*ನನ್ನ ವಿರುದ್ಧ ಸ್ಟಿಂಗ್ ಆಪರೇಶನ್ ಮಾಡಲು ಯತ್ನಿಸಿದ್ದರು: ಹೊಸ ಬಾಂಬ್ ಸಿಡಿಸಿದ ಸಿಎಂ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: ಸಚಿವರನ್ನು ಗುರಿಯಾಗಿಸಿಕೊಂಡು ಸ್ಟಿಂಗ್ ಆಪರೇಷನ್ ನಡೆಸಲಾಗುತ್ತಿದೆ. ಬಿಜೆಪಿ-ಜೆಡೊಎಸ್ ನಾಯಕರು ಏಜೆನ್ಸಿ ಮೂಲಕ ಟ್ರ್ಯಾಪ್ ಮಾಡುತ್ತಿದ್ದಾರೆ. ಹಾಗಾಗಿ ಸಚಿವರು ಹುಷಾಅರಾಗಿರಿ ಎಂದು ಎಚ್ಚರಿಸಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಇದೀಗ ತಮ್ಮ ವಿರುದ್ಧವೇ ಸ್ಟಿಂಗ್ ಆಪರೇಷನ್ ನಡೆಸಲು ಸಂಚು ರೂಪಿಸಲಾಗಿತ್ತು ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ
ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್, ನನ್ನ ಬಳಿಗೂ ಕೆಲವರು ಜಿಎಸ್‌ಟಿ ಇತ್ಯಾದಿ ಬೇರೆ ಬೇರೆ ವಿಚಾರಗಳನ್ನು ಮಾತನಾಡಲು ಬಂದಿದ್ದರು. ನನ್ನಿಂದಲೇ ಈ ಸ್ಟಿಂಗ್ ಆಪರೇಷನ್ ಆರಂಭಿಸಲು ಯತ್ನಿಸಿದ್ದರು ಎಂದು ತಿಳಿಸಿದರು.
ನನಗೆ ಅವರ ಮೇಲೆ ಮುಂಚಿತವಾಗಿಯೇ ಅನುಮಾನ ಬಂದ ಹಿನ್ನೆಲೆಯಲ್ಲಿ, ಪೊಲೀಸರ ಮೂಲಕ ಸಂಪೂರ್ಣ ಮಾಹಿತಿ ಪಡೆದು ಎಲ್ಲಾ ದಾಖಲೆಗಳು ಹಾಗೂ ಫೋಟೋಗಳನ್ನು ಸಿದ್ಧಪಡಿಸಿ ಇಟ್ಟುಕೊಂಡಿದ್ದೇನೆ. ಅಗತ್ಯಬಿದ್ದರೆ ಫೋಟೋಗಳನ್ನು ಬಿಡುಗಡೆ ಮಾಡುತ್ತೇನೆ. ಈ ಷಡ್ಯಂತ್ರದ ಹಿಂದೆ ಯಾರ್ಯಾರಿದ್ದಾರೆ, ಯಾರು ಇದಕ್ಕೆ ಹಣಕಾಸು ಒದಗಿಸುತ್ತಿದ್ದಾರೆ ಇದರ ಪಿತಾಮಹ ಯಾರು ಎಂಬುದು ನನಗೆ ಸ್ಪಷ್ಟವಾಗಿ ತಿಳಿದಿದೆ. ಕುಂಬಳಕಾಯಿ ಕಳ್ಳ ಅಂದರೆ ಕೆಲವರು ಹೆಗಲು ಮುಟ್ಟುಕೊಳ್ತಿದ್ದಾರೆ ಎಂದು ಹೇಳಿದರು.
ಈ ಹಿಂದೆ 2000ರ ಆಸುಪಾಸಿನಲ್ಲೂ ನನ್ನ ವಿರುದ್ಧ ಇಂತಹ ಷಡ್ಯಂತ್ರಗಳು ನಡೆದಿದ್ದವು. ಸುಖಾಸುಮ್ಮನೆ ಟ್ರಾಪ್ ಮಾಡಲು ಜನರು ಬರುತ್ತಾರೆ, ಎಚ್ಚರಿಕೆಯಿಂದ ಇರಿ ಎಂದು ನಮ್ಮ ಅಧಿಕಾರಿಗಳಿಗೆ, ಸಚಿವರಿಗೆ ಸೂಚನೆ ನೀಡಿದ್ದೇನೆ. ಇದರಲ್ಲಿ ಕರ್ನಾಟಕದವರೇ ಇದ್ದಾರಾ ಅಥವಾ ಹೊರರಾಜ್ಯದವರಾ ಎಂಬ ವಿವರಗಳನ್ನು ಈಗಲೇ ಬಹಿರಂಗಪಡಿಸುವುದಿಲ್ಲ, ಕಾಲವೇ ಎಲ್ಲದಕ್ಕೂ ತಕ್ಕ ಉತ್ತರ ನೀಡಲಿದೆ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




