*ಸ್ವಾಮೀಜಿಗಳಿಗೆ ಟಿಕೆಟ್ ನೀಡುವ ವಿಚಾರ; ಸಿಎಂ ಬೊಮ್ಮಾಯಿ ಹೇಳಿದ್ದೇನು?*

ಪ್ರಗತಿವಾಹಿನಿ ಸುದ್ದಿ; ಹಾವೇರಿ: ಗೋಷ್ಠಿ, ವಿಚಾರಗಳನ್ನು ಸಮ್ಮೇಳನದ ಅಧ್ಯಕ್ಷರ ಮೂಲಕ ಪಡೆದು ಕನ್ನಡ ಸಾಹಿತ್ಯ ಹಾಗೂ ಕನ್ನಡ ನಾಡಿನ ಅಭಿವೃದ್ಧಿಗೆ ಪೂರಕವಾಗಿರುವ ಎಲ್ಲಾ ಅಂಶಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಹಾವೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಹಾವೇರಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇಂದು ಸಮಾರೋಪಗೊಳ್ಳುತ್ತಿದೆ. ಕಳೆದ ಎರಡು ದಿನಗಳಿಂದ ಸಾಹಿತ್ಯದ ಕಂಪು ಇಡೀ ಕರ್ನಾಟಕಕ್ಕೆ ಪಸರಿಸಿದೆ. ಎರಡು ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸಿದ್ದು, ವಿವಿಧ ಗೋಷ್ಠಿ ಗಳು ನಡೆದು, ಸಾಹಿತಿಗಳು ಪಾಲ್ಗೊಂಡಿದ್ದಾರೆ. ಇಲ್ಲಿಯ ಯಶಸ್ವಿಯಾಗಿ ನಡೆದಿರುವ ಸಮ್ಮೇಳನಕ್ಕೆ ದುಡಿದ ಉಸ್ತುವಾರಿ ಸಚಿವ ಶಿವರಾಂ ಹೆಬ್ಬಾರ್, ಸುನೀಲ್ ಕುಮಾರ್, ಜಿಲ್ಲಾಧಿಕಾರಿ ಸೇರಿದಂತೆ ಎಲ್ಲಾ ಅಧಿಕಾರಿಗಳಿಗೆ ಅಭಿನಂದಿಸುತ್ತೇನೆ. ಸಾಹಿತಿಗಳ ಅನಿಸಿಕೆಗಳನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ವ್ಯವಸ್ಥಿತವಾಗಿ ನನ್ನ ತವರು ಜಿಲ್ಲೆಯಲ್ಲಿ ಎಲ್ಲರೂ ಸೇರಿ ನಡೆಸಿದ್ದು ಸಂತೋಷ ತಂದಿದೆ.ಇದಕ್ಕಾಗಿ ಸಮಸ್ತ ಹಾವೇರಿ ಜಿಲ್ಲೆಯ ಜನರಿಗೆ ಅಭಿನಂದಿಸಿದರು.
ಪರಿಶಿಷ್ಟರ ಆಶೋತ್ತರಗಳಿಗೆ ಸ್ಪಂದನೆ:
ಚುನಾವಣಾ ಅಖಾಡಕ್ಕೆ ಧುಮುಕಿ ಬಹಳ ದಿನಗಳಾಗಿವೆ. ಯಾರ ಆಡಳಿತದಲ್ಲಿ ಯಾರು ಪರಿಶಿಷ್ಟರಿಗೆ ಕಾರ್ಯಕ್ರಮ ನೀಡಿದ್ದಾರೆ. ಏನು ಅನುಷ್ಠಾನವಾಗಿದೆ. ಪರಿಶಿಷ್ಟರ ಬದುಕು ಯಾರ ಕಾಲದಲ್ಲಿ ಎಷ್ಟು ಉತ್ತಮಗೊಂಡಿದೆ. ಅವರ ಹಕ್ಕುಗಳನ್ನು ಯಾರು ರಕ್ಷಿಸಿದ್ದಾರೆ ಎಂದು ಎಲ್ಲರಿಗೂ ತಿಳಿದಿದೆ. ಜನಾಂಗ ಜಾಗೃತವಾಗಿದ್ದು, ಜಾಗತೀಕರಣದ ನಂತರ ಅವರ ಆಶೋತ್ತರಗಳು ಹೆಚ್ಚಾಗಿದೆ. ಅದಕ್ಕೆ ತಕ್ಕ ಹಾಗೆ ನಮ್ಮ ಸರ್ಕಾರ ಸ್ಪಂದಿಸುವ ಕೆಲಸ ಮಾಡಿದ್ದೇವೆ. ವಿರೋಧ ಪಕ್ಷದವರು ಸಹಜವಾಗಿ ವಿರೋಧಿಸುತ್ತಾರೆ. ಇನ್ನು ಮುಂದೆ ವೋಟ್ ಬ್ಯಾಂಕ್ ರಾಜಕಾರಣ ನಡೆಯುವುದಿಲ್ಲ ಎಂದರು.
ಹಿಂಸೆಗೆ ಅವಕಾಶ ಸಲ್ಲದು:
ಬೆಳಗಾವಿಯಲ್ಲಿ ಶ್ರೀರಾಮ ಸೇನೆಯ ಅಧ್ಯಕ್ಷರ ಮೇಲೆ ಗುಂಡಿನ ದಾಳಿಯಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಪೊಲೀಸರಿಗೆ ಈಗಾಗಲೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿ ತಪ್ಪಿತಸ್ಥರನ್ನು ಬಂಧಿಸಿ ಕೂಡಲೇ ಕಾರ್ಯಾಚರಣೆ ಮಾಡಲು ತಿಳಿಸಿದೆ. ಭಿನ್ನ ಅಭಿಪ್ರಾಯ ಇದ್ದ ಮಾತ್ರಕ್ಕೆ ಹಿಂಸೆಗೆ ಅವಕಾಶ ನೀಡಬಾರದು. ಶ್ರೀ ರಾಮಸೇನೆ ಜಿಲ್ಲಾಧ್ಯಕ್ಷ ಚಿಕಿತ್ಸೆ ಯ ವೇಚ್ಚ ಭರಿಸಿ, ಅಪರಾಧಿಗಳನ್ನು ಬಂಧಿಸುವ ಕೆಲಸವನ್ನು ಪೊಲೀಸರು ಮಾಡುತ್ತಾರೆ ಎಂದರು.
ಸ್ವಾಮೀಜಿಗಳಿಗೆ ಟಿಕೆಟ್ ನೀಡುವ ಬಗ್ಗೆ ಪ್ರಸ್ತಾಪ ಇಲ್ಲ:
ಸ್ವಾಮೀಜಿಗಳು ಟಿಕೆಟ್ ಆಕಾಂಕ್ಷಿಗಳಾಗಿ ವಿಧಾನಸಭೆಗೆ ಧುಮುಕುವ ಸಾಧ್ಯತೆಗಳಿವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಈ ಬಗ್ಗೆ ನನಗೆ ತಿಳಿದಿಲ್ಲ. ವಿರೋಧ ಪಕ್ಷಗಳು ಏನು ಹೇಳಿವೆ ಎನ್ನುವುದು ತಿಳಿದಿಲ್ಲ ಎಂದರು.
ಎಲ್ಲಾ ಕ್ಷೇತ್ರಗಳನ್ನು ತಲುಪಲು ಸಿದ್ಧತೆ:
ಕಾಂಗ್ರೆಸ್ ಯಾತ್ರೆ ಬಗ್ಗೆ ಪ್ರತಿಕ್ರಿಯೆ ನೀಡಿ ನಮ್ಮ ಪಕ್ಷ ವಿವಿಧ ಕಾರ್ಯಕ್ರಮಗಳನ್ನು ಹಾಕಿದೆ. ರಾಜ್ಯದ ಅಧ್ಯಕ್ಷರು ಕಾರ್ಯಕಾರಿ ಸಮಿತಿಯಲ್ಲಿ ಮಾತನಾಡಿದಂತೆ ಬೂತ್ ವಿಜಯ ಕಾರ್ಯಕ್ರಮ ಪ್ರಾರಂಭವಾಗಿದೆ. 21 ರಿಂದ 29 ರವರೆಗೆ ಮನೆ ಮನೆಗೆ ಮಾಹಿತಿ ನೀಡುವ ಮತ್ತೊಂದು ಅಭಿಯಾನ ಪ್ರಾರಂಭವಾಗಲಿದೆ. ಜನಸಂಕಲ್ಪ ಯಾತ್ರೆಯೂ ಮುಂದುವರೆಯಲಿದೆ. ಎಲ್ಲಾ ಕ್ಷೇತ್ರಗಳನ್ನು ತಲುಪಲು ರಥ ಯಾತ್ರೆಗೆ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ ಎಂದರು.
*ಐಕ್ಯತಾ ಸಮಾವೇಶ; 136 ಸೀಟು ಗೆದ್ದು ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ; ಡಿ,ಕೆ.ಶಿವಕುಮಾರ್ ವಿಶ್ವಾಸ*
https://pragati.taskdun.com/congress-aikyata-samaveshachitradurgad-k-shivakumar/




