*ಟಾಟಾ ಮೋಟಾರ್ಸ್ನಿಂದ ಅತ್ಯಾಧುನಿಕ ಫಿಚರ್ಸ್ ಇರುವ ಟ್ರಕ್ ಗಳ ಬಿಡುಗಡೆ*

ಪ್ರಗತಿವಾಹಿನಿ ಸುದ್ದಿ: ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್ ಇಂದು ಭಾರತೀಯ ಟ್ರಕ್ ಕ್ಷೇತ್ರವನ್ನೇ ಬದಲಿಸುವ ಮಹತ್ವದ ಹೆಜ್ಜೆಯಾಗಿ ಮುಂದಿನ ಪೀಳಿಗೆಯ 17 ಟ್ರಕ್ಗಳ ಶ್ರೇಣಿಯನ್ನು ಬಿಡುಗಡೆ ಮಾಡಿದೆ.
7 ರಿಂದ 55 ಟನ್ಗಳವರೆಗಿನ ವಿಭಾಗದ ಈ ಹೊಸ ಟ್ರಕ್ ಗಳು ಸುರಕ್ಷತೆ, ಲಾಭ ಮತ್ತು ಪ್ರಗತಿಯಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಲಿವೆ. ಈ ಸಮಗ್ರ ಉತ್ಪನ್ನ ಬಿಡುಗಡೆಯಲ್ಲಿ ಹೊಚ್ಚ ಹೊಸ ‘ಅಜುರಾ’ ಸರಣಿ, ಅತ್ಯಾಧುನಿಕ ‘ಟಾಟಾ ಟ್ರಕ್ಸ್.ಇವಿ’ ಶ್ರೇಣಿ ಮತ್ತು ಈಗಾಗಲೇ ಜನಪ್ರಿಯವಾಗಿರುವ ಪ್ರೈಮಾ, ಸಿಗ್ನಾ ಹಾಗೂ ಅಲ್ಟ್ರಾ ವಾಹನಗಳ ಸುಧಾರಿತ ಆವೃತ್ತಿಗಳನ್ನು ಪರಿಚಯಿಸಲಾಗಿದೆ.
ಕಟ್ಟುನಿಟ್ಟಾದ ಜಾಗತಿಕ ಸುರಕ್ಷತಾ ಮಾನದಂಡಗಳಿಗೆ (ECE R29 03) ಅನುಗುಣವಾಗಿ ವಿನ್ಯಾಸಗೊಳಿಸಲಾದ ಈ ಟ್ರಕ್ಗಳು, ಬಳಕೆದಾರರ ಆದಾಯವನ್ನು ಹೆಚ್ಚಿಸುವುದಲ್ಲದೆ, ಮಾಲೀಕತ್ವದ ಒಟ್ಟು ವೆಚ್ಚವನ್ನು ತಗ್ಗಿಸುತ್ತವೆ ಮತ್ತು ವಾಹನದ ಕಾರ್ಯಕ್ಷಮತೆಯನ್ನು ಉತ್ತಮಪಡಿಸುತ್ತವೆ.
ಹೊಸ ಟ್ರಕ್ಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಟಾಟಾ ಮೋಟಾರ್ಸ್ ಲಿಮಿಟೆಡ್ನ ಎಂಡಿ ಮತ್ತು ಸಿಇಓ ಆಗಿರುವ ಗಿರೀಶ್ ವಾಘ್ ಅವರು, “ಪ್ರಗತಿಪರ ರಾಷ್ಟ್ರೀಯ ನೀತಿಗಳು, ಆಧುನಿಕ ಮೂಲಸೌಕರ್ಯ ಮತ್ತು ಸುರಕ್ಷಿತ, ಸ್ವಚ್ಛ ಹಾಗೂ ಹೆಚ್ಚು ಪರಿಣಾಮಕಾರಿ ಲಾಜಿಸ್ಟಿಕ್ಸ್ ಮೇಲಿನ ಬೇಡಿಕೆ ಹೆಚ್ಚಳದಿಂದಾಗಿ ಭಾರತದ ಟ್ರಕ್ ಕ್ಷೇತ್ರವು ಕ್ಷಿಪ್ರ ಬದಲಾವಣೆಗೆ ಒಳಗಾಗುತ್ತಿದೆ. ಉದ್ಯಮದ ಭವಿಷ್ಯವನ್ನು ರೂಪಿಸುವ ಮಾನದಂಡಗಳನ್ನು ಹಾಕುವಲ್ಲಿ ಟಾಟಾ ಮೋಟಾರ್ಸ್ ಯಾವಾಗಲೂ ಮುಂಚೂಣಿಯಲ್ಲಿದ್ದು, ಇದೀಗ ಮುಂದಿನ ಪೀಳಿಗೆಯ ಟ್ರಕ್ ಪೋರ್ಟ್ಫೋಲಿಯೋವನ್ನು ಪರಿಚಯಿಸುವ ಮೂಲಕ ನಾವು ಈ ಪರಂಪರೆಯನ್ನು ಮುಂದುವರಿಸುತ್ತಿದ್ದೇವೆ.
ಇದರಲ್ಲಿ ಹೊಚ್ಚಹೊಸ ಅಜುರಾ ಸರಣಿ, ಎರಡು ಸುಧಾರಿತ ಉನ್ನತ-ದಕ್ಷತೆಯ ಪವರ್ಟ್ರೇನ್ಗಳು, ನಮ್ಮ ಹೊಸ ಐ-ಎಂಓಇವಿ ಆರ್ಕಿಟೆಕ್ಚರ್ ಅಡಿಯಲ್ಲಿ ಶೂನ್ಯ ಹೊಗೆಸೂಸುವ ಎಲೆಕ್ಟ್ರಿಕ್ ಟ್ರಕ್ಗಳು ಮತ್ತು ಟಿಪ್ಪರ್ಗಳು ಸೇರಿವೆ.
ಜೊತೆಗೆ ಯುರೋಪಿಯನ್ ಗುಣಮಟ್ಟದ ಕ್ಯಾಬಿನ್ಗಳು, ಅತ್ಯುತ್ತಮ ಸುರಕ್ಷತಾ ವೈಶಿಷ್ಟ್ಯಗಳು, ಹೆಚ್ಚಿನ ಪೇಲೋಡ್ ಸಾಮರ್ಥ್ಯ ಮತ್ತು ಇಂಧನ ದಕ್ಷತೆಯನ್ನು ಹೊಂದಿದ್ದು, ಇವೆಲ್ಲವನ್ನೂ ಫ್ಲೀಟ್ ಎಡ್ಜ್ ಡಿಜಿಟಲ್ ಸೇವೆಗಳೊಂದಿಗೆ ಸಂಯೋಜಿಸಲಾಗಿದೆ. ‘ಬೆಟರ್ ಆಲ್ವೇಸ್’ (ಸದಾ ಉತ್ತಮ) ತತ್ವದ ಅಡಿಯಲ್ಲಿ ಹೊಸ ಆವಿಷ್ಕಾರದ ಹಂಬಲ, ಪ್ರಾದೇಶೀಕರಣದ ಮೇಲೆ ಆಸಕ್ತಿ ಮತ್ತು ಗ್ರಾಹಕರ ಯಶಸ್ಸಿನ ಮೇಲೆ ಗಮನ ಹರಿಸುವ ನಮ್ಮ ಕ್ರಮವು ‘ಆತ್ಮನಿರ್ಭರ ಭಾರತ’ದ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ ಮತ್ತು ಇದು ಸ್ವಾವಲಂಬನೆ ಮತ್ತು ಸುಸ್ಥಿರ ಸಾರಿಗೆ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸುವ ಭಾರತದ ಆಕಾಂಕ್ಷೆಯನ್ನು ಮತ್ತಷ್ಟು ಬಲಪಡಿಸುತ್ತದೆ” ಎಂದು ಹೇಳಿದರು.
ಅಜುರಾ ಪರಿಚಯ – ಐಎಲ್ಎಂಸಿವಿ ವಿಭಾಗದಲ್ಲಿ ಉತ್ಕೃಷ್ಟ ಪರಿಕಲ್ಪನೆ
ಟಾಟಾ ಮೋಟಾರ್ಸ್ ಹೊಚ್ಚ ಹೊಸದಾದ ‘ಅಜುರಾ’ ಶ್ರೇಣಿಯನ್ನು ಬಿಡುಗಡೆ ಮಾಡಿದೆ. ಮಧ್ಯಮ ಮತ್ತು ಹಗುರವಾದ ವಾಣಿಜ್ಯ ವಾಹನ (ಐಎಲ್ಎಂಸಿವಿ) ವಿಭಾಗದಲ್ಲಿ ಅತ್ಯುತ್ತಮ ಕಾರ್ಯಕ್ಷಮತೆ, ಹೆಚ್ಚಿನ ಸೌಕರ್ಯ ಮತ್ತು ಹೆಚ್ಚಿನ ಅವಧಿ ಕೆಲಸ ಮಾಡುವ ಸಾಮರ್ಥ್ಯವನ್ನು (ಅಪ್ ಟೈಮ್) ಒದಗಿಸಲು ಇದನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.
ಉತ್ಪಾದಕತೆ, ಸುರಕ್ಷತೆ ಮತ್ತು ಆರಾಮದಾಯಕ ಚಾಲನೆಗೆ ಒತ್ತು ನೀಡಿ ಸಿದ್ಧಪಡಿಸಲಾದ ಅಜುರಾ, ಆಯಾಸರಹಿತ ಚಾಲನಾ ಅನುಭವ ಒದಗಿಸುತ್ತದೆ. ಇದು ಸೌಂದರ್ಯ ಮತ್ತು ಉಪಯುಕ್ತತೆ ಎರಡೂ ಸಂಯೋಜನೆಗೊಂಡಿರುವ ಆಕರ್ಷಕ ಸರಣಿಯಾಗಿದೆ.
ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ದಕ್ಷತೆಯನ್ನು ನೀಡುವ ಹೊಸ 3.6-ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ಅಜುರಾ, ವಿಶ್ವಾಸಾರ್ಹತೆಯಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸಿದೆ. ಅಜುರಾ ಶ್ರೇಣಿಯು 7 ರಿಂದ 19 ಟನ್ ಸಾಮರ್ಥ್ಯಗಳಲ್ಲಿ ಲಭ್ಯವಿದ್ದು, ಇ-ಕಾಮರ್ಸ್, ಎಫ್ಎಮ್ಸಿಜಿ, ಗೃಹೋಪಯೋಗಿ ವಸ್ತುಗಳ ವಿತರಣೆ, ನಿರ್ಮಾಣ ಸಾಮಗ್ರಿ ಸಾಗಣೆ, ಕೃಷಿ ಮತ್ತು ಕೈಗಾರಿಕಾ ಸರಕುಗಳ ಸಾಗಣೆ ಹಾಗೂ ಅಂತರ್- ನಗರ ಸಾಗಣೆ ಸೇರಿದಂತೆ ವಿವಿಧ ಉದ್ದೇಶಗಳಿಗೆ ಸೂಕ್ತವಾಗಿದೆ.
ಭಾರತೀಯ ರಸ್ತೆಗಳಿಗೆ ವಿಶ್ವದರ್ಜೆಯ ಸುರಕ್ಷತೆಯ ಪರಿಚಯ
ಟಾಟಾ ಮೋಟಾರ್ಸ್ ತನ್ನ ಸಂಪೂರ್ಣ ಟ್ರಕ್ ಪೋರ್ಟ್ಫೋಲಿಯೋವನ್ನು (ಸಿಗ್ನಾ, ಪ್ರೈಮಾ, ಅಲ್ಟ್ರಾ ಮತ್ತು ಹೊಚ್ಚ ಹೊಸ ಅಜುರಾ ಸರಣಿ ಸೇರಿದಂತೆ) ECE R29 03 ಜಾಗತಿಕ ಕ್ರ್ಯಾಶ್ ಸೇಫ್ಟಿ ಮಾನದಂಡಗಳಿಗೆ (ಯುರೋ ಕ್ರ್ಯಾಶ್ ನಿಯಮಗಳು) ಅನುಗುಣವಾಗಿ ಮೇಲ್ದರ್ಜೆಗೇರಿಸುವ ಮೂಲಕ ರಸ್ತೆ ಸುರಕ್ಷತೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಈ ಟ್ರಕ್ಗಳ ಕ್ಯಾಬಿನ್ಗಳನ್ನು ಮುಖಾಮುಖಿ ಡಿಕ್ಕಿ, ವಾಹನ ಉರುಳುವಿಕೆ ಮತ್ತು ಪಾರ್ಶ್ವಗಳಲ್ಲಿ ಆಗುವ ಡಿಕ್ಕಿಗಳಿಂದ ರಕ್ಷಣೆ ನೀಡುವಂತೆ ವಿನ್ಯಾಸಗೊಳಿಸಲಾಗಿದೆ. ಜೊತೆಗೆ, ಇವುಗಳಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಡಿಪಾರ್ಚರ್ ವಾರ್ನಿಂಗ್ ಮತ್ತು ಕೊಲಿಷನ್ ಮಿಟಿಗೇಷನ್ ಸಿಸ್ಟಮ್ಗಳಂತಹ ಭಾರತೀಯ ರಸ್ತೆಗಳಿಗೆ ಪೂರಕವಾದ 23 ಅತ್ಯಾಧುನಿಕ ಸುರಕ್ಷತಾ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ. ಮುಂದಿನ ಪೀಳಿಗೆಯ ಕನೆಕ್ಟೆಡ್ ವೆಹಿಕಲ್ ಪ್ಲಾಟ್ಫಾರ್ಮ್ ಆದ ‘ಫ್ಲೀಟ್ ಎಡ್ಜ್’ ಮೂಲಕ ಚಾಲನಾ ವರ್ತನೆಯನ್ನು ನೈಜ ಸಮಯದಲ್ಲಿ ಮೇಲ್ವಿಚಾರಣೆ ಮಾಡಬಹುದಾಗಿದೆ. ಈ ಮೂಲಕ ತನ್ನ ಟ್ರಕ್ಗಳನ್ನು ಈ ಪ್ರತಿಷ್ಠಿತ ಅಂತರಾಷ್ಟ್ರೀಯ ಗುಣಮಟ್ಟಕ್ಕೆ ಏರಿಸಿದ ಏಕೈಕ ಭಾರತೀಯ ತಯಾರಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಟಾಟಾ ಮೋಟಾರ್ಸ್ ಪಾತ್ರವಾಗಿದೆ.




