Karnataka NewsLatest

ವಿಜಯ್ ದಿವಸದಂದು ಉದ್ಘಾಟನೆಗೆ ಸಿದ್ದಗೊಳ್ಳಲಿದೆ ರಾಷ್ಟ್ರೀಯ ಸೈನಿಕ ಸ್ಮಾರಕ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –  ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಸೈನಿಕ ಸ್ಮಾರಕಕ್ಕೆ ಶುಕ್ರವಾರ ಬೆಳಗ್ಗೆ  ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ್ ಹಾಗೂ ರಾಜ್ಯಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್  ಹಿರಿಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಕಾಮಗಾರಿಯ ಪ್ರಗತಿ ಪರಿಶಿಲಿಸಿದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ನಿರ್ದೇಶನದಂತೆ ನಗರಾಭಿವೃದ್ಧಿ ಇಲಾಖೆಯ  ರಜನೀಶ್ ಗೋಯೆಲ್, ಸ್ಮಾರಕ ಟ್ರಸ್ಟ್ ಸದಸ್ಯರು ಮತ್ತು ಇನ್ನಿತರ ಹಿರಿಯ ಅಧಿಕಾರಿಗಳೊಂದಿಗೆ ಶಂಕರಗೌಡ ಪಾಟೀಲ  ಭೇಟಿ ನೀಡಿ, ಬೃಹತ್ ವೀರಗಲ್ಲು ಸ್ಥಾಪನೆ ಸೇರಿದಂತೆ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು. 

ಇದೇ ಡಿಸೆಂಬರ್ 16ರ ವಿಜಯ್ ದಿವಸ್ ಆಚರಣೆ ವೇಳೆಗೆ ಬೆಂಗಳೂರಿನ ರಾಷ್ಟ್ರೀಯ ಸೈನಿಕ ಸ್ಮಾರಕ ಉದ್ಘಾಟಿಸಲು ಮುಖ್ಯಮಂತ್ರಿ ಯಡಿಯೂರಪ್ಪನವರು ತೀರ್ಮಾನಿಸಿದ್ದಾರೆ. ಹಾಗಾಗಿ ಸ್ಮಾರಕದ ಬಾಕಿ ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸುವ ಕೆಲಸಕ್ಕೆ ವೇಗ ದೊರಕಿಸಲು ಈ ಭೇಟಿ ಮಹತ್ವದ್ದಾಗಿದೆ.
ಈ ನಿಟ್ಟಿನಲ್ಲಿ ಇಂದು ಸ್ಮಾರಕದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಬೃಹತ್ 80 ಅಡಿ ಎತ್ತರದ ವೀರಗಲ್ಲು, ಮೋಟಿವೇಶನ್ ಹಾಲ್, ಪ್ರದರ್ಶಿತ ಸೇನಾಪಡೆ ವಸ್ತುಗಳು ಸೇರಿದಂತೆ ಪ್ರಮುಖ ಸ್ಥಳಗಳ ಪರಿವೀಕ್ಷಣೆ ನಡೆಸಲಾಯಿತು.
ಮುಖ್ಯಮಂತ್ರಿ ಯಡಿಯೂರಪ್ಪನವರು 2009ರ ಫೆಬ್ರವರಿ ತಿಂಗಳಿನಲ್ಲಿ ಸ್ಮಾರಕದ ಶಂಕುಸ್ಥಾಪನೆ ನೆರವೇರಿಸಿದ್ದರು. 2 -3 ವರ್ಷಗಳಲ್ಲಿ ಸ್ಮಾರಕ ಸಿದ್ದಗೊಂಡು ಲೋಕಾರ್ಪಣೆಗೊಳ್ಳಬೇಕಿತ್ತು. ಆದರೆ ನಾನಾ ಕಾರಣಗಳಿಂದ ಕಾಮಗಾರಿಗಳು ಮಂದಗತಿಯಲ್ಲಿ ಸಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರಗೌಡ್ ಪಾಟೀಲ್ ಅವರು  ’ವಿಜಯ್ ದಿವಸ್’ ವೇಳೆಗೆ ಸ್ಮಾರಕ ಸಂಪೂರ್ಣ ಸಿದ್ದಗೊಂಡು ಉದ್ಘಾಟನೆಗೆ ಸಿದ್ದವಾಗುವ ನಿಟ್ಟಿನಲ್ಲಿ ಬಾಕಿ ಉಳಿದಿರುವ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲು ಆದೇಶಿಸಲಾಗಿದೆ.  ಮತ್ತೆ ನವೆಂಬರ್ 20ರಂದು ಸ್ಮಾರಕದ ಪರಿವೀಕ್ಷಣೆ ನಡೆಸಲಾಗುವುದು. ಆ ವೇಳೆಗೆ ವೀರಗಲ್ಲು ಸ್ಥಾಪನೆ, ಸ್ಮಾರಕದ ಸೌಂದರ್ಯೀಕರಣ, ಪ್ರದರ್ಶಿತ ವಸ್ತುಗಳ ಸುಸ್ಥಿತಿ, ರಕ್ಷಣೆ ಸೇರಿದಂತೆ ಎಲ್ಲಾ ಕಾಮಗಾರಿಗಳು ಪೂರ್ಣಗೊಳಿಸಲಾಗುತ್ತದೆ ಎಂದು  ತಿಳಿಸಿದರು.
 ಮುಖ್ಯಮಂತ್ರಿಗಳು ತಮಗೆ ನೀಡಿದ ಮೊದಲ ಜವಾಬ್ದಾರಿ ಇದಾಗಿದ್ದು, ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುವ ಸ್ಮಾರಕ ಲೋಕಾರ್ಪಣೆಗೊಂಡು ದಕ್ಷಿಣ ಭಾರತದ ಹೆಮ್ಮೆಯ ಸ್ಮಾರಕ ಎನಿಸಿಕೊಳ್ಳಬೇಕು ಎನ್ನುವುದು ನನ್ನ ಆಸೆಯಾಗಿದೆ ಎಂದು ಅವರು ಹೇಳಿದರು.
10 ವರ್ಷಗಳ ಹಿಂದೆ ಅಂದು ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪನವರೇ ಇದರ ಶಂಕುಸ್ಥಾಪನೆ ನಡೆಸಿದ್ದು, ನಮ್ಮ ಹುತಾತ್ಮ ವೀರಯೋಧರ ಗೌರವಾರ್ಥ ನಿರ್ಮಿಸಲಾಗಿರುವ ಈ ಹೆಮ್ಮೆಯ ಸ್ಮಾರಕವನ್ನು ಆದಷ್ಟು ಶೀಘ್ರದಲ್ಲಿ ಲೋಕಾರ್ಪಣೆ ಮಾಡಬೇಕು ಎನ್ನುವುದು ಅವರ ಇಚ್ಛೆಯಾಗಿದೆ. ಇನ್ನೊಂದು ತಿಂಗಳಲ್ಲಿ ಎಲ್ಲಾ ಕಾಮಗಾರಿಗಳು ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ” ಎಂದು ಹೇಳಿದರು ಶಂಕರಗೌಡ ಪಾಟೀಲ ತಿಳಿಸಿದರು.

​​

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button