*ಡಿ. ದೇವರಾಜ ಅರಸು ಅವರ 111 ನೇ ಜನ್ಮ ದಿನಾಚರಣೆ*

ಸಮಾನತೆಯ ಹರಿಕಾರ, ನೊಂದವರ ನಂದಾದೀಪ, ಸಾಧನೆಗಳ ಸರದಾರ ಡಿ. ದೇವರಾಜ ಅರಸು: ಭರಮಣ್ಣ ಉಪ್ಪಾರ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ದಿವಂಗತ ಡಿ. ದೇವರಾಜ ಅರಸು ಅವರು ಅಧಿಕಾರವನ್ನು ಕೇವಲ ಆಡಳಿತಕ್ಕೆ ಸೀಮಿತಗೊಳಿಸದೆ ಸಮಾಜದ ಸುಧಾರಣೆಗೆ ಶ್ರಮಿಸಿದ ಬಡವರ ಬಂದು ಜನಪರ ನಾಯಕರಾಗಿದ್ದರು ಎಂದು ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಇವರ ಸಂಯುಕ್ತಾಶ್ರಯದಲ್ಲಿ ಗುರವಾರ (ಆ.20) ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ನಡೆದ ಡಿ. ದೇವರಾಜ ಅರಸು 111 ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಸಮಾನತೆ ನಿರ್ಮಾಣ ಮಾಡಲು, ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸಿದ ಮಹಾನ್ ವ್ಯಕ್ತಿ ದಿವಂಗತ ಡಿ. ದೇವರಾಜ ಅರಸು ಅವರು ಹಿಂದುಳಿದ ವರ್ಗಗಳ ಸುಧಾರಣೆಗೆ ಹಗಲಿರುಳು ದುಡಿದ ಶ್ರೇಷ್ಠ ನಾಯಕರು, ಇವರು ತಂದ ಉಳುವವನೇ ಭೂಮಿಯ ಒಡೆಯ ಭೂ ಸುಧಾರಣೆ ಕಾಯಿದೆ ಪ್ರಮುಖವಾಗಿದ್ದು, ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸಿ ಸಾಮಾಜಿಕ ಸಮಾನತೆಯ ಹರಿಕಾರ ಎಂದೇ ಜನಪ್ರಿಯರಾಗಿದ್ದರು ಎಂದರು.
ದಮನಿತ ಸಮುದಾಯಗಳು ಧ್ವನಿಯಾದ ಮಹಾನ ನಾಯಕ ಡಿ ದೇವರಾಜ ಅರಸು ಅವರು, ಪ್ರತಿಯೊಂದು ಸಂದರ್ಭದಲ್ಲಿ ಅವರು ರಾಜ್ಯಕ್ಕೆ ಒಳಿತಾಗುವ ನಿರ್ಧಾರಗಳನ್ನು ತೆಗೆದುಕೊಂಡವರು. ಭೂ ಸುಧಾರಣೆ ಕಾಯಿದೆಯ ಅಡಿಯಲ್ಲಿ 21 ಲಕ್ಷ ಜಮೀನುದಾರರಿಂದ ಭೂಮಿ ಪಡೆದು ಬಡ ಜನರಿಗೆ ಹಂಚಿಕೆ ಮಾಡಿರುವುದು ಐತಿಹಾಸಿಕ ಸಾಧನೆಯಾಗಿದೆ ಎಂದು ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ ಅವರು ನುಡಿದರು.
ಕಾರ್ಯಕ್ರಮದ ಉಪನ್ಯಾಸಕರಾಗಿ ಆಗಮಿಸಿದ್ದ ಡಾ. ಪ್ರವೀಣಾ ಕೆ ಎಸ್ ಅವರು ಮಾತನಾಡಿ ನಾಡು ಕಂಡ ಶ್ರೇಷ್ಠ ಮುಖ್ಯ ಮಂತ್ರಿ ದೇವರಾಜ ಅರಸು ಕೇವಲ ಹೆಸರಿಗೆ ಮಾತ್ರವಲ್ಲದೆ ಸಾಮಾನ್ಯ ಜನರಿಗೆ ನಿಜವಾದ ಅರಸರಾಗಿದ್ದರು. ಸಮಾಜದಲ್ಲಿ ತುಳಿತಕ್ಕೆ ಒಳಗಾದ ಅನೇಕ ಜನರನ್ನು ಸುಧಾರಿಸಲು ಅನೇಕ ಸಾಮಾಜಿಕ ಸುಧಾರಣಾ ಕಾರ್ಯಗಳನ್ನು ಜಾರಿ ಮಾಡಿದ್ದಾರೆ ಎಂದರು.
ಡಿ.ದೇವರಾಜ ಅರಸು ಅವರು ಸೈನ್ಯಕ್ಕೆ ಸೇರಲು ಬಯಸಿದ ಅವರು ತಾಯಿಯ ಕಾರಣ ಪ್ರಜಾ ಸೇವೆಗೆ ಬಂದು ಚುನಾವಣೆಯಲ್ಲಿ ಮೈಸೂರು ಮಹಾರಾಜರ ಆಪ್ತರನ್ನು ಸೋಲಿಸಿ ಹುಣಸೂರು ಕ್ಷೇತ್ರದಿಂದ ಆರಿಸಿ ಬಂದ ಅವರು ಮರಳಿ ರಾಜಕೀಯದಲ್ಲಿ ಸೋಲನ್ನೇ ಕಾಣದ ವ್ಯಕ್ತಿಯಾಗಿದ್ದರು. ಹುಣಸೂರು ಕ್ಷೇತ್ರದಿಂದ ಜಯಿಸಿ ವಿವಿಧ ಇಲಾಖೆಗಳ ಸಚಿವರಾಗಿ ಕಾರ್ಯ ನಿರ್ವಹಿಸಿದ ಅರಸು ವರು 1972 ರಲ್ಲಿ ಮೊದಲ ಬಾರಿಗೆ ರಾಜ್ಯದ 8 ನೇ ಮುಖ್ಯ ಮಂತ್ರಿ ಆಗಿ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ರಾಂತಿಯನ್ನೇ ಮಾಡಿದರು.
1973 ರಲ್ಲಿ ರಾಜ್ಯದ ಹೆಸರನ್ನು ಕರ್ನಾಟಕ ಎಂದು ಮರುನಾಮಕರಣ ಮಾಡಿ ಅಖಂಡ ಕರ್ನಾಟಕದ ನಿರ್ಮಾತ್ಮ ಆದರೂ. ಡಿ. ದೇವರಾಜ ಅರಸು ಅವರ ಸಾಧನೆಗಳಲ್ಲಿ ಪ್ರಮುಖವಾಗಿ ಭೂ ಸುಧಾರಣೆಯಲ್ಲಿ ಉಳುವವನೇ ಭೂಮಿಯ ಒಡೆಯ ಎಂಬ ಕಾಯಿದೆ ಜಾರಿಗೆ ತಂದು ಕೆಲವರಲ್ಲಿ ಇದ್ದ ಭೂಮಿಯನ್ನು ಅನೇಕ ಕೂಲಿಗಾಗಿ ದುಡಿಯುವ ಬಡ ರೈತ ಕುಟುಂಬಗಳಿಗೆ ಸಿಗುವಂತೆ ಮಾಡಿದರು.
ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಗುರುತಿಸಲು 1972 ರಲ್ಲಿ ಎಲ್ ಜಿ ಹಾವನೂರು ಅಧ್ಯಕ್ಷತೆಯಲ್ಲಿ ಹಿಂದುಳಿದ ವರ್ಗಗಳ ಆಯೋಗ ರಚನೆ ಮಾಡುವುದರ ಮೂಲಕ ರಾಜ್ಯದ ಹಿಂದುಳಿದ ಸಮುದಾಯಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಲು ವೈಜ್ಞಾನಿಕ ನೆಲೆಯನ್ನು ಒದಗಿಸಿತು. ಜೀತ ಪದ್ಧತಿಯಿಂದ 65 ಸಾವಿರ ಜನರನ್ನು ಮುಕ್ತಿಗೊಳಿಸಿ, ದಲಿತರು ಸಮಾಜದಲ್ಲಿ ಸಮಾನತೆಯಿಂದ ಜೀವಿಸಲು ಅನುವು ಮಾಡಿಕೊಟ್ಟಂತಹ ಮಹನೀಯರು ಡಿ.ದೇವರಾಜ ಅರಸು ಎಂದು ಅವರ ಜೀನವ ಸಾಧನೆಗಳ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ವಿಜಯಕುಮಾರ ಹೊನಕೇರಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ರಾಮನಗೌಡ ಕನ್ನೊಳ್ಳಿ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಬಸವರಾಜ ಕುರಿಹುಲಿ, ಹಿರಿಯ ಕೆ ಎ ಎಸ್ ಅಧಿಕಾರಿ ರಾಜೇಶ್ವರಿ ಜೈನಾಪುರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ವಿದ್ಯಾವತಿ ಭಂಜಂತ್ರಿ, ಸಮಾಜದ ಮುಖಂಡರಾದ ಅಪ್ಪುಗೋಳ, ರಾಹುಲ್ ಕಾಂಬಳೆ, ಸಮಾಜದ ಗಣ್ಯರು ಸೇರಿದಂತೆ ವಿವಿಧ ವಸತಿ ನಿಲಯಗಳ ನಿಲಯ ಪಾಲಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಶಾಂತ ಮರಿಗೌಡರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಭವ್ಯ ಮೆರವಣಿಗೆ ಕಾರ್ಯಕ್ರಮ
ಕಾರ್ಯಕ್ರಮಕ್ಕೂ ಮುಂಚೆ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ದಿವಂಗತ ಡಿ.ದೇವರಾಜ ಅರಸು ಅವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿಗಳಾದ ಮೊಹಮ್ಮದ ರೋಷನ್ ಅವರು ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಿ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬೆಳಗಾವಿ ಪೊಲೀಸ್ ಆಯುಕ್ತ ಗುಲಾಬ್‌ರಾವ್ ಭೂಷಣ ಬೊರಸೆ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ರವಿ ಬಂಗಾರಪ್ಪನವರ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ರಾಮನಗೌಡ ಕನ್ನೊಳ್ಳಿ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಬಸವರಾಜ ಕುರಿಹುಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕರು ವಿದ್ಯಾವತಿ ಭಜಂತ್ರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ಶಾಂತ ಮರಿಗೌಡರ, ಸಮಾಜದ ಮುಖಂಡರು, ಗಣ್ಯರು ಹಾಗೂ ವಿವಿಧ ವಸತಿ ನಿಲಯಗಳ ನಿಲಯ ಪಾಲಕರು ಉಪಸ್ಥಿತರಿದ್ದರು.
ಮೆರವಣಿಗೆಯು ಜಿಲ್ಲಾಧಿಕಾರಿಗಳ ಕಚೇರಿಯಿಂದ ಚನ್ನಮ್ಮ ವೃತ್ತದ ಮಾರ್ಗವಾಗಿ ಕೃಷ್ಣದೇವರಾಯ ವೃತ್ತದ ಮೂಲಕ ಕುಮಾರ ಗಂಧರ್ವ ರಂಗ ಮಂದಿರ ತಲುಪಿತು. ಮೆರವಣಿಗೆಯಲ್ಲಿ ಭುಜಂಗ ಕಲಾ ಯಕ್ಷಗಾನ ತಂಡ
ಹುಬ್ಬಳ್ಳಿ ಮತ್ತು ಬೀರಸಿದೇಶ್ವರ ಡೊಳ್ಳು ಕುಣಿತ ತಂಡ ಹಾಗೂ ವೇಷದಾರಿ ಪ್ರದರ್ಶನ ಜೊತೆಗೆ ಡಿ. ದೇವರಾಜ ಅರಸು ಅವರ ಭಾವಚಿತ್ರ ಮೆರವಣಿಗೆ ಅತೀ ವಿಜೃಂಭಣೆಯಿಂದ ಸಾಗಿತು.



