*ನನ್ನನ್ನೆ ಟಾರ್ಗೆಟ್ ಮಾಡಿ ಪ್ರಚೋದನಕಾರಿ ಭಾಷಣ ನಿಯಂತ್ರಿಣ ಕಾಯ್ದೆ ಜಾರಿ: ಯತ್ನಾಳ ಆರೋಪ*

ಪ್ರಗತಿವಾಹಿನಿ ಸುದ್ದಿ : ಬೆಳಗಾವಿ ಅಧಿವೇಶನದಲ್ಲಿ ಪ್ರಚೋದನಕಾರಿ ಭಾಷಣಗಳನ್ನು ನಿಯಂತ್ರಿಸಲು ಹೊಸ ಕಾನೂನನ್ನು ಜಾರಿಗೆ ಸರ್ಕಾರ ಪ್ಲಾನ್ ಮಾಡಿಕೊಂಡಿದೆ. ಆದರೆ ನನ್ನನ್ನೆ ಟಾರ್ಗೆಟ್ ಮಾಡಿ ಈ ಕಾಯ್ದೆ ಜಾರಿಗೆ ತರಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ರಾಜ್ಯ ಸರ್ಕಾರ ತರಲು ಹೊರಟಿರುವ ನೂತನ ಕಾಯ್ದೆ ಬಗ್ಗೆ ಯತ್ನಾಳ್ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ಹಿಂದೂಗಳ ಪರವಾಗಿ ಯಾರು ಮಾತನಾಡುತ್ತಾರೋ ಅವರನ್ನು ಟಾರ್ಗೆಟ್ ಮಾಡಬೇಕು ಅನ್ನೋದು ಈ ಸರ್ಕಾರದ ಉದ್ದೇಶವಾಗಿದೆ. ಸರ್ಕಾರ ಬಿ.ವೈ ವಿಜಯೇಂದ್ರ ಆರ್. ಅಶೋಕ್ ಅವರನ್ನು ಟಾರ್ಗೆಟ್ ಮಾಡುವುದಿಲ್ಲ. ರಾಜ್ಯ ಸರ್ಕಾರಕ್ಕೆ ಬಸನಗೌಡ ಪಾಟೀಲ್ ಯತ್ನಾಳ್ ಅವರದ್ದೇ ಅಂಜಿಕೆ ಇದೆ. ಹೀಗಾಗಿ ನನ್ನನ್ನ ಟಾರ್ಗೆಟ್ ಮಾಡಿ ಈ ಕಾಯ್ದೆ ತರಲು ಮುಂದಾಗಿದ್ದಾರೆ ಎಂದು ಯತ್ನಾಳ್ ಕಿಡಿಕಾರಿದರು.
ನನಗಾಗಿಯೇ ಈ ಕಾಯ್ದೆ ತರುತ್ತಿದ್ದಾರೆ. ಹೀಗಾಗಿ ಹೆಚ್‌ಕೆ ಪಾಟೀಲ್ ಅವರಿಗೆ ಧನ್ಯವಾದಗಳು ಎಂದು ವ್ಯಂಗ್ಯವಾಡಿದ ಅವರು, ನಾನು ಈ ಕಾಯ್ದೆಯನ್ನು ವಿರೋಧ ಮಾಡದೇ ಬೆಂಬಲ ನೀಡಬೇಕೇ? ಈ ಕಾನೂನನ್ನು ವಿರೋಧಿಸುತ್ತೇನೆ ಎಂದು ಗುಡುಗಿದರು.
ಅದೇ ರೀತಿ ಇದೇ ವೇಳೆ ಗೋ ರಕ್ಷಣಾ ಕಾಯ್ದೆ ತಿದ್ದುಪಡಿ ಮಾಡುವ ಸರ್ಕಾರದ ಚಿಂತನೆ ಕುರಿತು ಪ್ರತಿಕ್ರಿಯೆ ನೀಡಿದರು. ಇದು ಒಂದು ಪಕ್ಷದ ವಿಚಾರ ಅಲ್ಲ. ಗೋ, ಸನಾತನ ಧರ್ಮದ ಪರ ಇರುವವರು ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷದಲ್ಲಿಯೂ ಇದ್ದಾರೆ. ಎಲ್ಲರೂ ಸೇರಿ ನಿರ್ಣಯ ತೆಗೆದುಕೊಳ್ಳುತ್ತೇವೆ. ನಾವು ಗೋ ಪ್ರೇಮಿ ಶಾಸಕರು ಸೇರಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಈ ವಿಚಾರದಲ್ಲಿ ಪಕ್ಷಾತೀತವಾಗಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಅಭಿಪ್ರಾಯ ಪಟ್ಟರು.
ರಾಜ್ಯದಲ್ಲಿ ಮತೀಯ ಸಂಘರ್ಷ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದ್ವೇಷ ಭಾಷಣ ತಡೆಯಲು ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಸಚಿವ ಸಂಪುಟವು ಹೊಸ ಮಸೂದೆಗೆ ಒಪ್ಪಿಗೆ ನೀಡಿದ್ದು, ದ್ವೇಷ ಭಾಷಣ ಮಾಡುವವರಿಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.



