ಬಿಜೆಪಿ ಶಿಸ್ತಿನ ಪಕ್ಷ ಅಲ್ಲವೇ.. ಮಾತೆತ್ತಿದ್ದರೆ ಶಿಸ್ತಿನ ಬಗ್ಗೆ ಮಾತಾಡ್ತಾರೆ. ಈಗ ಶಿಸ್ತು ತೋರಿಸಲಿ ನೋಡೋಣ – ಡಿ.ಕೆ.ಶಿವಕುಮಾರ ಟಾಂಗ್
*ಹುಬ್ಬಳ್ಳಿಯಲ್ಲಿ ಡಿ.ಕೆ. ಶಿವಕುಮಾರ್ ಅವರ ಮಾಧ್ಯಮ ಪ್ರತಿಕ್ರಿಯೆ*
ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ – ಎಲ್ಲ ಗ್ರಾಮ ಪಂಚಾಯಿತಿ ಸದಸ್ಯರಿಗೆ ಗೊತ್ತಿದೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಜಾರಿಗೆ ತಂದ ನರೇಗಾ ಯೋಜನೆಯಿಂದ ಪಂಚಾಯ್ತಿಗಳಿಗೆ ಕೋಟ್ಯಂತರ ರುಪಾಯಿ ಅನುದಾನ ಬಂದಿದೆ. ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ನರೇಗಾ ಇಲ್ಲದಿದ್ದರೆ ಪಂಚಾಯ್ತಿಗಳಿಗೆ ಜೀವವೇ ಇಲ್ಲ. ಅವುಗಳಿಗೆ ಶಕ್ತಿ ಬಂದಿದೆ ಎಂದರೆ ಕಾಂಗ್ರೆಸ್ ಸರಕಾರದ ನರೇಗಾ ಯೋಜನೆಯಿಂದ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಹಿಂದೆ ಎಸ್.ಎಂ. ಕೃಷ್ಣ ಅವರ ಸರಕಾರವಿದ್ದಾಗ ಇದೇ ಧಾರವಾಡದಲ್ಲಿ ಬೇಲೂರು ಘೋಷಣೆ ಅಂತ ಮಾಡಿದೆವು. ಆಗ 27 ಇಲಾಖೆಗಳನ್ನು ಈ ಯೋಜನೆಯಡಿ ತಂದೆವು. ಜೆ.ಎಚ್. ಪಟೇಲ್ ಅವರ ಸರಕಾರವಿದ್ದಾಗ ಬರೀ ಒಂದು ಲಕ್ಷ ರು. ಅನುದಾನ ಸಿಗುತ್ತಿತ್ತು. ಅದನ್ನು ಕಾಂಗ್ರೆಸ್ ಸರಕಾರ ಹೆಚ್ಚು ಮಾಡಿತು ಎಂದರು.
ನಮ್ಮ ಶಕ್ತಿ, ನಮಗಿರುವ ನಂಬರ್ ಅನ್ವಯ ಒಬ್ಬರು ಅಭ್ಯರ್ಥಿಯನ್ನು ಹಾಕಿದ್ದೇವೆ. ಬಿಜೆಪಿಯವರು 15 ಸೀಟುಗಳನ್ನು ಗೆಲ್ಲುತ್ತೇವೆ ಎನ್ನುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್ ಅವರು, ಅವರು ಬರೀ 15 ಅಲ್ಲ, ಎಲ್ಲ 25 ಸ್ಥಾನಗಳನ್ನೂ ಗೆಲ್ಲಬಹುದು. ಗೆಲ್ತಾರೆ ಬಿಡಿ ಎಂದು ಛೇಡಿಸಿದರು.
ಇವತ್ತು ಹೆಣ್ಮಕ್ಕಳಿಗೆ ಮೀಸಲಾತಿ ಇರಬಹುದು, ಅನುದಾನ ಇರಬಹುದು. ಇವೆಲ್ಲ ಕಾಂಗ್ರೆಸ್ ಸರಕಾರದ ಕೊಡುಗೆ. ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಇವುಗಳನ್ನು ಸ್ಮರಿಸಿಕೊಳ್ಳುತ್ತಾರೆ ಎಂಬ ವಿಶ್ವಾಸ ನಮಗಿದೆ.
ಜತೆಗೆ ಈ ರಾಜ್ಯದಲ್ಲಿ ಬದಲಾವಣೆ ಆಗಬೇಕು ಎಂದು ಜನ ಬಯಸಿದ್ದಾರೆ. ಈಗಾಗಲೇ ನಿಮ್ಮ ಪಕ್ಕದ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ (ಹಾನಗಲ್) ಜನ ತೀರ್ಪು ಕೊಟ್ಟಿದ್ದಾರೆ. ಈಗ ವಿಧಾನ ಪರಿಷತ್ ಚುನಾವಣೆಯಲ್ಲೂ ಎಲ್ಲ ಕಡೆ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಬೆಳಗಾವಿಯಲ್ಲಿ ಲಖನ್ ಜಾರಕಿಹೊಳಿ ಪಕ್ಷೇತರ ಅಭ್ಯರ್ಥಿ ಆಗಿರುವುದರಿಂದ ಕಾಂಗ್ರೆಸ್ ಗೆ ತೊಂದರೆ ಆಗುತ್ತಾ ಎಂಬ ಪ್ರಶ್ನೆಗೆ, “ಬಿಜೆಪಿ ಶಿಸ್ತಿನ ಪಕ್ಷ ಅಲ್ಲವೇ.. ಮಾತೆತ್ತಿದ್ದರೆ ಶಿಸ್ತಿನ ಬಗ್ಗೆ ಮಾತಾಡ್ತಾರೆ. ಈಗ ಶಿಸ್ತಿನ ಬಗ್ಗೆ ತೋರಿಸಲಿ ನೋಡೋಣ.
ದಲಿತರು, ಹಿಂದುಳಿದ ವರ್ಗದವರಿಗೆ ಹೆಚ್ಚಿನ ಅಧಿಕಾರ ಕೊಟ್ಟಿದ್ದೇ ಬಿಜೆಪಿ, ಅವರಿಗೆ ಸಂವಿಧಾನದ ಹಕ್ಕು ಕೊಟ್ಟಿರೋದೇ ಬಿಜೆಪಿ ಎಂದು ಸಚಿವ ಈಶ್ವರಪ್ಪ ಹೇಳಿದ್ದಾರಲ್ಲ ಎಂಬ ಪ್ರಸ್ತಾಪಕ್ಕೆ, ” ಶಿಸ್ತಿನ ಈಶ್ವರಪ್ಪನವರು ರಾಜ್ಯಪಾಲರಿಗೆ ಪತ್ರ ಬರೆದದ್ದು ಆಯ್ತು. ತಮಗಾದ ನೋವು ತೋಡಿಕೊಂಡದ್ದೂ ಆಯ್ತು. ಅವರು ದೊಡ್ಡ, ದೊಡ್ಡ ಮಾತು ಆಡುವ ಮೊದಲು ಬೆಳಗಾವಿಯಲ್ಲಿ ಈಗ ಅವರ ಪಕ್ಷದಲ್ಲಿ ಆಗಿರೋದರ ಬಗ್ಗೆ ಶಿಸ್ತು ಕ್ರಮದ ಬಗ್ಗೆ ಮಾತಾಡಲಿ ಎಂದರು.
ಯಾವ ವಿಷಯವಾದರೂ ಸರಿ, ಈಶ್ವರಪ್ಪ ಅವರು ಸಮಯ ನಿಗದಿ ಮಾಡಿದರೆ ಚರ್ಚೆಗೆ ಬರಲು ಸಿದ್ದ ಎಂದು ಡಿ.ಕೆ.ಶಿವಕುಮಾರ ಹೇಳಿದರು.
ದೆಹಲಿ ತಲುಪಿದ ರಮೇಶ ಜಾರಕಿಹೊಳಿ; ವಿವೇಕರಾವ್ ಪಾಟೀಲ ಬಿಜೆಪಿ ಸೇರ್ಪಡೆ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ