ಪ್ರಗತಿವಾಹಿನಿ ಸುದ್ದಿ, ಬೆಂಗಳೂರು -ಅಂತೂ ಕರ್ನಾಟಕದ ಬಿಜೆಪಿ ನಾಯಕರಿಗೆ ಉಸಿರು ಬಂತು. ಹೋದಲ್ಲಿ, ಬಂದಲ್ಲಿ ಅದೇ ಪ್ರಶ್ನೆಯಿಂದಾಗಿ ತಲೆ ಎತ್ತದಂತಾಗಿದ್ದ ಸಚಿವರು, ಸಂಸದರು ಈಗ ತಲೆ ಎತ್ತುವಂತಾಗಿದೆ.
ಇದಕ್ಕೆ ಕಾರಣ ಅಂತೂ ಇಂತು ಕೇಂದ್ರ ಸರಕಾರ ಮೂಗಿಗೆ ತುಪ್ಪ ಸವರಿದ್ದು. ಪ್ರವಾಹ ಅಪ್ಪಳಿಸಿ 2 ತಿಂಗಳ ನಂತರ, ತೀವ್ರ ಟೀಕೆಗಳನ್ನು ಎದುರಿಸಿದ ನಂತರ ಕೇಂದ್ರ ಸರಕಾರ ಕರ್ನಾಟಕದ ಪ್ರವಾಹ ಪರಿಹಾರಕ್ಕೆ 1200 ಕೋಟಿ ರೂ. ಬಿಡುಗಡೆ ಮಾಡಿದೆ.
ಬಕಾಸುರನ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ ಎನ್ನುವಂತೆ 50 ಸಾವಿರ ಕೋಟಿ ರೂ. ಹಾನಿಗೆ ಸಾವಿರ ಕೋಟಿ ಪರಿಹಾರ ನೀಡಿದೆ. ಇದೇ ಮಧ್ಯಂತರ ಪರಿಹಾರವನ್ನು ಪ್ರವಾಹ ಅಪ್ಪಳಿಸಿದ ತಕ್ಷಣ ನೀಡಿದ್ದರೆ ಬಿಜೆಪಿಯ ಹಾಗೂ ಅದರ ಸಂಸದ, ಶಾಸಕರಿಗೆ ಸ್ವಲ್ಪವಾದರೂ ಮರ್ಯಾದೆ ಉಳಿಯುತ್ತಿತ್ತು.
ಅವರವರೇ ಕಚ್ಚಾಡಿ, ಜನರಿಂದ ಉಗಿಸಿಕೊಂಡ ನಂತರ ಕೇಂದ್ರ ಸರಕಾರ ಈ ಅಲ್ಪ ಪರಿಹಾರ ಮಂಜೂರು ಮಾಡಿದೆ. ಬೆಳಗಾವಿ ಜಿಲ್ಲೆಯೊಂದರಲ್ಲೇ 11 ಸಾವಿರ ಕೋಟಿ ರೂ.ಗಿಂತ ಹೆಚ್ಚು ಹಾನಿಯಾಗಿದೆ. ರಾಜ್ಯಾದ್ಯಂತ ಸುಮಾರು 50 ಸಾವಿರ ಕೋಟಿ ರೂ ನಷ್ಟವಾಗಿದೆ. ಆದರೆ ಈಗ ಇಷ್ಟು ತಡವಾಗಿ ಬಿಡುಗಡೆ ಮಾಡಿರುವುದು ಲೆಕ್ಕಕ್ಕೇ ಇಲ್ಲದ ಮೊತ್ತ.
ಈ ಮಧ್ಯೆ, ಪ್ರವಾಹ ಪರಿಹಾರ ಬಿಡುಗಡೆ ಮಾಡದ ಕೇಂದ್ರದ ಕ್ರಮವನ್ನು ಮತ್ತು ಈ ಬಗ್ಗೆ ಪ್ರಯತ್ನಿಸದ ಕೇಂದ್ರದ ಸಚಿವರು ಹಾಗೂ ರಾಜ್ಯದ ಸಂಸದರನ್ನು ಬಹಿರಂಗವಾಗಿ ಟೀಕಿಸಿದ್ದ ಶಾಸಕ ಬಸನಗೌಡ ಪಟೀಲ ಯತ್ನಾಳ್ ಅವರಿಗೆ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ನೋಟೀಸ್ ನೀಡಿದೆ. ತಮ್ಮ ಹೇಳಿಕೆಗಳಿಗೆ ಉತ್ತರಿಸುವಂತೆ ತಿಳಿಸಲಾಗಿದೆ.
ನೋಟೀಸಿಗೆ ಪ್ರತಿಕ್ರಿಯಿಸಿರುವ ಯತ್ನಾಳ ನಾನು ಯಾರಿಗೂ ಹೆದರುವವನಲ್ಲ ಎಂದಿದ್ದಾರೆ.
ಧನ್ಯವಾದ ಎಂದ ಸಿಎಂ, ಜೋಶಿ
ಕೇಂದ್ರ ಸರಕಾರ 1200 ಕೋಟಿ ರೂ. ಮಂಜೂರು ಮಾಡುವ ಸುದ್ದಿ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಕೇಂದ್ರ ಸಚಿವರಾದ ಸದಾನಂದ ಗೌಡ, ಪ್ರಹಲ್ಲಾದ ಜೋಶಿ ಕೇಂದ್ರಕ್ಕೆ ಕೃತಜ್ಞತೆ ಸಲ್ಲಿಸುವ ಟ್ವೀಟ್ ಮಾಡಿದ್ದಾರೆ.
ಈ ಪರಿಹಾರ ಬಿಡುಗಡೆಯಿಂದ ತಮಗೆ ಸ್ವಲ್ಪವಾದರೂ ಉಸಿರು ಬಿಡಲು ಅವಕಾಶವಾಗಿದೆ ಎಂದುಕೊಂಡಿರಬೇಕು ಅವರು. ಈವರೆಗೆ ಆಗಿದ್ದಾಯಿತು ಎಂದು ಇನ್ನಾದರೂ ರಾಜ್ಯದ ಎಲ್ಲ 25 ಸಂಸದರು ಒಟ್ಟಾಗಿ ಪ್ರಧಾನಿ ಭೇಟಿಯಾಗಿ ದೊಡ್ಡ ಮೊತ್ತದ ಪರಿಹಾರ ಬಿಡುಗಡೆಗೆ ಒತ್ತಾಯಿಸಬೇಕು. ಇಲ್ಲವಾದಲ್ಲಿ ಜನರ ಆಕ್ರೋಶಕ್ಕೆ ತುತ್ತಾಗುವುದರಲ್ಲಿ ಸಂಶಯವಿಲ್ಲ.
ರಾಜ್ಯದ ಹಣಕಾಸು ಪರಿಸ್ಥಿತಿ ಸರಿ ಇಲ್ಲ -ಸಿಎಂ ಬಹಿರಂಗ
ಪ್ರವಾಹದ ಹಾನಿ 11,193 ಕೋಟಿ ರು. ; ಬಿಡುಗಡೆ 867 ಕೋಟಿ!
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ