ತಿದ್ದರು. ಅಂತಹ ಪರಂಪರೆಗೆ ಮರಾಠರು ಸೇರಿದ್ದಾರೆ. ಶಿವಾಜಿ ಮಹಾರಾಜರ ಆದರ್ಶಗಳಂತೆ ಪ್ರಜಾಪ್ರಭುತ್ವದಲ್ಲಿ ಆಡಳಿತವನ್ನು ಪ್ರಧಾನಿ ನರೇಂದ್ರ ಮೋದಿಯವರು ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಭಾಷೆ, ಸೇರಿದಂತೆ ನಾನಾ ವೈಚಾರಿಕತೆಗಳ ವಿಚಿತ್ರ ಶಕ್ತಿಗಳು ದೇಶ ಒಡೆಯುವ ಕೆಲಸ ಮಾಡುತ್ತಿವೆ. ಅವುಗಳನ್ನು ಕೇಂದ್ರ ಸರ್ಕಾರ, ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರು ನಿಯಂತ್ರಣ ಮಾಡುತ್ತಿದ್ದಾರೆ. ಈ ದೇಶದಲ್ಲಿ ಪ್ರತಿಯೊಬ್ಬ ಪ್ರಜೆಗೆ ತನ್ನ ದೇಶದ ಬಗ್ಗೆ ಹೆಮ್ಮೆ ಪಡುವಂತೆ ನರೇಂದ್ರ ಮೋದಿಯವರು ಆಡಳಿತ ಮಾಡುತ್ತಿದ್ದಾರೆ ಎಂದು ಸಿಎಂ ಬೊಮ್ಮಾಯಿ‌ ಹೇಳಿದರು.

ಆಳವಾಗಿ ಅಧ್ಯಯನ ಮಾಡಿ ಅದಕ್ಕೆ ತಾತ್ವಿಕ ಸ್ವರೂಪ ಕೊಟ್ಟು ಮಾರ್ಗದರ್ಶನ ಮಾಡುವ ಶಕ್ತಿ ಹೊಂದಿರುವ ಗೋಸಾಯಿ ಮಠದ ಶ್ರೀ ಮಂಜುನಾಥ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಮರಾಠಾ ಸಮುದಾಯ ನಡೆಯುತ್ತಿದೆ.‌ ನಾಡಿನ ಹಿತದೃಷ್ಟಿಯಿಂದ ಅವರು ಕೈಗೊಳ್ಳುವ ನಿರ್ಣಯಗಳಿಗೆ ಬೆಂಬಲ ನೀಡಲು ತಾವು ಬದ್ಧ ಎಂದರು.

ದಸರಾ ದುಷ್ಟ ಶಕ್ತಿಗಳ ವಿರುದ್ಧ ನಡೆಯುವ ಹಬ್ಬ. ದೇಶದಲ್ಲಿ  ದಸರಾ ಹಬ್ಬವನ್ನು ನಾನಾ ವಿಧಾನಗಳಲ್ಲಿ ಆಚರಿಸಲಾಗುತ್ತಿದೆ. ದುಷ್ಟರ ನಾಶ, ಶಿಷ್ಟರ ರಕ್ಷಣೆಯೇ ಈ ಹಬ್ಬದ ಸಂಕೇತ. ನಮ್ಮಲ್ಲಿರುವ ದುಷ್ಟ ವಿಚಾರಗಳನ್ನು ನಿಗ್ರಹಿಸುವ ಸಂಕಲ್ಪವನ್ನು ಈ ದಿನ ಪ್ರತಿಯೊಬ್ಬರೂ ಮಾಡಬೇಕಿದೆ ಎಂದರು.

 ಗೋಸಾಯಿ ಮಠದ ಶ್ರೀ ಮಂಜುನಾಥ ಸ್ವಾಮೀಜಿ, ಸಂಸದ ತೇಜಸ್ವಿ ಸೂರ್ಯ, ಮರಾಠಾ ಸಮಾಜದ ಮುಖಂಡರು ಹಾಗೂ ಇತರ ಗಣ್ಯರು ಹಾಜರಿದ್ದರು.

ಮೈಸೂರಿಗೆ ಆಗಮಿಸಿದ ಸೋನಿಯಾ ಗಾಂಧಿ; 2 ದಿನ ರಾಜ್ಯದಲ್ಲೇ ವಾಸ್ತವ್ಯ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button