*ಯುವ ಪೀಳಿಗೆ ಅಜ್ಞಾನ-ದುಶ್ಚಟಗಳಿಂದ ದೂರವಿದ್ದು ಉತ್ತಮ ಶಿಕ್ಷಣ ಪಡೆಯಬೇಕು: ಎಂ. ಎಂ. ಕಾಂಬಳೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬಡತನದಲ್ಲಿ ಹುಟ್ಟಿ ಬಡತನದಲ್ಲಿ ಬೆಳೆದು ಉತ್ತಮ ಶಿಕ್ಷಣವನ್ನು ಪಡೆದು ದೇಶದಲ್ಲಿರುವ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಹೋರಾಡಿದ ಮಹಾನ್ ವ್ಯಕ್ತಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಎಂದು ಬೆಳಗಾವಿಯ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಎಂ. ಎಂ. ಕಾಂಬಳೆ ಅವರು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ ಹಾಗೂ ಸರ್ಕಾರಿ ಸರದಾರ್ಸ ಪದವಿಪೂರ್ವ ಕಾಲೇಜು ಬೆಳಗಾವಿ ಇವರ ಸಯುಂಕ್ತ ಆಶ್ರಯದಲ್ಲಿ ಶುಕ್ರವಾರ (ಜುಲೈ 24) ರಂದು ಜರುಗಿದ ಭಾರತ ರತ್ನ ಡಾ. ಬಿ ಆರ್ ಅಂಬೇಡ್ಕರ್ ಓದು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಲಂಡನ್ ನಲ್ಲಿ ಕಾನೂನು ಪದವಿಯನ್ನು ಪೂರ್ಣಗೊಳಿಸಿದ ಬಾಬಾಸಾಹೇಬರು ತಮ್ಮ ಜೀವನದ ಬಗ್ಗೆ ಯೋಚಿಸದೇ ತಮ್ಮ ದೇಶದ ಬಗ್ಗೆ ಯೋಚಿಸುತ್ತ ನಮ್ಮ ದೇಶದ ಸಾಮಾಜಿಕ ಅಸ್ಪೃಶ್ಯತೆ, ಮೂಡ ನಂಬಿಕೆ ಮುಂತಾದವುಗಳನ್ನು ಸಮಾಜದಿಂದ ಹೋಗಲಾಡಿಸಲು ಶ್ರಮ ಪಟ್ಟಿದ್ದಾರೆ ಎಂದರು.
ಪ್ರತಿಯೊಬ್ಬ ವ್ಯಕ್ತಿಗೂ ಒಳ್ಳೆಯ ಶಿಕ್ಷಣ ದೊರೆಯ ಬೇಕು ಎನ್ನುವುದು ಅವರ ಮುಖ್ಯ ಗುರಿಯಾಗಿತ್ತು. ಜ್ಞಾನದ ಮೂಲಕ ಇಡೀ ಜಗತ್ತನ್ನೆ ಎದುರಿಸಬಹುದು. ಹಾಗಾಗಿ ಎಲ್ಲರೂ ಉತ್ತಮವಾದ ಶಿಕ್ಷಣವನ್ನು ಪಡೆದುಕೊಳ್ಳಬೇಕು ಎಂದು ಎಂ. ಎಂ. ಕಾಂಬಳೆ ಅವರು ವಿದ್ಯಾರ್ಥಿಗಳಿಗೆ ಕಿವಿಮಾತನ್ನು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಅವರು ಮಾತನಾಡಿ ವಿದ್ಯಾರ್ಥಿಗಳು ಪಠ್ಯಕ್ರಮ ಓದಿನ ಜೊತೆಗೆ ದಿನ ನಿತ್ಯ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳಸಿಕೊಳ್ಳಬೇಕು. ಭಾರತವು ಸ್ವತಂತ್ರವಾದ ನಂತರ ಭಾರತವು ವ್ಯವಸ್ಥಿತವಾಗಿ ಅಚ್ಚುಕಟ್ಟಾದ ರೀತಿಯಲ್ಲಿ ಮುಂದುವರಿಯುವುದಕ್ಕೆ ಡಾ. ಬಿ. ಆರ್. ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸಿ ಭಾರತೀಯ ಸಂವಿಧಾನದ ಶಿಲ್ಪಿಯಾದರು. ಡಾ. ಬಿ. ಆರ್. ಅಂಬೇಡ್ಕರ್ ಅವರು ಒಬ್ಬ ಒಳ್ಳೆಯ ಅರ್ಥಶಾಸ್ತ್ರಜ್ಞರು, ಅವರ ವೃತ್ತಿಜೀವನದ ಆರಂಭದಲ್ಲಿ ಅವರು ಅರ್ಥಶಾಸ್ತ್ರಜ್ಞ, ಪ್ರಾಧ್ಯಾಪಕ ಮತ್ತು ವಕೀಲರಾಗಿದ್ದರು ಅಷ್ಟೇ ಅಲ್ಲದೇ ವಿದೇಶದಲ್ಲಿ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ ಎಂದರು.
ಕಡು ಬಡತನ, ಕಷ್ಟದಾಯಕ ಜೀವವನ್ನು ಎದುರಿಸುತ್ತ ಮನದ ಬತ್ತಿ ಯಾವ ರೀತಿಯಾಗಿ ತನ್ನನ್ನು ತಾನು ಸುಟ್ಟುಕೊಂಡು ಬೆಳಕು ನೀಡುತ್ತದೆಯೋ ಅದೇ ರೀತಿಯಾಗಿ ಬಾಬಾಸಾಹೇಬರು ಸಹ ತಮ್ಮ ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸುತ್ತ ಯಾವುದಕ್ಕೂ ಹೆದರದೇ ಕಷ್ಟ ಪಟ್ಟು ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿ ನಂತರ ಭವ್ಯ ಭಾರತಕ್ಕೆ ಸಂವಿಧಾನವೆಂಬ ಬೆಳಕು ನೀಡಿದ ಮಹಾನ ವ್ಯಕ್ತಿ ಬಾಬಾಸಾಹೇಬ ಅಂಬೇಡ್ಕರರು. 19 ನೇ ಶತಮಾನದಲ್ಲಿ ಜನಿಸಿದ ಅವರು ಕಾನೂನು, ಸ್ವಾತಂತ್ರ್ಯ, ರಾಷ್ಟ್ರ ವ್ಯವಸ್ಥೆಗೆ ಭದ್ರ ಬುನಾದಿಯನ್ನು ಹಾಕಿದಂತಹ ಮಹಾನ ಮಾನವತಾವಾದಿ ಎಂದು ವಿದ್ಯಾವತಿ ಭಜಂತ್ರಿ ಹೇಳಿದರು.
ಉಪನ್ಯಾಸಕರಾಗಿ ಆಗಮಿಸಿದ ಆರ್. ಪಿ. ಕಾಂಬಳೆ ಅವರು ಮಾತನಾಡಿ, ಸಮಾಜದಲ್ಲಿ ನಿಮಗೆ ಒಳ್ಳೆಯ ಹೆಸರು ದೊರೆಯಬೇಕಾದರೆ ಮುಖ್ಯವಾಗಿ ಶಿಕ್ಷಣವನ್ನು ನೀವು ಪಡೆದವರಾಗಿರಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಭಾರತೀಯ ಸಂವಿಧಾನದ ಪಿತಾಮಹ, ಸೃಷ್ಟಿಕರ್ತ, ವಾಸ್ತುಶಿಲ್ಪಿ ಮತ್ತು ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರು, ಪ್ರಸಿದ್ಧ ವಕೀಲರು, ಸ್ವತಂತ್ರ ಭಾರತದ ಮೊದಲ ಕಾನೂನು ಮತ್ತು ನ್ಯಾಯ ಮಂತ್ರಿ, ಭಾರತ ಗಣರಾಜ್ಯದ ಸೃಷ್ಟಿಕರ್ತ, ಭಾಷಾ ಶಾಸ್ತ್ರಜ್ಞ, ಸ್ವತಂತ್ರ ಮತ್ತು ನಿರ್ಭೀತ ಪತ್ರಕರ್ತ, ಪುಸ್ತಕ ಪ್ರೇಮಿ, ರಾಜಕಾರಣಿ, ಸಂಸದೀಯ ಪಟು, ಪ್ರಸಿದ್ಧ ಅರ್ಥಶಾಸ್ತ್ರಜ್ಞ, ಸಾಮಾಜಿಕ ಕ್ರಾಂತಿಕಾರಿ, ಅನ್ಯಾಯದ ಆಧಾರದ ಮೇಲೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆಯ ನಿಷ್ಠಾವಂತ ವಿರೋಧಿ, ಜಾತಿ ಮತ್ತು ಅಸ್ಪೃಶ್ಯತೆಯ ನಿರ್ಮೂಲನೆಯ ಬೆಂಬಲಿಗರು ಹೀಗೆ ಅನೇಕ ರೀತಿಯ ಬಿರುದುಗಳಿಗೆ ಪಾತ್ರರಾಗಿದ್ದಾರೆ ಎಂದರು.
ಸರ್ಕಾರಿ ಸರದಾರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಾಯ್. ಎಂ. ಪಾಟೀಲ ಮಾತನಾಡಿ, ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ದೊರೆಯಬೇಕು ಎನ್ನುವ ಗುರಿಯನ್ನು ಹೊಂದಿದ ಮಹಾನ ವ್ಯಕ್ತಿ ಎಂದರೆ ಅದು ಡಾ. ಬಾಬಾಸಾಹೇಬರು. ರಾಜಕೀಯ ಹಕ್ಕುಗಳು ಮತ್ತು ಸಾಮಾಜಿಕ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದರು.
ಪ್ರತಿಯೊಬ್ಬ ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಉತ್ತಮ ವಿಷಯಗಳನ್ನು ಅರಿತುಕೊಂಡು ನಿಮ್ಮ ಮುಂದಿನ ಭವಿಷ್ಯವನ್ನು ಉತ್ತಮಗೊಳಿಸಿಕೊಳ್ಳಿ ಎಂದರು. ಅವಕಾಶಗಳಿಂದ ವಂಚಿತರಾದವರ ಏಳಿಗೆಯನ್ನು ಬಯಸಿದ ಏಕೈಕ ಜೀವಿ ಎಂದರೆ ಅದು ಡಾ.ಬಾಬಾಸಾಹೇಬರು ಎಂದರು.
ಕಾಲೇಜು ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಆಶು ಭಾಷಣ, ಪ್ರಬಂಧ, ರಸಪ್ರಶ್ನೆ ಸ್ಪರ್ಧೆ ಆಯೋಜಿಸಿ ವಿಜೇತರಿಗೆ ಪ್ರಮಾಣ ಪತ್ರ ಪುಸ್ತಕ ಬಹುಮಾನ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಸರಕಾರಿ ಸರ್ದಾರ್ಸ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ನಿಂಗಪ್ಪ ಮಸ್ತಿ, ನಿಂಗಪ್ಪ ಕಟಕೊಳ, ನಾಗರಾಜ ಮರೆನ್ನವರ, ಅಶೋಕ ನಿಂಗಪ್ಪಗೋಳ, ಜ್ಯೋತಿ ಕೆ. ಚಿಂತಾಮಣಿ ರಾವ್ ಕಾಲೇಜಿನ ಇತಿಹಾಸ ಉಪನ್ಯಾಸಕರಾದ ವಿಜಯಲಕ್ಷ್ಮಿ ಮುಚ್ಚಂಡಿ ಹಾಗೂ ಅನೇಕ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

