*2 ಹಡಗು, 22 ಭಾರತೀಯರನ್ನು ಅಪಹರಿಸಿದ ದರೋಡೆಕೊರರು*

ಪ್ರಗತಿವಾಹಿನಿ ಸುದ್ದಿ : ಸಮುದ್ರ ದರೋಡೆಕೋರರು ಒಟ್ಟು 22 ಭಾರತೀಯ ಸಿಬ್ಬಂದಿಯಿದ್ದ ಎರಡು ವಾಣಿಜ್ಯ ಹಡಗುಗಳನ್ನು ಅಪಹರಿಸಿರುವ ಘಟನೆ ಯೆಮನ್ ಹಾಗೂ ಸೊಮಾಲಿಯಾ ಕರಾವಳಿ ಪ್ರದೇಶಗಳಲ್ಲಿ ನಡೆದಿದೆ.
ಮೊದಲ ಘಟನೆಯಲ್ಲಿ ಎರಿಟ್ರಿಯಾ ಧ್ವಜ ಹೊಂದಿರುವ ‘ಎಂ.ಟಿ. ಸಿಬು 1’ ಎಂಬ ತೈಲ ಉತ್ಪನ್ನಗಳ ಸಾಗಣೆ ನೌಕೆಯನ್ನು ಯೆಮನ್ ಕರಾವಳಿಯಿಂದ ಸುಮಾರು 30 ನಾವಿಕ ಮೈಲಿ ದೂರದಲ್ಲಿರುವ ಏಡೆನ್ ಕೊಲ್ಲಿಯಲ್ಲಿ ಆರು ಮಂದಿ ಶಸ್ತ್ರಸಜ್ಜಿತ ಕಡಲ್ಗಳ್ಳರು ವಶಕ್ಕೆ ಪಡೆದಿದ್ದಾರೆ.
ಈ ನೌಕೆಯಲ್ಲಿ ಒಟ್ಟು 20 ಮಂದಿ ಸಿಬ್ಬಂದಿಯಿದ್ದು, ಅವರಲ್ಲಿ 16 ನಾವಿಕರು ಭಾರತೀಯರಾಗಿದ್ದಾರೆ. ಉಳಿದಂತೆ ಸಿರಿಯಾ, ಸುಡಾನ್ ಹಾಗೂ ಇರಾಕ್ ದೇಶದ ಸಿಬ್ಬಂದಿ ಇದ್ದಾರೆ. ನೌಕಾಪಡೆ ಆಡಳಿತ ನಿರ್ದೇಶನಾಲಯದ ಪ್ರಾಥಮಿಕ ವರದಿಯ ಪ್ರಕಾರ, ಪ್ರಸ್ತುತ ಎಲ್ಲ 20 ಸಿಬ್ಬಂದಿಯೂ ಸುರಕ್ಷಿತವಾಗಿದ್ದಾರೆ ಎನ್ನಲಾಗಿದೆ.
ಎರಡನೇ ಘಟನೆಯಲ್ಲಿ ಸೊಮಾಲಿಯಾದ ಪುಂಟ್‌ಲ್ಯಾಂಡ್ ಕರಾವಳಿ ಬಳಿ ಕ್ಯಾಮರೂನ್ ಧ್ವಜ ಹೊಂದಿದ್ದ ‘ಎಮ್.ವಿ. ಲುಟುಫ್ ಎಂಬ ಸರಕು ಸಾಗಣೆ ಹಡಗನ್ನು ಕಡಲ್ಗಳ್ಳರು ಅಪಹರಿಸಿದ್ದಾರೆ. ಈ ನೌಕೆಯಲ್ಲಿ ಭಾರತದ ಆರು ಮಂದಿ ಸೇರಿದಂತೆ ಒಟ್ಟು 10 ಮಂದಿ ಸಿಬ್ಬಂದಿ ಇದ್ದರು. ಈ ಹಡಗು ಟರ್ಕಿಯಿಂದ ಮೊಗದಿಶುನಲ್ಲಿರುವ ಮಿಲಿಟರಿ ತರಬೇತಿ ಕೇಂದ್ರಕ್ಕೆ ಶಸ್ತ್ರಾಸ್ತ್ರಗಳು, ಸಂಪರ್ಕ ಸಾಧನಗಳು ಹಾಗೂ ಉಪಗ್ರಹ ಉಪಕರಣಗಳನ್ನು ಒಯ್ಯುತ್ತಿತ್ತು ಎಂದು ತಿಳಿದುಬಂದಿದೆ.
ಏಂಟು ಮಂದಿ ದರೋಡೆಕೋರರ ಗುಂಪು ಈ ಹಡಗನ್ನು ವಶಕ್ಕೆ ಪಡೆದು ಗಾರ್ಮಾಲ್ ಕರಾವಳಿಯತ್ತ ಕೊಂಡೊಯ್ದಿದೆ. ಈ ಹಡಗಿನಲ್ಲಿದ್ದ ಭಾರತೀಯರ ಹೊರತಾಗಿ ಟರ್ಕಿ, ಜಾರ್ಜಿಯಾ ಹಾಗೂ ಇಬ್ಬರು ಸೆರ್ಬಿಯಾ ಮೂಲದ ಭದ್ರತಾ ಸಿಬ್ಬಂದಿಯೂ ಇದ್ದಾರೆ.
ಪ್ರಸ್ತುತ ಡೈರೆಕ್ಟರೇಟ್ ಆಫ್ ಮ್ಯಾರಿಟೈಮ್ ಅಡ್ಮಿನಿಸ್ಟೇಷನ್ ಈ ಎರಡೂ ಘಟನೆಗಳನ್ನು ತೀವ್ರವಾಗಿ ಗಮನಿಸುತ್ತಿದ್ದು, ಇ-ನಾವಿಕ್ ಆನ್‌ಲೈನ್ ವ್ಯವಸ್ಥೆಯ ಮೂಲಕ ನಿಯಮಿತ ವರದಿಗಳನ್ನು ಪಡೆಯುತ್ತಿದೆ. ಹಡಗುಗಳ ಪ್ರಸ್ತುತ ಸ್ಥಿತಿ ಮತ್ತು ಸಿಬ್ಬಂದಿಯ ಸುರಕ್ಷಿತ ಬಿಡುಗಡೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಈ ಘಟನೆಯು ಆಫ್ರಿಕಾದ ಕೊಂಬಿನ ಜಲಪ್ರದೇಶದಲ್ಲಿ ಮತ್ತೆ ಕಡಲ್ಗಳ್ಳತನದ ಭೀತಿಯನ್ನು ಹೆಚ್ಚಿಸಿದೆ.




