Kannada NewsLatestNational

*ಪಾತಾಳಗಂಗಾ ನದಿ ಪ್ರವಾಹಕ್ಕೆ ಕೊಚ್ಚಿ ಹೋದ 3,000 ಎಲ್ ಪಿಜಿ ಸಿಲಿಂಡರ್‌ಗಳು*

ಪ್ರಗತಿವಾಹಿನಿ ಸುದ್ದಿ: ಮಹಾರಾಷ್ಟ್ರದಾದ್ಯಂತ ಭಾರೀ ಮಳೆಯಾಗುತ್ತಿದ್ದು, ರಾಯಗಢದ HPCL ಬಾಟ್ಲಿಂಗ್ ಸ್ಥಾವರಕ್ಕೆ ಪಾತಾಳಗಂಗಾ ನದಿ ನೀರು ನುಗ್ಗಿ 3,000 ಎಲ್ ಪಿಜಿ ಸಿಲಿಂಡರ್‌ಗಳು ಪ್ರವಾಹದ ಅಬ್ಬರಕ್ಕೆ ತೇಲಿ ಹೋಗಿವೆ.

ಸಿಲಿಂಡರ್‌ಗಳು ತೇಲಿ ಹೋಗುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಎಲ್ ಪಿಜಿ ಸಿಲಿಂಡರ್‌ ಅಭಾವದ ನಡುವೆ ಈ ಘಟನೆ ಸಂಭವಿಸಿದ್ದು, ತೀವ್ರ ಆಘಾತಕ್ಕೆ ಕಾರಣವಾಗಿದೆ.

Home add -Advt

ಪನ್ವೇಲ್ ತಾಲೂಕಿನ ಚವಾಣೆ ಗ್ರಾಮದಲ್ಲಿರುವ HPCL ನ ಪಾತಾಳಗಂಗಾ ಎಲ್ ಪಿಜಿ ಬಾಟ್ಲಿಂಗ್ ಸ್ಥಾವರದಲ್ಲಿ ಈ ಘಟನೆ ನಡೆದಿದೆ. ಅವುಗಳಲ್ಲಿ ಕೆಲವು ಸಿಲಿಂಡರ್‌ಗಳಲ್ಲಿ ಗ್ಯಾಸ್‌ ತುಂಬಿವೆ, ಕೆಲವು ಖಾಲಿಯಾಗಿದ್ದವು ಎನ್ನಲಾಗಿದೆ.

ನದಿಯ ಉದ್ದಕ್ಕೂ ತೇಲುತ್ತಿರುವ ಸಿಲಿಂಡರ್‌ಗಳು ಕಂಡುಬಂದಿವೆ. ಘಟನೆಯ ಬಳಿಕ ಜಿಲ್ಲಾಡಳಿತ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಿದೆ. ರಾಯಗಡ ಜಿಲ್ಲಾಧಿಕಾರಿ ಕಿಶನ್ ಜವಾಲೆ ಅವರು, ನದಿಯಲ್ಲಿತೇಲಿ ಬರುವ ಅಥವಾ ದಡಕ್ಕೆ ಬರುವ ಸಿಲಿಂಡರ್ ಯಾವ ಸ್ಥಿತಿಯಲ್ಲಿವೆ ಎಂಬ ಬಗ್ಗೆ ಮಾಹಿತಿ ಇಲ್ಲ. ಇದರಿಂದಾಗಿ ಅವುಗಳ ಬಳಿಗೆ ಹೋಗದಂತೆ ಜನರಿಗೆ ಮನವಿ ಮಾಡಿದ್ದಾರೆ. ಯಾವುದೇ ಸಿಲಿಂಡರ್‌ನ್ನು ಎತ್ತಿಕೊಳ್ಳಬಾರದು, ಸ್ಥಳಾಂತರಿಸಬಾರದು ಅಥವಾ ಮನೆಗೆ ತೆಗೆದುಕೊಂಡು ಹೋಗಬಾರದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಯಾವುದೇ ಸಿಲಿಂಡರ್ ಕಾಣಿಸಿದರೂ ತಕ್ಷಣ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಅದರಿಂದ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಬೇಕು. ಅವುಗಳನ್ನು ಮುಟ್ಟುವುದರಿಂದ ಜೀವಕ್ಕೆ ಅಪಾಯ ಆಗುವ ಸಾಧ್ಯತೆ ಇದೆ ಎಂದು ಸಾರ್ವಜನಿಕರಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Related Articles

Back to top button