
ಪ್ರಗತಿವಾಹಿನಿ ಸುದ್ದಿ: ಕಳೆದ ಮೂರು ದಿನಗಳ ಹಿಂದೆ ನಡೆದ ಕೊಲೆ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳ ಕಾಲಿಗೆ ಪೊಲೀಸರು ಗುಂಡೇಟು ಹೊಡೆದಿದ್ದಾರೆ. ಗುಂಡೇಟಿನಿಂದ ಆರೋಪಿಗಳು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.
ಮೂರು ದಿನಗಳ ಹಿಂದೆ ಹುಬ್ಬಳ್ಳಿಯ ಮಂಟೂರು ರಸ್ತೆಯ ಬ್ಯಾಳಿ ಪ್ಲಾಟ್ ಬಳಿ, ಹಳೇ ದ್ವೇಷದ ಹಿನ್ನೆಲೆಯಲ್ಲಿ ಮಲ್ಲಿಕ್ ಅದಂಬಾಯಿ ಎಂಬುವವರನ್ನು ಸೆಟ್ಲಮೆಂಟ್ ಗ್ಯಾಂಗ್ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಡಿಗೇರಿ ಪೊಲೀಸರು ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಿದ್ದರು.
ಆದರೆ ಬಂಧಿತ ಆರೋಪಿಗಳನ್ನ ಉಳಿದ ಆರೋಪಿಗಳನ್ನು ತೋರಿಸಲು ಘಟನಾ ಸ್ಥಳಕ್ಕೆ ಕರೆದೊಯ್ಯುತ್ತಿದ್ದಾಗ, ಮುಖ್ಯ ಆರೋಪಿಗಳಾದ ಬಾಲರಾಜ್ ಅಲಿಯಾಸ್ ಬಂಗಾರ ಬಾಲ್ಯಾ ಮತ್ತು ಮಹಮ್ಮದ್ ಶೇಖ್ ಅವರು ಪೊಲೀಸರ ಮೇಲೆ ಕಲ್ಲು ತೂರಾಡಿ ತಪ್ಪಿಸಿಕೊಳ್ಳಲು ಯತ್ನಿಸಿದರು. ಈ ಸಂದರ್ಭದಲ್ಲಿ ಬೆಂಡಿಗೇರಿ ಠಾಣಾ ಇನ್ಸ್‌ಪೆಕ್ಟರ್ ಎಸ್.ಆರ್ ನಾಯ್ಕ ಮತ್ತು ಅವರ ತಂಡ ಇಬ್ಬರು ಪ್ರಮುಖ ಆರೋಪಿಗಳ ಕಾಲಿಗೆ ಗುಂಡು ಹಾರಿಸಿದೆ.
ಆರೋಪಿಗಳ ಕಲ್ಲು ತೂರಾಟದಿಂದ ಪೊಲೀಸರಿಗೂ ಗಾಯಗಳಾಗಿದ್ದು, ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಮಾಹಿತಿ ತಿಳಿದ ಕೂಡಲೇ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ, ಗಾಯಗೊಂಡ ಪೊಲೀಸರ ಆರೋಗ್ಯ ವಿಚಾರಿಸಿ, ಘಟನೆಯ ಕುರಿತು ಪರಿಶೀಲನೆ ನಡೆಸಿದ್ದಾರೆ.




