*2028ರಲ್ಲೂ ಕಾಂಗ್ರೆಸ್ ಸರ್ಕಾರಕ್ಕೆ ಆಶೀರ್ವಾದ ಮಾಡುವ ಸಂದೇಶ ಕೊಟ್ಟ ಮತದಾರ: ಡಿಸಿಎಂ ಡಿ.ಕೆ. ಶಿವಕುಮಾರ್*

ಪಕ್ಷದ ಕಾರ್ಯಕರ್ತರು, ಮುಖಂಡರು, ಮತದಾರರಿಗೆ ಧನ್ಯವಾದಗಳು
ಕೇರಳದಲ್ಲಿ ನಿರೀಕ್ಷೆಯಂತೆ 2/3 ಬಹುಮತ
ಪ್ರಗತಿವಾಹಿನಿ ಸುದ್ದಿ; “ಕರ್ನಾಟಕದ ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಜನ ನಮ್ಮ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳ ಜತೆಗೆ ದಕ್ಷ ಡಳಿತ ನೀಡುತ್ತಿರುವುದನ್ನು ಗಮನಿಸಿದ್ದಾರೆ. 2028ರಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಬೆಂಬಲ ನೀಡುವ ಸಂದೇಶ ನೀಡಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬಣ್ಣಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಹಾಗೂ ಕನಕಪುರದಲ್ಲಿ ಚುನಾವಣಾ ಫಲಿತಾಂಶ ವಿಚಾರವಾಗಿ ಮಾಧ್ಯಮಗಳಿಗೆ ಶಿವಕುಮಾರ್ ಅವರು ಸೋಮವಾರ ಪ್ರತಿಕ್ರಿಯೆ ನೀಡಿದರು.
“ಕರ್ನಾಟಕ ರಾಜ್ಯದಲ್ಲಿ ನಮ್ಮ ಇಬ್ಬರು ನಾಯಕರ ನಿಧನದಿಂದ ಎರಡು ವಿಧಾನಸಭಾ ಕ್ಷೇತ್ರಗಳು ತೆರವಾಗಿದ್ದವು. ಈ ಎರಡು ಕ್ಷೇತ್ರಗಳ ಜನತೆಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ನಮ್ಮ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪ್ರತಿ ಹಳ್ಳಿಗೆ ಭೇಟಿ ನೀಡಿ ಹಗಲಿರುಳು ಶ್ರಮಿಸಿದ್ದಾರೆ. ಅವರಿಗೂ ನಾನು ಪಕ್ಷ ಹಾಗೂ ಸರ್ಕಾರದ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ” ಎಂದರು.
“ನಮ್ಮ ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಜನ ಬಹಳ ಸಂತೋಷದಿಂದ ತಮ್ಮ ಮನೆಗೆ ಬರ ಮಾಡಿಕೊಂಡಿದ್ದಾರೆ. ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ, ಯುವನಿಧಿ ಯೋಜನೆಗಳಿಂದ ಪ್ರಯೋಜನ ಪಡೆದಿರುವ ಜನ ಚುನಾವಣೆ ಪ್ರಚಾರದ ವೇಳೆ ನಮ್ಮ ಕಾರ್ಯಕರ್ತರನ್ನು ಗೌರವದಿಂದ ನೋಡುತ್ತಿದ್ದಾರೆ. ಈ ಗ್ಯಾರಂಟಿ ಸರ್ಕಾರದ ಕೈ ಬಿಡುವುದಿಲ್ಲ, ಮತ್ತಷ್ಟು ಶಕ್ತಿ ತುಂಬುತ್ತೇವೆ. 2028ಕ್ಕೂ ನಿಮಗೆ ಬೆಂಬಲ ನೀಡುತ್ತೇವೆ ಎಂಬ ಸಂದೇಶ ನೀಡಿದ್ದಾರೆ” ಎಂದು ತಿಳಿಸಿದರು.
“ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ನಾವು ಹೆಚ್ಚಿನ ಅಂತರ ನಿರೀಕ್ಷೆ ಮಾಡಿದ್ದೆವು. ಆದರೂ ಗೆಲ್ಲುತ್ತೇವೆ ಎಂದು ಸಿಎಂ ಹೇಳಿದ್ದಾರೆ. ಕೆಲವು ಕಡೆ ತಾಂತ್ರಿಕ ಸಮಸ್ಯೆಯಿಂದ ಇವಿ ಪ್ಯಾಟ್ ತೆರೆಯುವುದು ಬಾಕಿ ಇದೆ ಎಂದು ನಮಗೆ ಮಾಹಿತಿ ಬಂದಿದೆ. ಇದರಲ್ಲಿ ಸುಮಾರು 1500 ಮತ ಏಣಿಕೆ ಬಾಕಿ ಇದ್ದು, ಪ್ರಸ್ತುತ 4900 ಮತಗಳ ಮುನ್ನಡೆ ಇದ್ದು ನಮ್ಮ ಅಭ್ಯರ್ಥಿ ಗೆಲ್ಲುವುದು ಬಹುತೇಕ ನಿಶ್ಚಿತವಾಗಿದೆ. ಅಧಿಕೃತ ಘೋಷಣೆ ಬಾಕಿ ಇದೆ. ಎಸ್ ಡಿಪಿಐ ಅಭ್ಯರ್ಥಿಗೆ ಸುಮಾರು 19 ಸಾವಿರ ಮತಗಳು ಸಿಕ್ಕಿವೆ. ರಾಜಕಾರಣ ಹಾಗೂ ಚುನಾವಣೆಯಲ್ಲಿ 49 ಶೂನ್ಯಕ್ಕೆ ಸಮ, 51 ನೂರಕ್ಕೆ ಸಮನಾಗುತ್ತದೆ” ಎಂದು ತಿಳಿಸಿದರು.
“ಬಾಗಲಕೋಟೆಯಲ್ಲಿ ನಾವು ಕಳೆದ ಚುನಾವಣೆಯಲ್ಲಿ ಕಡಿಮೆ ಮತಗಳ ಅಂತರದಲ್ಲಿ ಗೆದ್ದಿದ್ದೆವು. ಈ ಉಪಚುನಾವಣೆಯಲ್ಲಿ 22,332 ಮತಗಳ ಅಂತರದಲ್ಲಿ ನಮ್ಮ ಅಭ್ಯರ್ಥಿ ಗೆದ್ದಿದ್ದಾರೆ. ಗ್ರಾಮೀಣ ಭಾಗದಲ್ಲಿ ಮತಯಾಚಿಸುವಾಗ ಪ್ರತಿ ಕುಟುಂಬದವರು ನಮ್ಮ ಕಾರ್ಯಕರ್ತರನ್ನು ಗೌರವಯುತದಿಂದ ಕಂಡು ಸರ್ಕಾರದ ಗ್ಯಾರಂಟಿ ಯೋಜನೆಗಳು ನಮ್ಮ ಬದುಕಿನಲ್ಲಿ ಬದಲಾವಣೆ ತಂದಿವೆ. ಹೀಗಾಗಿ ನಮ್ಮ ಬೆಂಬಲ ಕಾಂಗ್ರೆಸ್ ಪಕ್ಷಕ್ಕೆ ಎಂದು ಭರವಸೆ ನೀಡಿದ್ದರು. ಹೀಗಾಗಿ ಉಪಚುನಾವಣೆಯಲ್ಲಿ ಗೆಲ್ಲುವ ಆತ್ಮವಿಶ್ವಾಸ ಮೂಡಿತ್ತು” ಎಂದು ತಿಳಿಸಿದರು.
ಪಕ್ಷದ ಕಾರ್ಯಕರ್ತರು, ಮುಖಂಡರು, ಮತದಾರರಿಗೆ ಧನ್ಯವಾದಗಳು
“ನಾವು ಎರಡು ಕ್ಷೇತ್ರಗಳ ಉಪಚುನಾವಣೆ ಗೆದ್ದಿದ್ದೇವೆ. ವಿರೋಧ ಪಕ್ಷಗಳು ಎಷ್ಟೇ ಟೀಕೆ ಮಾಡಿದರೂ ಜನ ನಮ್ಮ ಕೈಬಿಡಲಿಲ್ಲ. ನಮ್ಮ ಆತ್ಮವಿಶ್ವಾಸ ಹೆಚ್ಚಿಸಿದ್ದಾರೆ. ಅವರಿಗೆ ಮಾಡುತ್ತಿರುವ ಸೇವೆಯನ್ನು ಮುಂದುವರಿಸುವ ಸಂದೇಶ ನೀಡಿದ್ದಾರೆ. ಸಿಎ ಸಿದ್ದರಾಮಯ್ಯ, ಸಂಪುಟ ಸಹೋದ್ಯೋಗಿಗಳು, ಶಾಸಕರು, ಪಕ್ಷದ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು, ಬ್ಲಾಕ್ ಅಧ್ಯಕ್ಷರುಗಳು ಹಗಲಿರುಳು ದುಡಿದಿದ್ದಾರೆ. ನಮ್ಮ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಬಗ್ಗೆ ಮಾಹಿತಿ ಪಡೆಯಲಾಗಿದೆ. ಎಲ್ಲಾ ವರ್ಗ ಹಾಗೂ ಎಲ್ಲಾ ಸಮಾಜದ ಜನ ನಮಗೆ ಬೆಂಬಲ ನೀಡಿದ್ದಾರೆ. ದಾವಣಗೆರೆಯಲ್ಲಿ 20% ಮತ ಕಡಿಮೆಯಾಗಿದ್ದರೂ ಎಲ್ಲಾ ವರ್ಗದ ಜನ ನಮಗೆ ಶಕ್ತಿ ತುಂಬಿದ್ದಾರೆ. ಮುಖ್ಯಮಂತ್ರಿಗಳ ನಾಯಕತ್ವ, ಕಾಂಗ್ರೆಸ್ ಪಕ್ಷದ ಮುಖಂಡತ್ವಕ್ಕೆ ಬೆಂಬಲ ವ್ಯಕ್ತಪಡಿಸಿರುವ ಎಲ್ಲರಿಗೂ ಕೃತಜ್ಞತೆ ಅರ್ಪಿಸುತ್ತೇನೆ” ಎಂದು ತಿಳಿಸಿದರು.
ಪಕ್ಷದ ಕೆಲವು ನಾಯಕರು ಬೇರೆ ಅಭ್ಯರ್ಥಿಗೆ ಬೆಂಬಲ ನೀಡಿದ್ದಾರೆ ಎಂದು ಹೇಳಿಕೆ ನೀಡಲಾಗುತ್ತಿತ್ತು. ಈ ಮಧ್ಯೆ ನಿಮ್ಮ ಅಭ್ಯರ್ಥಿ ಗೆದ್ದಿರುವುದು ಹೇಗೆ ಎಂದು ಕೇಳಿದಾಗ, “ಚುನಾವಣೆಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದ್ದಾರೆ. ಈ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಗೆದ್ದಿದ್ದಾರೆ. ಇದರ ಹೊರತಾಗಿ ಬೇರೆ ವಿಚಾರವನ್ನು ಮಾಧ್ಯಮಗಳ ಮುಂದೆ ಚರ್ಚೆ ಮಾಡುವುದಿಲ್ಲ. ಇತರ ವಿಚಾರವಾಗಿ ತಿದ್ದುವುದು, ಮಾರ್ಗದರ್ಶನ ನೀಡುವ ಕೆಲಸವನ್ನು ಪಕ್ಷದ ವ್ಯಾಪ್ತಿಯಲ್ಲಿ ಮಾಡುತ್ತೇವೆ” ಎಂದರು.
ದಾವಣಗೆರೆ ಫಲಿತಾಂಶದಲ್ಲಿ ಒಳ ಏಟು ಬಿದ್ದಿದೆ ಎಂದು ಅನಿಸುತ್ತದೆಯೇ ಎಂದು ಕೇಳಿದಾಗ, “1995ರಿಂದ ಶಾಮನೂರು ಶಿವಶಂಕರಪ್ಪ ಅವರು ಆ ಕ್ಷೇತ್ರ ಉಳಿಸಿಕೊಂಡು ಬಂದಿದ್ದರು. ಅಲ್ಪಸಂಖ್ಯಾತ ನಾಯಕರು ನಮಗೆ ಸಹಕಾರ ನೀಡುತ್ತಾ ಬಂದಿದ್ದಾರೆ. ಅವರಿಗೆ ಸ್ಥಾನಮಾನ ನೀಡಲು ಮೂರು ಬಾರಿ ವಿಧಾನ ಪರಿಷತ್ ಸ್ಥಾನ ನೀಡಿ ಗೌರವ ನೀಡಿದ್ದೇವೆ. ವ್ಯಕ್ತಿಗಳಲ್ಲಿ ಅಭಿಪ್ರಾಯ ಬೇರೆ ಇದ್ದರೂ ಪಕ್ಷದಲ್ಲಿ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ” ಎಂದರು.
ಮತ ಪ್ರಮಾಣ ಕಡಿಮೆಯಾಗಿರುವ ಬಗ್ಗೆ ಪರಾಮರ್ಶೆ ಮಾಡುತ್ತೀರಾ ಎಂದು ಕೇಳಿದಾಗ, “ಈಗ ಆ ಚರ್ಚೆ ಬೇಡ ಸಮಯ ಬಂದಾಗ ನೋಡೋಣ” ಎಂದರು.
ದಾವಣಗೆರೆ ದಕ್ಷಿಣದಲ್ಲಿ ಶಿವಶಂಕರಪ್ಪ ಅವರು ಪಡೆದ ಮುನ್ನಡೆ ಈಗ ಬರಲಿಲ್ಲ ಎಂದು ಕೇಳಿದಾಗ, “ಒಂದೊಂದು ಚುನಾವಣೆ ಒಂದೊಂದು ರೀತಿ ನಡೆಯುತ್ತದೆ. ಬಾಗಲಕೋಟೆಯಲ್ಲಿ 5ಸಾವಿರ ಇದ್ದ ಅಂತರ ಈಗ 22 ಸಾವಿರಕ್ಕೆ ಏರಿಕೆಯಾಗಿದೆಯಲ್ಲ ಅದಕ್ಕೆ ಏನು ಹೇಳುತ್ತೀರಾ? ಅಲ್ಲಿ ಒಗ್ಗಟ್ಟಿನಲ್ಲಿ ಕೆಲಸ ಮಾಡಿರುವಂತೆ ಇಲ್ಲೂ ಒಗ್ಗಟ್ಟಿನಲ್ಲಿ ಕೆಲಸ ಮಾಡಿದ್ದಾರೆ” ಎಂದರು.
ದಾವಣಗೆರೆಯಲ್ಲಿ ಇನ್ನು ಸ್ವಲ್ಪ ಮುನ್ನಡೆ ಬರಬಹುದಿತ್ತು ಎಂದು ಕೇಳಿದಾಗ, “ಸ್ವಲ್ಪ ಮತಗಳು ಎಸ್ ಡಿಪಿಐ ಅಭ್ಯರ್ಥಿಗೆ ಹೋದ ಕಾರಣ ಗೆಲುವಿನ ಅಂತರ ಕಡಿಮೆಯಾಗಿದೆ. ಮುಂದೆ ಈ ರೀತಿ ಆಗದಂತೆ ದಾಗ್ರತೆ ವಹಿಸುತ್ತೇವೆ” ಎಂದರು.
ದಾವಣಗೆರೆ ಉಪಚುನಾವಣೆಗೆ ಸಂಬಂಧಿಸಿದಂತೆ ಜರುಗಿಸಲಾಗಿರುವ ಶಿಸ್ತು ಕ್ರಮ ಹಿಂಪಡೆಯುತ್ತೀರಾ ಎಂದು ಕೇಳಿದಾಗ, “ಇದು ಪಕ್ಷದ ಆಂತರಿಕ ವಿಚಾರ. ಕೆಲವರು ರಾಜಕಾರಣದಲ್ಲಿ ಒಬ್ಬರಿಗೊಬ್ಬರು ತ್ಯಾಗ ಮಾಡಬೇಕಾಗುತ್ತದೆ” ಎಂದರು.
ದಾವಣಗೆರೆ ಫಲಿತಾಂಶ ಬರುವ ಮುನ್ನವೇ ಕ್ರಮಕೈಗೊಂಡಿದ್ದು ಆತುರವಾಗಲಿಲ್ಲವೇ ಎಂದು ಕೇಳಿದಾಗ, “ಪಕ್ಷವು ತನಗೆ ಮಾಹಿತಿ ತಿಳಿದ ನಂತರ ಯಾವ ಸಮಯಕ್ಕೆ ಯಾವ ನಿರ್ಧಾರ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಂಡಿದೆ. ಸಾಕ್ಷಿ ಸಮೇತ ಮಾಹಿತಿ ರವಾನೆಯಾಗಿದ್ದು, ಈ ವಿಚಾರವಾಗಿ ಮುಖ್ಯಮಂತ್ರಿಗಳು, ಹೈಕಮಾಂಡ್ ನಾಯಕರು, ನಮಗೆ ಹಾಗೂ ಅದನ್ನು ಮಾಡಿದವರಿಗೂ ಗೊತ್ತಿತ್ತು” ಎಂದು ಹೇಳಿದರು.
ಕೇರಳದಲ್ಲಿ ನಿರೀಕ್ಷೆಯಂತೆ 2/3 ಬಹುಮತ
“ಕೇರಳದಲ್ಲಿ ಬಹುದೊಡ್ಡ ಅಂತರದಿಂದ ಯುಡಿಎಫ್ ಸರ್ಕಾರವನ್ನು ಜನ ಅಧಿಕಾರಕ್ಕೆ ತಂದಿದ್ದಾರೆ. ಎಲ್ ಡಿಎಫ್ ಹಾಗೂ ಬಿಜೆಪಿ ಒಳ ಒಪ್ಪಂದ ಮಾಡಿಕೊಂಡರೂ ಜನ ನಮಗೆ ಆಶೀರ್ವಾದ ಮಾಡಿದ್ದಾರೆ. ತಮಿಳುನಾಡಿನಲ್ಲಿ ಡಿಎಂಕೆ ಸೋತಿದ್ದರೂ ಬಿಜೆಪಿ ಅಂಗಪಕ್ಷವನ್ನು ಜನ ಸೋಲಿಸಿದ್ದಾರೆ. ಆಮೂಲಕ ಕೋಮುವಾದಿ ಶಕ್ತಿಯನ್ನು ದೂರವಿಟ್ಟಿದ್ದಾರೆ. ಹೀಗಾಗಿ ಅಲ್ಲಿನ ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ” ಎಂದರು.
ಕೇರಳದಲ್ಲಿ ಇಷ್ಟು ದೊಡ್ಡ ಬಹುಮತ ಬರುವ ವಿಶ್ವಾಸವಿತ್ತೆ ಎಂದು ಕೇಳಿದಾಗ, “ಖಂಡಿತ, ನಾನು ಕೇರಳ ಚುನಾವಣೆ ಪ್ರಚಾರದ ವೇಳೆ ನನ್ನ ಹೇಳಿಕೆ ಗಮಿನಿಸಿ. ನಾವು ಮೂರನೇ ಎರಡರಷ್ಟು ಬಹುಮತದೊಂದಿಗೆ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದ್ದೆ. ಕೇರಳದಲ್ಲಿ ಎಲ್ಲಾ ನಾಯಕರು ಒಗ್ಗಟ್ಟಾಗೊ ಕೆಲಸ ಮಾಡಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಕೇರಳದ ಕಾರ್ಯಕರ್ತರು ಹಾಗೂ ಮತದಾರರಿಗೆ ಧನ್ಯವಾದ ಅರ್ಪಿಸುತ್ತೇನೆ. ದಕ್ಷಿಣ ಭಾರತದಲ್ಲಿ ಜನ ಬಿಜೆಪಿಯನ್ನು ಸಂಪೂರ್ಣವಾಗಿ ಕಿತ್ತೊಗೆದು ಸಂದೇಶ ರವಾನಿಸಲಾಗಿದೆ” ಎಂದು ತಿಳಿಸಿದರು.
ಟಿವಿಕೆ ಜೊತೆ ಮಾತುಕತೆ ನಡೆಸಲು ನೀವು ಹೋಗುತ್ತೀರಾ ಎಂದು ಕೇಳಿದಾಗ, “ಪಕ್ಷ ಎಷ್ಟು ಹೇಳುತ್ತದೋ ಅಷ್ಟು ಕೆಲಸ ಮಾಡಿಕೊಂಡಿರುವವನು ನಾನು. ಉಳಿದ ವಿಚಾರದ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನನಗೆ ಪಕ್ಷ ಹೇಳಿದ ಕೆಲಸ ಮಾಡುತ್ತೇನೆ” ಎಂದು ತಿಳಿಸಿದರು.
ಬಿಜೆಪಿಯಿಂದ ಅಧಿಕಾರ ದುರುಪಯೋಗ
ಕೆಪಿಸಿಸಿ ಅಧ್ಯಕ್ಷರಾಗಿ ಪಂಚರಾಜ್ಯ ಚುನಾವಣೆಯನ್ನು ಹೇಗೆ ವ್ಯಾಖ್ಯಾನ ಮಾಡುತ್ತೀರಿ ಎಂದು ಕೇಳಿದಾಗ, “ಜನರಿಗೆ ಭಾವನೆ ಮೇಲೆ ರಾಜಕಾರಣ ಮಾಡಬೇಕು. ಇನ್ನು ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ದುರುಪಯೋಗ ಮಾಡಿಕೊಂಡಿದೆ. ವಿಶೇಷವಾಗಿ ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ತಮಿಳುನಾಡಿನಲ್ಲಿ ದೊಡ್ಡಮಟ್ಟದಲ್ಲಿ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. 2.50 ಲಕ್ಷ ಕೇಂದ್ರ ಸಶಸ್ತ್ರ ಮೀಸಲು ಪಡೆ ಸಿಬ್ಬಂದಿ ನಿಯೋಜಿಸಿ 96 ಲಕ್ಷ ಮತದಾರರನ್ನು ಮತಪಟ್ಟಿಯಿಂದ ತೆಗೆದುಹಾಕಿ ಚುನಾವಣೆ ಮಾಡಿದ್ದಾರೆ” ಎಂದು ತಿಳಿಸಿದರು.
ಅಸ್ಸಾಂ ಚುನಾವಣೆ ಬಗ್ಗೆ ನೀವು ಬಹಳಷ್ಟು ಭರವಸೆ ಹೊಂದಿದ್ದಿರಿ ಎಂದಾಗ, “ರಾಜಕಾರಣಿಯಾಗಿ ನಾನು ಭರವಸೆಯಿಂದಲೇ ಬದುಕಬೇಕು” ಎಂದರು.
ವಿಜಯ್ ಅವರಿಗೆ ರಾಜಕೀಯ ಅನುಭವವಿಲ್ಲ ಎಂಬ ನಿಮ್ಮ ಹೇಳಿಕೆ ವೈರಲ್ ಆಗುತ್ತಿದೆ ಎಂಬ ನಿಮ್ಮ ಹೇಳಿಕೆ ಈಗ ವೈರಲ್ ಆಗುತ್ತಿದೆ ಎಂದು ಕೇಳಿದಾಗ, “ಅವರು ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಪಕ್ಷದ ಬೆಂಬಲ ನಮಗಿದೆ ಎಂದಿದ್ದರು. ನಾವು ಅವರಿಗೆ ಎಲ್ಲಿ ಬೆಂಬಲ ನೀಡಿದ್ದೆವು? ಆ ವಿಚಾರವಾಗಿ ನಾನು ಆ ಮಾತು ಹೇಳಿದ್ದೆ. ನಾವು ಈಗಾಗಲೇ ಒಂದು ಪಕ್ಷದ ಜತೆ ಮೈತ್ರಿ ಮಾಡಿಕೊಂಡಿರುವಾಗ ಹೇಗೆ ಆ ರೀತಿ ಮಾಡಲು ಸಾಧ್ಯ? ಒಂದು ಪಕ್ಷದ ಜತೆ ಅರ್ಧ, ಮತ್ತೊಂದು ಪಕ್ಷದ ಜತೆ ಅರ್ಧ ಮೈತ್ರಿ ಮಾಡಲು ಆಗುವುದಿಲ್ಲ” ಎಂದರು.
ತಮಿಳುನಾಡಿನಲ್ಲಿ ಟಿವಿಕೆ ಬಹುಮತಕ್ಕೆ ಬೆಂಬಲದ ಅಗತ್ಯವಿದ್ದು ಕಾಂಗ್ರೆಸ್ ಬೆಂಬಲ ನೀಡುವುದೇ ಎಂದು ಕೇಳಿದಾಗ, “ನಮ್ಮ ಪಕ್ಷ ಏನು ತೀರ್ಮಾನ ಮಾಡುತ್ತದೋ ಗೊತ್ತಿಲ್ಲ. ನಾನು ಅದರ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಬಿಜೆಪಿ ಹಾಗೂ ಅದರ ಮೈತ್ರಿಯನ್ನು ದೂರವಿಡುವುದು ನಮ್ಮ ಗುರಿ” ಎಂದರು.
ನೀವು ಪ್ರಚಾರ ಮಾಡಿದ ಕಡೆ ಸೋಲಾಗಿದೆ ಎಂಬ ಬಿಜೆಪಿ ನಾಯಕರ ಟೀಕೆ ಬಗ್ಗೆ ಕೇಳಿದಾಗ, “ಬಿಜೆಪಿ ನಾಯಕರು ಬಾಗಲಕೋಟೆ, ದಾವಣಗೆರೆ ದಕ್ಷಿಣಕ್ಕೆ ಹೋಗಿದ್ದರು. ಅಲ್ಲಿ ಯಾಕೆ ಅವರು ಗೆಲ್ಲಲಿಲ್ಲ. ನೀವು ಅವರನ್ನು ತೋರಿಸುತ್ತೀರಿ ಎಂಬ ಕಾರಣಕ್ಕೆ ಅವರು ಏನೋ ಟೀಕೆ ಮಾಡಿ ಮಾತನಾಡುತ್ತಾರೆ” ಎಂದು ತಿಳಿಸಿದರು.

