*ಮಾದಕ ವಸ್ತುಗಳು ದೇಶದ ಅಭಿವೃದ್ಧಿಗೆ ಮಾರಕ: ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ ನಾಯಕ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಾದಕ ವಸ್ತುಗಳು ದೇಶದ ಅಭಿವೃದ್ಧಿಗೆ ಮಾರಕವಾಗಿದ್ದು, ದೇಶದ ಯುವಜನತೆಯನ್ನು ಮಾದಕ ವಸ್ತುಗಳ ವ್ಯಸನಗಳಿಂದ ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಮತ್ತು ಬೆಳಗಾವಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮಂಜುನಾಥ ನಾಯಕ್ ಅವರು ಹೇಳಿದರು.
ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಅಬಕಾರಿ ಇಲಾಖೆ ಬೆಳಗಾವಿ ಇವರುಗಳ ಸಹಯೋಗದಲ್ಲಿ ಜಿಲ್ಲಾ ಪಂಚಾಯತ ಸಭಾ ಭವನದಲ್ಲಿ ಜುಲೈ 24 (ಶುಕ್ರವಾರ) ಜರುಗಿದ ಜಿಲ್ಲಾ ಮಟ್ಟದ ಮಾದಕ ವ್ಯಸನ ತಡೆಗಟ್ಟುವ ಕುರಿತು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಆಸ್ತಿಯಾದಂತಹ ಯುವಜನತೆಯನ್ನು ಮಾದಕ ವ್ಯಸನಕ್ಕೆ ದಾಸರಾಗದಂತೆ ನಿಗಾವಹಿಸಬೇಕು ಹಾಗೂ ಮಾದಕ ವಸ್ತುಗಳ ಮಾರಾಟಗಾರರನ್ನು ಗುರುತಿಸಿ ಅವರಿಗೆ ಕಠಿಣ ಶಿಕ್ಷೆ ನೀಡುವ ಕಾರ್ಯವಾಗಬೇಕು ಎಂದರು.
ಸಮಾಜದಲ್ಲಿ ಸಲೀಸಾಗಿ ದೊರಕುವಂತಹ ಮಾದಕ ವಸ್ತುಗಳ ಬೇಡಿಕೆ ಕುಸಿಯುವಂತಹ ಪರಿಸ್ಥಿತಿ ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಪ್ರೌಢ ಶಾಲೆ ಹಾಗೂ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.
ಮಾದಕ ವಸ್ತುಗಳ ನಿಯಂತ್ರಣ ಕಾಯಿದೆಯಲ್ಲಿ ಅನೇಕ ತಾಂತ್ರಿಕ ವಿಚಾರಗಳನ್ನು ಅಳವಡಿಸಲಾಗಿದ್ದು ಇದರನ್ವಯ ತನಿಖಾಧಿಕಾರಿಗಳು ಕಾರ್ಯನಿರ್ವಹಿಸುವ ಮೂಲಕ ಆರೋಪಿಗೆ ಶಿಕ್ಷೆ ಒದಗಿಸಬೇಕು.
ದೇಶದ ಪ್ರಜ್ಞಾವಂತ ನಾಗರಿಕರಾದ ನಾವೆಲ್ಲ ಮಾದಕ ವಸ್ತುಗಳ ನಿಯಂತ್ರಣಕ್ಕೆ ಕೈ ಜೋಡಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಈ ಕಾರ್ಯಾಗಾರದ ಸದುಪಯೋಗ ಪಡೆದು ದೇಶದ ಮುಂದಿನ ಪ್ರಜೆಗಳಿಗೆ ಉತ್ತಮ ಭವಿಷ್ಯ ರೂಪಿಸಲು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ ನಾಯಕ್ ಅವರು ಕರೇ ನೀಡಿದರು.
ಜಿಲ್ಲಾಧಿಕಾರಿ ಮೋಹಮ್ಮದ್ ರೋಷನ್ ಅವರು ಮಾತನಾಡಿ, ಮಾದಕ ವಸ್ತುಗಳು ಸಮಾಜದಲ್ಲಿನ ಯುವ ಜನರಿಗೆ ಮಾರಕವಾಗಿ ಪರಿಣಮಿಸುತ್ತಿದೆ. ಯುವಕರು ದೇಶದ ಶಕ್ತಿಯಾಗಿದ್ದು, ಅವರು ತಮ್ಮ ಗುರಿ ಸಾಧನೆಗೆ ಕಠಿಣ ಪರಿಶ್ರಮಕ್ಕೆ ಒತ್ತು ನೀಡಬೇಕು ವಿನಹ ಮಾದಕ ವಸ್ತುಗಳ ದಾಸರಾಗಬಾರದು. ಯುವಕರು ಮಾದಕ ವಸ್ತುಗಳ ಸೇವನೆ ಮಾಡುವುದನ್ನು ಬಿಟ್ಟರೆ ಸದೃಡ ಸಮಾಜ ನಿರ್ಮಾಣಕ್ಕೆ ಸಹಕಾರವಾಗಲಿದೆ.
ಮಾದಕ ವಸ್ತುಗಳ ಮಾರಾಟಗಾರರು ಅವುಗಳ ಸೇವನೆಗೆ ಒತ್ತಡ, ನಾನಾ ಆಮಿಷುಗಳನ್ನು ತೋರಿಸುವರು ಆದರೂ ಕೂಡ ಯುವಕರು ಆಮಿಷು, ಪ್ರತಿಷ್ಠೆಗೆ ಒಳಗಾಗಬಾರದು.ರಾಜ್ಯ ಸರಕಾರ ಇದಕ್ಕಾಗಿ ‘ಬೇಡ ಬೋ’ ಅಭಿಯಾನವನ್ನು ಪ್ರಾರಂಭಿಸಿದ್ದು ಯುವಕರು ಮಾದಕ ವಸ್ತುಗಳಿಗೆ “ಬೇಡ ಟ್ರೋ” ಎಂದು ಹೇಳುವುದರ ಜೊತೆಗೆ ಮಾದಕ ವಸ್ತುಗಳ ಮಾರಾಟಗಾರರ ವಿವರಗಳನ್ನು ಧೈರ್ಯವಾಗಿ ನೀಡುವಂತೆ ಕರೇ ನೀಡಿದರು.
ನಗರ ಪೊಲೀಸ್ ಆಯುಕ್ತರಾದ ಬೊರಸೆ ಭೂಷಣ ಗುಲಾಬರಾವ ಅವರು ಮಾತನಾಡಿ 2018ರ ಸಮೀಕ್ಷೆ ಪ್ರಕಾರ ದೇಶದಲ್ಲಿ 8 ಕೋಟಿ ಜನ ಮಾದಕ ವಸ್ತುಗಳ ವ್ಯಸನಿಗಳಿದ್ದು, ರಾಜ್ಯದಲ್ಲಿ 17 ಲಕ್ಷ ಜನ ವ್ಯಸನಿಗಳಿದ್ದಾರೆ. ಒಂದು ಕಡೆ ಭಾರತ ಅಭಿವೃದ್ಧಿ ರಾಷ್ಟ್ರ ಮಾಡಲು ಪ್ರಯತ್ನಿಸುತ್ತಿದರೆ ಈ ಮಾದಕವಸ್ತುಗಳಿಂದ ಅದು ಸಾಧ್ಯವಾಗುತ್ತಿಲ್ಲ. ದೇಶದಲ್ಲಿ ನಾನಾ ಮಾರ್ಗಗಳಿಂದ ಮಾದಕ ವಸ್ತುಗಳು ಒಳ ನುಗ್ಗುತ್ತಿವೆ. ಇವುಗಳ ನಿಯಂತ್ರಣಕ್ಕಾಗಿ ಸಾಕಷ್ಟು ಪ್ರಯತ್ನ ಪಡಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ 2024 ರಲ್ಲಿ ರೂ. 2 ಲಕ್ಷ ಮೌಲ್ಯದ, ಕಳೆದ ವರ್ಷ ರೂ. 35 ಲಕ್ಷ ಮೌಲ್ಯದ ಹಾಗೂ ಆರು ತಿಂಗಳುಗಳ ಹಿಂದೆ ರೂ. 6 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ಸೀಜ್ ಮಾಡಲಾಗಿದೆ. ಕಾಲೇಜು ಯುವಕ ಯುವತಿಯರು ಮಾದಕ ವ್ಯಸನಿಗಳಾಗುವುದರ ಮೂಲಕ ಪರೋಕ್ಷವಾಗಿ ಭಯೋತ್ಪಾದನೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಶಾಲಾ ಕಾಲೇಜಿನ ಸಮೀಪದಲ್ಲಿರುವ ಬೀಡಾ ಅಂಗಡಿಗಳ ಮೇಲೆ ನಿರಂತರ ನಿಗಾವಹಿಸುವ ಮೂಲಕ ಮಾದಕ ವಸ್ತುಗಳ ಮಾರಾಟವಾಗದಂತೆ ನಿಗಾ ವಹಿಸಲು ತಿಳಿಸಲಾಗಿದೆ.
ಪೋಲಿಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಮಾದಕ ವಸ್ತುಗಳ ಮಾರಾಟ ನಿಯಂತ್ರಣಕ್ಕೆ ಕಾರ್ಯ ನಿರ್ವಹಿಸುತ್ತಿವೆ ಇದರ ಜೊತೆಗೆ ಸರಕಾರದ ಎಲ್ಲ ಇಲಾಖೆಗಳು ಕೈಜೋಡಿಸಿದಲ್ಲಿ ಮಾದಕ ವಸ್ತುಗಳ ಮಾರಾಟ ಸಂಪೂರ್ಣ ನಿಯಂತ್ರಿಸಬಹುದಾಗಿದೆ ಎಂದು ಪೋಲಿಸ್ ಆಯುಕ್ತರು ತಿಳಿಸಿದರು.
ಕಾರ್ಯಾಗಾರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಜಿಲ್ಲಾ ಆರೋಗ್ಯ ಅಧಿಕಾರಿ ಐ.ಪಿ. ಗಡಾದ, ಅಬಕಾರಿ ಇಲಾಖೆಯ ಆಯುಕ್ತರಾದ ಆರ್.ಎಸ್.ಸಪ್ಪಾ, ಬೆಳಗಾವಿ ವಕೀಲರ ಸಂಘದ ಅಧ್ಯಕ್ಷರಾದ ಬಿ.ಜೆ. ಗಂಗಾಯಿ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಕೆ.ಎನ್.ಶಿವಕುಮಾರ್ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಕಾನೂನು ನೆರವು ರಕ್ಷಣಾ ಸಮಿತಿಯ ಲಕ್ಕೇಶ ಹೆಗ್ಗನವರ, ನಿವೃತ್ತ ಡಿ.ಎಸ್.ಪಿ. ಜಿ.ಜಿ.ಮರಿಬಶೆಟ್ಟಿ, ಮನೋವೈದ್ಯರಾದ ಡಾ.ಸರಸ್ವತಿ, ಮಾನಸಿಕ ಅರೋಗ್ಯಾಧಿಕಾರಿ ಉತ್ತಮ ಶೇಲಾರ, ಕಾರಾಗೃಹ ಸಹಾಯಕ ಅಧೀಕ್ಷಕರಾದ ಮಲ್ಲಿಕಾರ್ಜುನ ಕೊಣ್ಣೂರ, ವಿಶಾಲ ಪವಾರ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ಅರವಿಂದ ಅಂಟಿನ, ಜಿಲ್ಲಾಮಕ್ಕಳ ರಕ್ಷಣಾಧಿಕಾರಿ ರಾಮಮೂರ್ತಿ ಕೆ.ವಿ.ಅವರುಗಳು ಉಪನ್ಯಾಸ ನೀಡಿದರು.


