Belagavi NewsBelgaum News

*ಬೆಳಗಾವಿ ಅಧಿವೇಶನ: ಕಿತ್ತೂರ-ಕಲ್ಯಾಣ ಪ್ರಾಂತ್ಯಗಳ ಅಭಿವೃದ್ಧಿ ಕುರಿತು ಚರ್ಚಿಸಲು ಸೂಚನೆ*

ಬೆಳಗಾವಿ ಎರಡನೇ ರಾಜಧಾನಿಯಾಗಲಿದೆಯೇ? ಹೊರಟ್ಟಿ ಹೇಳಿದ್ದೇನು?

ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯಲ್ಲಿ ಡಿಸೆಂಬರ್ 9ರಿಂದ 20ರವರೆಗೆ ವಿಧಾನಮಂಡಲ ಚಳಿಗಾಲದ ಅಧಿವೇಶನ ನಡೆಯಲಿದ್ದು, ಕಲಾಪವನ್ನು ಯಶಸ್ವಿಯಾಗಿ ನಡೆಸಲು ಪರಿಷತ್ ಸದಸ್ಯರಿಗೆ ಸೂಚನೆ ನೀಡಲಾಗಿದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ತಿಳಿಸಿದ್ದಾರೆ.

Home add -Advt

ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳವಾರ ಮತ್ತು ಬುಧವಾರ ಪ್ರಶ್ನೋತ್ತರ ಕಲಾಪದ ಬಳಿಕ ಸಂಪೂರ್ಣ ಕಿತ್ತೂರ-ಕಲ್ಯಾಣ ಪ್ರಾಂತ್ಯಗಳ ಅಭಿವೃದ್ಧಿ ಕುರಿತು ಚರ್ಚಿಸಲು ಸದಸ್ಯರಿಗೆ ಸಲಹೆ ನೀಡಲಾಗಿದೆ ಎಂದು ತಿಳಿಸಿದರು.

ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಆಗುವುದಿಲ್ಲ. ಶಾಸಕರು, ಸಚಿವರು ಪ್ರವಾಸಕ್ಕೆ ಬಂದಂತೆ ಬರುತ್ತಾರೆ ಎಂದು ಮಾಧ್ಯಮಗಳಲ್ಲಿ ವರದಿ ಪ್ರಸಾರ ಆಗಿವೆ. ಹಾಗಾಗಿ, ಡಿ.9 ರಂದು ಮಧ್ಯಾಹ್ನ ಊಟದ ನಂತರ ವಿಪಕ್ಷದ ನಾಯಕರು, ಆಡಳಿತ ಪಕ್ಷದ ನಾಯಕರ ಸಭೆ ಕರೆದಿದ್ದೇನೆ. ಪ್ರತಿಭಟನೆ ನಡೆಸಿ ಸದನದ ಸಮಯ ವ್ಯರ್ಥಗೊಳಿಸದೇ, ಸದನ ಸುಗಮವಾಗಿ ನಡೆಸಲು ಅವಕಾಶ ನೀಡುವಂತೆ ತಿಳಿಸಿದ್ದೇವೆ ಎಂದರು.

ಈ ಬಾರಿ ಪರಿಷತ್ತಿನಲ್ಲಿ ಒಟ್ಟು 1397 ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು, ಅದರಲ್ಲಿ 150 ಚುಕ್ಕೆ ಗುರುತಿನ ಪ್ರಶ್ನೆಗಳು ಹಾಗೂ 81 ಗಮನ ಸೆಳೆಯುವ ಸೂಚನೆಗಳು ಬಂದಿರುತ್ತವೆ. ಈ ಅಧಿವೇಶನದಲ್ಲಿ 14 ಬಿಲ್​ಗಳು ಪಾಸ್ ಆಗುತ್ತಿವೆ. ಇನ್ನು ಮೊದಲ ವಾರ ಮಂಗಳವಾರ ಹಾಗೂ ಬುಧವಾರ ಯುಕೆಪಿ, ಮಹಾದಾಯಿ, ರೈತರ ಸಮಸ್ಯೆ, ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತ‌ ಚರ್ಚೆಗಳಿಗೆ ಒತ್ತು‌ ನೀಡಲಾಗುವುದು. ಅಧಿವೇಶನ ಮಂಗಳವಾರ ಮತ್ತು ಬುಧವಾರ ಪ್ರಶ್ನೋತ್ತರ ವೇಳೆ‌ ನಂತರ ಸಂಪೂರ್ಣ ಕಿತ್ತೂರ ಕಲ್ಯಾಣ ಪ್ರಾಂತ್ಯಗಳ ಅಭಿವೃದ್ಧಿ ಕುರ್ತು ಚರ್ಚೆ ನಡೆಸಲು ಸಲಹೆ ನೀಡಲಾಗಿದೆ ಎಂದರು.

ಮಕ್ಕಳ ರಕ್ಷಣೆ ಕುರಿತು ಅರಿವು ಮೂಡಿಸಲು ಕ್ರಮ‌ ವಹಿಸಲಾಗುತ್ತಿದ್ದು, ಪರಿಷತ್ ಸದಸ್ಯರ ವೇದಿಕೆ ಮಾಡಿ ಮಕ್ಕಳ ಹಕ್ಕುಗಳ ರಕ್ಷಣೆಗೆ ಸರಕಾರಕ್ಕೆ ಸಲಹೆ ನೀಡಲು ಕ್ರಮ ವಹಿಸಲಾಗುವುದು. ಶಾಸಕರ ಹಾಜರಾತಿ ಹೆಚ್ಚಳಕ್ಕೆ ಕೂಡ ಆದ್ಯತೆ ನೀಡಲಾಗುವುದು ಎಂದರು.

ಬೆಳಗಾವಿಯನ್ನು ಅಧಿಕೃತವಾಗಿ ಎರಡನೇ ರಾಜಧಾನಿ ಅಂತಾ ಘೋಷಿಸುವಂತೆ ಒತ್ತಾಯ ಕೇಳುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಹೊರಟ್ಟಿ ನಾಳೆ ಮುಖ್ಯಮಂತ್ರಿಗಳು ಬರುತ್ತಿದ್ದು, ಅವರನ್ನು ಪಟ್ಟು ಹಿಡಿದು ಬಗ್ಗೆ ಕೇಳಿ. ನಾನು ಕೂಡ ಖಂಡಿತವಾಗಿ ಆ ನಿಟ್ಟಿನಲ್ಲಿ ಸರ್ಕಾರಕ್ಕೆ ಸಲಹೆ ನೀಡುತ್ತೇನೆ ಎಂದರು.

ಅಧಿವೇಶನ ನಡೆಸಲು ಈ ಬಾರಿ 20 ಕೋಟಿ ಅಂದಾಜಿಸಲಾಗಿದೆ. ಶಾಸಕರ ಭವನ ನಿರ್ಮಿಸಲು ಕೆಲವು ಪ್ರಸ್ತಾವನೆಗಳು ಬಂದಿವೆ. ಇವುಗಳ ಬಗ್ಗೆ ಕೂಲಂಕುಷವಾಗಿ ಚರ್ಚಿಸಿ ನಿರ್ಧರಿಸಲಾಗುವುದು ಎಂದು ತಿಳಿಸಿದರು.

Related Articles

Back to top button