
ಪ್ರಗತಿವಾಹಿನಿ ಸುದ್ದಿ, ಕಾರ್ಕಳ: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಜೊತೆ ಡೀಲ್ ಮಾಡಿಕೊಂಡು ಹಣ ಪಡೆದಿದ್ದಾಗಿ ಬಿಜೆಪಿಯ ವಿಜೇತ ಅಭ್ಯರ್ಥಿ ಸುನೀಲ್ ಕುಮಾರ್ ಅವರು ಆರೋಪಿಸಿದ ಹಿನ್ನೆಲೆಯಲ್ಲಿ ತಮ್ಮ ವಿರುದ್ಧದ ಆರೋಪದ ಸತ್ಯಾಸತ್ಯತೆಗೆ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ ಕಾರ್ಕಳದ ಶ್ರೀ ಮಾರಿಯಮ್ಮ ದೇವಿ ಮೊರೆ ಹೋಗಿದ್ದಾರೆ.
ಅವರು ದೇಗುಲಕ್ಕೆ ಭೇಟಿ ನೀಡಿ ತೆಂಗಿನಕಾಯಿ ಹಿಡಿದು ಪ್ರಾರ್ಥಿಸಿ ಸತ್ಯಾಸತ್ಯತೆ ತೋರಿಸಿಕೊಡುವಂತೆ ಮಾರಿಯಮ್ಮ ದೇವಿಯಲ್ಲಿ ಮೊರೆಯಿಟ್ಟರು.
ನಂತರ ಪರಪ್ಪು ಸಮೀಪದ ತಮ್ಮ ಚುನಾವಣಾ ಕಾರ್ಯಾಲಯ ‘ಪಾಂಚಜನ್ಯ’ದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸುನೀಲ್ ಕುಮಾರ್ ಅವರು ತಾವು ಮಾಡಿದ ಆರೋಪವನ್ನು ಸಾಬೀತುಪಡಿಸಬೇಕು. ಮಾರಿಯಮ್ಮನ ಸನ್ನಿಧಿಗೆ ಬಂದು ಆ ಬಗ್ಗೆ ಪ್ರಮಾಣ ಮಾಡಿ ಹೇಳಬೇಕು. ಇಲ್ಲವೇ ಕ್ಷಮೆ ಯಾಚಿಸಬೇಕು” ಎಂದು ಆಗ್ರಹಿಸಿದರು.
ತಾವು ಹಣ ಮಾಡಿಲ್ಲ ಎಂದು ಸಮರ್ಥಿಸಿಕೊಂಡ ಅವರು, “ಹಣ ಮಾಡುವುದಿದ್ದರೆ ಇಲ್ಲಿಯವರೆಗೆ ಬರುವ ಅಗತ್ಯವಿರಲಿಲ್ಲ. ಸುನೀಲ್ ಕುಮಾರ್ ಆರೋಪದಲ್ಲಿ ಸಥ್ಯವಿಲ್ಲ. ಕಾರ್ಕಳದ ಮತದಾರರು ಒಬ್ಬ ಭ್ರಷ್ಟ ಹಾಗೂ ಢೋಂಗಿ ಹಿಂದುತ್ವವಾದಿಯನ್ನು ಗೆಲ್ಲಿಸಿದ್ದಾರೆ. ಆದರೆ ನನ್ನ ಹೋರಾಟ ಹೀಗೆಯೇ ಮುಂದುವರಿಯಲಿದೆ” ಎಂದರು.
ಮುತಾಲಿಕ್ ಅವರ ಬೆಂಬಲಿಗರು ಹಾಗೂ ಶ್ರೀರಾಮ ಸೇನೆ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.