Karnataka NewsLatestNational

*BREAKING: ನಾಪತ್ತೆಯಾಗಿದ್ದ KRIDL ಎಇಇ ಪರ್ವೀಜ್ ಪತ್ತೆ*

ಪ್ರಗತಿವಾಹಿನಿ ಸುದ್ದಿ: ನಾಪತ್ತೆಯಾಗಿದ್ದ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (KRIDL) ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪರ್ವೀಜ್ ಧಾರವಾಡ ಪತ್ತೆಯಾಗಿದ್ದಾರೆ.

ಗದಗ ಜಿಲ್ಲೆಯ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿದ್ದ ಪರ್ವೀಜ್ ಕಳೆದ ಒಂದು ತಿಂಗಳಿಂದ ನಾಪತ್ತೆಯಾಗಿದ್ದರು. ಅವರ ಪತ್ತೆಗಾಗಿ ಪೊಲೀಸರ ವಿಶೇಷ ತಂಡ ರಚಿಸಲಾಗಿತ್ತು.

ಇದೀಗ ಗದಗ ಪೊಲೀಸರು ಅವರನ್ನು ಮಹಾರಾಷ್ಟ್ರದ ಮುಂಬೈನಲ್ಲಿ ಪತ್ತೆ ಮಾಡಿದ್ದಾರೆ. ಗದಗಕ್ಕೆ ಪರ್ವೀಜ್ ಅವರನ್ನು ಕರೆ ತರುತ್ತಿದ್ದಾರೆ ಎಂದು ತಿಳಿದುಬಂದಿದೆ.

ಸೆಪ್ಟೆಂಬರ್ 13 ರಂದು ಕಚೇರಿ ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗುವುದಾಗಿ ಹೇಳಿ ನಾಪತ್ತೆಯಾಗಿದ್ದ ಎಇಇ ಪರ್ವೀಜ್, ವಾಅಪಸ್ ಮನೆಗೆ ಬಂದಿರಲಿಲ್ಲ. ಆತಂಕಕ್ಕೀಡದ ಕುಟುಂಬ ಗದಗ ಠಾಣೆಯಲ್ಲಿ ದೂರು ದಾಖಲಿಸಿತ್ತು. ಈ ನಡುವೆ ಪರ್ವೀಜ್ ಬರೆದಿದ್ದ ಡೆತ್ ನೋಟ್ ಪತ್ತೆಯಾಗಿತ್ತು. ಅದರಲ್ಲಿ ಸರ್ಕಾರದ ಅನುದಾನದ ಕೊರತೆ ಮತ್ತು ಕಾಮಗಾರಿಗಳ ಬಾಕಿ ಹಣ ಬಿಡುಗಡೆಯಾಗದ ಕಾರಣ, ಉಪ-ಗುತ್ತಿಗೆದಾರರು ಮನೆ ಹಾಗೂ ಕಚೇರಿಗೆ ಬಂದು ತಮಗೆ ನಿರಂತರ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಉಲ್ಲೇಖಿಸಲಾಗಿತ್ತು.

ಆರಂಭದಲ್ಲಿ ಪರ್ವೀಜ್ ಮೊಬೈಲ್ ಲೊಕೇಶನ್ ಆಂಢ್ರದ ವಿಜಯವಾಡದಲ್ಲಿ ಪತ್ತೆಯಾಗಿತ್ತು. ಬಳಿಕ ಕೆಲದಿನಗಳ ಹಿಂದೆ ಮಧ್ಯಪ್ರದೇಶದ ಬೋಪಾಲ್ ರೈಲ್ವೆ ನಿಲ್ದಾಣದಲ್ಲಿ ನಡೆದು ಹೋಗುತ್ತಿದ್ದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇದೀಗ ಗದಗ ಪೊಲಿಸರು ಪರ್ವೀಜ್ ಅವರನ್ನು ಮುಂಬೈನಲ್ಲಿ ಪತ್ತೆ ಮಾಡಿದ್ದಾರೆ.


Related Articles

Back to top button