
ಪ್ರಗತಿವಾಹಿನಿ ಸುದ್ದಿ: ಪತ್ನಿ ಗರ್ಭಿಣಿಯಾದಳು ಎಂಬ ಕಾರಣಕ್ಕೆ ಪತಿಮಹಾಶಯನೊಬ್ಬ ಆಕೆಯನ್ನೇ ಭೀಕರವಾಗಿ ಕೊಲೆಗೈದು ತನಗೇನೂ ಗೊತ್ತೊಲ್ಲದಂತೆ ನಾಟಕವಾಡಿದ್ದ ಘಟನೆ ಬೆಳಕಿಗೆ ಬಂದಿದೆ.
ಚಾಮರಾಜನಗರ ತಾಲೂಕಿನ ಡೊಳ್ಳಿಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶುಭಾ ಪತಿಯಿಂದಲೇ ಕೊಲೆಯಾದ ಗರ್ಭಿಣಿ. ಮಹೇಶ್ ಪತ್ನಿಯನ್ನೇ ಕೊಂದ ಆರೋಪಿ. ಹೆಚ್.ಡಿ.ಫಾರೆಸ್ಟ್ ನ ಡೊಳ್ಳಿಪುರದ ತೋಟದ ಮನೆಯಲ್ಲಿ ಪತ್ನಿ ಶುಭಾಳನ್ನು ಹತ್ಯೆ ಮಾಡಿ ಪೊಲೀಸರಿಗೆ ಕರೆ ಮಾಡಿ ಯಾರೋ ಪತ್ನಿಯನ್ನು ಕೊಲೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾನೆ.
ಘಟನಾ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ ಪೊಲೀಸರಿಗೆ ಪತಿ ಮೇಲೆಯೇ ಅನುಮಾನ ಶುರುವಾಗಿದೆ. ಅಲ್ಲದೇ ಪತಿ ಧರಿಸಿದ್ದ ಶರ್ಟ್ ನಲ್ಲಿ ರಕ್ತದ ಕಲೆಗಳು ಕಂಡು ಬಂದಿದ್ದು, ಬಂಧಿಸಿ ವಿಚಾರಣೆ ನಡೆಸಿದಾಗ ತಾನೇ ಕೊಲೆ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾನೆ.
ಪತಿ ಮಹೇಶ್ ಗೆ ಮಕ್ಕಳಾಗುವುದು ಇಷ್ಟವಿರಲಿಲ್ಲವಂತೆ. ಆರ್ಥಿಕ ಪರಿಸ್ಥಿತಿ ಸರಿಯಿಲ್ಲ ಎಂದು ನೆಪವೊಡ್ಡಿ ಆಗಾಗ ಪತ್ನಿ ಜೊತೆ ಗಲಾಟೆ ಮಾಡುತ್ತಿದ್ದನಂತೆ. ಕೆಲ ದಿನಗಳ ಹಿಂದೆ ಪತ್ನಿ ತಾನು ಗರ್ಭಿಣಿ ಎಂಬ ವಿಚಾರ ಹೇಳಿದಾಗ ಮಹೇಶ್ ಮತ್ತೆ ಜಗಳವಾಡಿದ್ದ. ಆದರೆ ಮಗುವನ್ನು ಉಳಿಸಿಕೊಳ್ಳುವುದಾಗಿ ಶುಭಾ ಹೇಳಿದ್ದಳಂತೆ. ಪತ್ನಿ ಗರ್ಭಿಣಿಯಾಗಿದ್ದಾಳೆ, ಮಕ್ಕಳು ಇಷ್ಟವಿಲ್ಲ ಎಂದು ಮಹೇಶ್ ಪತ್ನಿಯನ್ನೇ ಹತ್ಯೆಗೈದಿದ್ದಾಗಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.