ಪ್ರಗತಿವಾಹಿನಿ ಸುದ್ದಿ: ಮಳಿ ಬೆಳಿ ಸಂಪ್ರಿಪೋ…ಗುಡುಗು ಸಿಡ್ಲು ಭಾಳ ಐತ್ರಿಪೋ…ದುಡಿಯೋ ರೈತನ ಮನ್ಯಾಗ ಅನ್ನಕ್ಕ ಕೊರತಿಲ್ರಿಪೋ…’ಇದು ಗುರುವಾರ ಆಗಿ ಹುಣ್ಣಿಮೆಯ ದಿನ ಧಾರವಾಡ ತಾಲೂಕಿನ ಮರೇವಾಡ ಗ್ರಾಮದ ಶ್ರೀಬಸವಣ್ಣ (ನಂದೀಶ್ವರ) ದೇವರ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಇಳಿಹೊತ್ತಿನಲ್ಲಿ ಜರುಗಿದ ರಥೋತ್ಸವದ ಕೊನೆಗೆ ಆಗಿರುವ ಈ ವರ್ಷದ ಕಾರ್ಣಿಕದ ಹೇಳಿಕೆ.
ಅಮ್ಮಿನಬಾವಿ ಗ್ರಾಮದ ಬಸವಣ್ಣ(ನಂದೀಶ್ವರ) ದೇವಾಲಯದಿಂದ ನಂದಿಕೋಲು-ಪಲ್ಲಕ್ಕಿ ಜೊತೆಗೆ ಸಂಸ್ಥಾನ ಪಂಚಗೃಹ ಹಿರೇಮಠದ ಪರವಾಗಿ ಸೋಮಲಿಂಗಶಾಸ್ತ್ರಿ ಗುಡ್ಡದಮಠ ಮತ್ತು ದೇವಾಲಯದ ಪ್ರಧಾನ ಅರ್ಚಕ ಬಸವರಾಜ ಪೂಜಾರ ಆಗಮಿಸಿ ರಥವನ್ನೇರಿದ ನಂತರ ರಥೋತ್ಸವ ಆರಂಭಗೊಂಡಿತು. ನಂದಿಕೋಲು, ಪಲ್ಲಕ್ಕಿ, ಕರಡಿ ಮಜಲು ವಾಧ್ಯಮೇಳ ಹಾಗೂ ಭಕ್ತರೆಲ್ಲರ ಭಕ್ತಿಯ ಜಯಘೋಷದ ಮಧ್ಯೆ ಸಾಗಿದ ರಥಕ್ಕೆ ಭಕ್ತರು ಬಾಳೆಹಣ್ಣು, ಉತ್ತತ್ತಿ ಒಗೆದು ಭಕ್ತಿ ಸಮರ್ಪಿಸಿ ರಥೋತ್ಸವವನ್ನು ಕಣ್ತುಂಬಿಕೊಂಡರು. ಮಳೆಯ ಕಾರಣದಿಂದಾಗಿ ರಥೋತ್ಸವ ತಡವಾಗಿ ಆರಂಭಗೊಂಡಿತು.
ದಾಸೋಹ ಉದ್ಘಾಟನೆ
ಜಾತ್ರಾ ಮಹೋತ್ಸವದ ಅಂಗವಾಗಿ ದೇವಾಲಯದ ಸೇವಾ ಸಮಿತಿ ಹಮ್ಮಿಕೊಂಡಿದ್ದ ವಿಶೇಷ ಮಹಾಪ್ರಸಾದದ ಅನ್ನಸಂತರ್ಪಣೆಯ ದಾಸೋಹ ಕಾರ್ಯವನ್ನು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಶ್ರೀಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಇಡೀ ದಿನ ಜರುಗಿದ ಅನ್ನಸಂತರ್ಪಣೆಯಲ್ಲಿ ಭಕ್ತರು ಮಹಾಪ್ರಸಾದ ಸೇವಿಸಿದರು. ಇದಕ್ಕೂ ಮುನ್ನ ಪ್ರಾತಃಕಾಲದಲ್ಲಿ ಶ್ರೀಬಸವಣ್ಣ(ನಂದೀಶ್ವರ) ದೇವರ ವಿಗ್ರಹಕ್ಕೆ ಏಕಾದಶ ಮಹಾರುದ್ರಾಭಿಷೇಕ, ನೂರೊಂದು ಬಿಲ್ವಾರ್ಚನೆ, ಅಲಂಕಾರ ಪೂಜೆ, ಮಹಾಮಂಗಳಾರತಿ ಶೇಖರಯ್ಯ ಹಿರೇಮಠ ಹಾಗೂ ಅಂಕಲಯ್ಯ ಯರಗಂಬಳಿಮಠ ಅವರ ವೈದಿಕತ್ವದಲ್ಲಿ ನಡೆದವು.
ಮರೇವಾಡ ಗ್ರಾಮದ ಶ್ರೀಬಸವಣ್ಣ(ನಂದೀಶ್ವರ) ದೇವರ ದೇವಾಲಯದ ಸೇವಾ ಸಮಿತಿಯ ಎಲ್ಲ ಪದಾಧಿಕಾರಿಗಳು, ಸ್ಥಳೀಯ ವಿವಿಧ ಕ್ಷೇತ್ರಗಳ ಗಣ್ಯರು, ರೈತ ಬಾಂಧವರು, ಯುವಕ-ಯುವತಿ ಮಂಡಳಗಳ ಪ್ರಮುಖರು ಇದ್ದರು. ಹುಬ್ಬಳ್ಳಿ-ಧಾರವಾಡ ಮಹಾನಗರ ಸೇರಿದಂತೆ ಸಮೀಪದ ಹಲವು ಗ್ರಾಮಗಳ ಭಕ್ತಗಣ ದೊಡ್ಡ ಸಂಖ್ಯೆಯಲ್ಲಿ ನೆರೆದಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ