Kannada NewsKarnataka NewsLatestPolitics

*ನಿಷ್ಠೆಯಿಂದ ಕೆಲಸ ಮಾಡಿದರೆ ಅಧಿಕಾರ ಮನೆ ಬಾಗಿಲಿಗೆ ಬರುತ್ತದೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ನಿಷ್ಠೆಯಿಂದ ಕೆಲಸ ಮಾಡಿದರೆ ಅಧಿಕಾರ ಮನೆ ಬಾಗಿಲಿಗೆ ಬರಲಿದೆ. ಇದಕ್ಕೆ ನಾನೇ ಉತ್ತಮ ಉದಾಹರಣೆ, ಮಹಿಳೆಯರು ಗುರಿ ಇಟ್ಟುಕೊಂಡು ರಾಜಕಾರಣಕ್ಕೆ ಬರಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದರು.

ಬೆಂಗಳೂರಿನ ಖಾಸಗಿ ಹೋಟೆಲ್‌ ನಲ್ಲಿ ಕರ್ನಾಟಕ ರಾಜ್ಯ ಮಹಿಳಾ ಕಾಂಗ್ರೆಸ್ ವತಿಯಿಂದ ಮಹಿಳಾ ಸಬಲೀಕರಣ ಹಾಗೂ ಸರ್ವತೋಮುಖ ಅಭಿವೃದ್ಧಿಗಾಗಿ ನಡೆಯುತ್ತಿರುವ ಮಹಿಳಾ ಸಬಲೀಕರಣ ಕಾರ್ಯಗಾರದಲ್ಲಿ ಮಾತನಾಡಿದ ಸಚಿವರು, ಬೂತ್‌ಮಟ್ಟದಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಬಿಜೆಪಿಯಲ್ಲಿ ಆರ್.ಎಸ್.ಎಸ್ ಯಾವುದೇ ಫಲಾಪೇಕ್ಷೆ ಇಲ್ಲದೆ ಕೆಲಸ ಮಾಡುತ್ತಿದೆ, ಅದೇ ರೀತಿ ಮಹಿಳಾ ಕಾಂಗ್ರೆಸ್ ಘಟಕ ಕೂಡ ಪಕ್ಷದಲ್ಲಿ ಕೆಲಸ ಮಾಡುತ್ತಿದೆ. ಉತ್ತಮ ಕೆಲಸ ಮಾಡಿದರೆ ಅಧಿಕಾರ ನಮ್ಮನ್ನು ಹುಡುಕಿಕೊಂಡು ಬರುತ್ತದೆ. ಮುಂಬರುವ ಗ್ರಾಮ, ತಾಲೂಕು, ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಎಲ್ಲಾ ವರ್ಗದವರನ್ನು ಗುರುತಿಸಿ ಟಿಕೆಟ್ ನೀಡಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದರು.

ಸಂಘಟನೆಯಲ್ಲಿ ಒತ್ತು ನೀಡುವವರನ್ನು, ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಕ್ಕೆ ಬದ್ದರಾಗಿರುವವರನ್ನು ಗುರುತಿಸಬೇಕು. ನಿಮ್ಮ ಅಕ್ಕಪಕ್ಕದ ಮನೆಯವರ ಮನಸ್ಸನ್ನು ಗೆದ್ದು, ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಮಾಡಬೇಕು. ನಿಸ್ವಾರ್ಥದಿಂದ ಪಕ್ಷದಲ್ಲಿ ಕೆಲಸ ಮಾಡಬೇಕು ಎಂದರು.

ಈ ವೇಳೆ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್‌, ರಾಷ್ಟ್ರೀಯ ‌ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಅಲ್ಕಾ ಲಾಂಬಾ, ಕರ್ನಾಟಕ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಸೌಮ್ಯಾ ರೆಡ್ಡಿ, ಮಹಿಳಾ ಕಾಂಗ್ರೆಸ್ ಕರ್ನಾಟಕ ಉಸ್ತುವಾರಿ ಸೋಫಿಯಾ ಜುಬೇರಾ, ಪ್ರಧಾನ ಕಾರ್ಯದರ್ಶಿ ಸೆವಾ ಸೆಲ್ವಾನ್, ಶಾಸಕರಾದ ಮಂಥರ್ ಗೌಡ, ನಯನ ಮೋಟಮ್ಮ, ಮಾಜಿ ಸಚಿವರಾದ ರಾಣಿ ಸತೀಶ್ ‌ಸೇರಿದಂತೆ ಮಹಿಳಾ ಕಾಂಗ್ರೆಸ್ ವಿಭಾಗದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button