ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೋರೋನಾ ವೈರಸ್ ನೆಪದಲ್ಲಿ ಸಾರ್ವಜನಿಕರ ಜೀವನದೊಂದಿಗೆ ಚೆಲ್ಲಾಟವಾಡಿ ಕಾಳ ಸಂತೆಯಲ್ಲಿ ಮಾಸ್ಕ್ ಮಾರಾಟ ಮಾಡುವವರ ವಿರುದ್ದ ಕಠಿಣ ಕ್ರಮ ಜರುಗಿಸುವಂತೆ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಸೋಮವಾರ ಮಹಾನಗರ ಪಾಲಿಕೆಯ ಕೌನ್ಸಿಲ್ ಸಭಾಂಗಣದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಕೋರೋನಾ ಮುಂಜಾಗೃತಾ ಕ್ರಮದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾನಾಡಿದ ಅವರು ದೇಶ ವಿದೇಶದಲ್ಲಿ ವೈರಸ ಬಗ್ಗೆ ಸರ್ಕಾರದ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಆದರೆ ಕೆಲವರು ಸಾರ್ವಜನಿಕರಿಗೆ ಕಾಳ ಸಂತೆಯಲ್ಲಿ ಮಾಸ್ಕ್ ಮಾರಾಟ ಮಾಡುತ್ತಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿವೆ. ಅಂಥವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕೆಂದು ಕಠಿಣ ಸೂಚನೆ ನೀಡಿದರು.
ಕೋರೋನಾ ವೈರಸ್ ತಡೆಗಟ್ಟುವ ಕುರಿತು ಸರ್ಕಾರ ಸಕಲ ಸಿದ್ದತೆ ಮಾಡಿಕೊಂಡಿದೆ. ಅಲ್ಲದೆ ಒಂದು ವಾರಗಳ ಕಾಲ ಕರ್ನಾಟಕ ಬಂದ್ ಮಾಡಿ ನಿಗಾ ಇರಿಸಲಾಗಿದೆ. ಬೆಳಗಾವಿಯಲ್ಲಿ ಕೆಲ ಕಾಲೇಜುಗಳನ್ನು ಪ್ರಾರಂಭಿಸಿದ್ದಾರೆ ಎನ್ನಲಾಗುತ್ತಿದೆ. ಖಾಸಗಿ ಕಾಲೇಜುಗಳ ಮೇಲೆ ನಿಗಾ ಇಡಬೇಕೆಂದು ಸೂಚಿಸಿದರು.
ನಗರವನ್ನು ಶುಚಿಗೊಳಿಸುವ ಪೌರ ಕಾರ್ಮಿಕರಿಗೆ ಮಾಸ್ಕ್ ನೀಡಬೇಕು. ಅಧಿಕಾರಿಗಳು ಸಹ ಕೋರೊನಾ ಬಗ್ಗೆ ಕಾಳಜಿ ತೆಗೆದುಕೊಳ್ಳಬೇಕು ಹಾಗೂ ಕೋರೋನಾ ಶಂಕಿತ ವ್ಯಕ್ತಿಯನ್ನು ಆಸ್ಪತ್ರೆಗೆ ಸೂಕ್ಷ್ಮ ರೀತಿಯಲ್ಲಿ ದಾಖಲು ಮಾಡಬೇಕು ಎಂದರು.
ಕೋರೋನಾ ವೈರಸ್ ಬಗ್ಗೆ ಜಗತ್ತಿನಲ್ಲಿಯೇ ನಡೆಯುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಕೋರೋನಾ ಶಂಕಿತ ವ್ಯಕ್ತಿಯು ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವದಂತಿ ಇತ್ತು, ಆದರೆ ಬೆಳಗಾವಿ ನಗರದಲ್ಲಿ ಯಾವುದೇ ಕೋರೋನಾ ಶಂಕಿತ ವ್ಯಕ್ತಿ ಇಲ್ಲ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ಜಿಲ್ಲಾ ಆರೋಗ್ಯಾಧಿಕಾರಿ ಎಸ್. ಬಿ. ಮುನ್ಯಾಳ, ಪಾಲಿಕೆ ಅಭಿಯಂತರ ಲಕ್ಷ್ಮೀ ನಿಪ್ಪಾಣಿಕರ, ಪಾಲಿಕೆ ಆರೋಗ್ಯಾಧಿಕಾರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ