Kannada NewsKarnataka NewsLatestPolitics

*ಪತಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾದ ಬಿಜೆಪಿ ಮುಖಂಡನ ಪತ್ನಿ*

ಎರಡು ಮದುವೆಯಾಗಿದ್ದರೂ ಮೂರನೆಯವಳೊಂದಿಗೆ ಅನೈತಿಕ ಸಂಬಂಧ

ಪ್ರಗತಿವಾಹಿನಿ ಸುದ್ದಿ: ಪತಿಯ ಅನೈತಿಕ ಸಂಬಂಧ ಹಾಗೂ ದೈಹಿಕ-ಮಾನಸಿಕ ಹಿಂಸೆಯಿಂದ ಬೇಸತ್ತ ಬಿಜೆಪಿ ಮುಖಂಡನ ಪತ್ನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಶಿವಮೊಗ್ಗ ಜಿಲ್ಲೆಯ ಸೊರಬ ಪಟ್ಟಣದ ಕಾನುಕೇರಿ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಹೊಸವೀರಾಪುರ ಗ್ರಾಮದ ಮಂಜುಳಾ (38) ಆತ್ಮಹತ್ಯೆಗೆ ಶರಣಾದವರು.

ಈ ಬಗ್ಗೆ ಮೃತಳ ತಾಯಿ ಸೊರಬ ಪೋಲೀಸರಿಗೆ ದೂರು ನೀಡಿದ್ದು, ಪತಿ ಬಿಜೆಪಿ ಮುಖಂಡ ಪ್ರಭು ಮೇಸ್ತ್ರಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಪ್ರಭು ಮೇಸ್ತ್ರಿಯ ಹಲವು ವಿಚಾರಗಳು ಬೆಳಕಿಗೆ ಬಂದಿವೆ.

ಪ್ರಭು ಮೇಸ್ತ್ರಿ ಸೊರಬ ಪುರಸಭೆಯ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ. ಪ್ರಭು ಮೇಸ್ತ್ರಿ ನಡೆಯಿಂದ ಪತ್ನಿ ಮಂಜುಳಾ ತೀವ್ರವಾಗಿ ಮನನೊಂದಿದ್ದರು. ಪ್ರಭು ಮೇಸ್ತ್ರಿ ತನ್ನ ಹಾರ್ಡ್‌ವೇರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎಂಬ ಆರೋಪವಿದೆ. ಈ ಸಂಬಂಧವನ್ನು ಬಿಟ್ಟುಬಿಡುವಂತೆ ಹಿರಿಯರು ಮತ್ತು ಸಂಬಂಧಿಕರು ಹಲವು ಬಾರಿ ಬುದ್ಧಿಮಾತು ಹೇಳಿದ್ದರೂ, ಪ್ರಭು ಅದನ್ನು ಮುಂದುವರಿಸಿದ್ದ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಇದೇ ವಿಚಾರವಾಗಿ ಪತ್ನಿ ಮಂಜುಳಾ ಅವರಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದ.

ಪ್ರಭು ಮೇಸ್ತ್ರಿ ಈ ಮೊದಲು ಕೇರಳ ಮೂಲದ ಮಹಿಳೆಯನ್ನು ವಿವಾಹವಾಗಿದ್ದು, ಆಕೆಯನ್ನು ತೊರೆದಿದ್ದ. ನಂತರ ಮಂಜುಳಾ ಅವರೊಂದಿಗೆ ಎರಡನೇ ಮದುವೆಯಾಗಿದ್ದ. ಮೊದಲ ಪತ್ನಿ ಪತಿಯನ್ನು ಬಿಟ್ಟು ತವರಿಗೆ ತೆರಳಿದ್ದರೆ, ಎರಡನೇ ಪತ್ನಿ ಮಂಜುಳಾ ಮನೆಯ ಹಿಂಭಾಗದ ಮರದ ತೊಲೆಗೆ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾರೆ. ಪ್ರಭು ಮೇಸ್ತ್ರಿ ಈ ಹಿಂದೆ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಬಣದಲ್ಲಿ ಗುರುತಿಸಿಕೊಂಡಿದ್ದ. ಮೃತಳ ತಾಯಿ ಶೋಭಾ ನೀಡಿದ ದೂರಿನ ಮೇರೆಗೆ ಸೊರಬ ಪೊಲೀಸರು ಸದ್ಯ ಪ್ರಭು ಮೇಸ್ತ್ರಿಯನ್ನು ಬಂಧಿಸಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button