HealthKannada NewsKarnataka NewsNational

*ಖ್ಯಾತ ಮನೋವೈದ್ಯ ಡಾ. ಆನಂದ ಪಾಂಡುರಂಗಿ ಇನ್ನಿಲ್ಲ*

ಪ್ರಗತಿವಾಹಿನಿ ಸುದ್ದಿ: ನಾಡಿನ ಖ್ಯಾತ ಮನೋವೈದ್ಯ, ಲೇಖಕ ಹಾಗೂ ಸಮಾಜಮುಖಿ ವೈದ್ಯ ಡಾ. ಆನಂದ ಪಾಂಡುರಂಗಿ (72) ಅವರು ಗುರುವಾರ (ಸೆ.24) ಬೆಳಗ್ಗೆ ನಿಧನರಾದರು. 

ಸೆ.22ರ ಸಂಜೆ ಹೃದಯಾಘಾತಕ್ಕೊಳಗಾಗಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. 

ಸರಳತೆ, ಸಜ್ಜನಿಕೆ ಹಾಗೂ ಮಾನವೀಯ ಕಾಳಜಿಯಿಂದ ಧಾರವಾಡ ಮಾತ್ರವಲ್ಲದೆ ಉತ್ತರ ಕರ್ನಾಟಕದ ಜನರೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿದ್ದ ಡಾ. ಆನಂದ ಪಾಂಡುರಂಗಿ ಅವರು, ಮನೋವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಅಪಾರ ಗೌರವಕ್ಕೆ ಪಾತ್ರರಾಗಿದ್ದರು.

ಮನೋವೈದ್ಯಕೀಯ ಚಿಕಿತ್ಸಕರಾಗಿ ಸಪ್ತಾಪುರದ ಮಿಚಿಗನ್ ಕಾಂಪೌಂಡ್‌ನ ಶಾಂತಿಧಾಮದಲ್ಲಿ ನಿತ್ಯ ನೂರಾರು ಮಂದಿಗೆ ಚಿಕಿತ್ಸೆ ನೀಡುತ್ತಿದ್ದ ಅವರು, ವೈದ್ಯಕೀಯ ಸೇವೆಯನ್ನು ಕೇವಲ ವೃತ್ತಿಗೆ ಸೀಮಿತಗೊಳಿಸದೆ ಜನಸೇವೆಯ ರೂಪದಲ್ಲಿ ಅಳವಡಿಸಿಕೊಂಡಿದ್ದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಜನರು ಅವರ ಬಳಿ ಚಿಕಿತ್ಸೆಗಾಗಿ ಬರುತ್ತಿದ್ದರು.

ಗ್ರಾಮೀಣ ಭಾಗದ ಜನರಿಗೆ ಮಾನಸಿಕ ಆರೋಗ್ಯ ಸೇವೆ ತಲುಪಿಸುವ ಉದ್ದೇಶದಿಂದ ಅವರು ಹಳ್ಳಿ ಹಳ್ಳಿಗಳಲ್ಲಿ ಉಚಿತ ಮಾನಸಿಕ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸುತ್ತಿದ್ದರು. ಶಾಲಾ-ಕಾಲೇಜುಗಳಿಗೆ ತೆರಳಿ ಯುವಜನರಲ್ಲಿ ಮಾನಸಿಕ ಸ್ಥಿರತೆ, ಆತ್ಮವಿಶ್ವಾಸ ಹಾಗೂ ಧೈರ್ಯದ ಮಹತ್ವದ ಕುರಿತು ಅರಿವು ಮೂಡಿಸುತ್ತಿದ್ದರು. ಸಾವಿರಾರು ಮಂದಿಯ ಬದುಕಿನಲ್ಲಿ ಹೊಸ ಭರವಸೆ ಮೂಡಿಸುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದರು.

ವೈದ್ಯಕೀಯ ಕ್ಷೇತ್ರದ ಜೊತೆಗೆ ಡಾ. ಆನಂದ ಪಾಂಡುರಂಗಿ ಅವರು ಮನೋವಿಜ್ಞಾನ ಲೇಖಕರಾಗಿಯೂ ಹಾಗೂ ಉತ್ತಮ ಭಾಷಣಕಾರರಾಗಿಯೂ ಗುರುತಿಸಿಕೊಂಡಿದ್ದರು. 

ಅವರ ಸಮಾಜಮುಖಿ ಹಾಗೂ ವೈದ್ಯಕೀಯ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರವು ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ವೈದ್ಯಕೀಯ ಕ್ಷೇತ್ರದ ಪ್ರತಿಷ್ಠಿತ ಡಾ. ಬಿ.ಸಿ. ರಾಯ್ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಅವರು ಭಾಜನರಾಗಿದ್ದರು.

ಬೊಮ್ಮಾಯಿ ಸಂತಾಪ

ಡಾ. ಆನಂದ ಪಾಂಡುರಂಗಿ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಡಾ. ಆನಂದ ಪಾಂಡುರಂಗಿ ಅವರು ವೈದ್ಯರಾಗಿ ರೋಗಿಗಳಿಗೆ ಚಿಕಿತ್ಸೆ ನೀಡುವುದರ ಜೊತೆಗೆ, ತಮ್ಮ ಆತ್ಮೀಯ ಮಾತು, ಕಾಳಜಿ ಮತ್ತು ಮಾನವೀಯ ಸ್ಪಂದನೆಯ ಮೂಲಕ ಮಾನಸಿಕ ಸಂಕಷ್ಟದಲ್ಲಿದ್ದ ಅನೇಕರಲ್ಲಿ ಬದುಕಿನ ಬಗ್ಗೆ ಹೊಸ ಭರವಸೆ ಮೂಡಿಸಿದ ಅಪರೂಪದ ಸಮಾಜಮುಖಿ ವ್ಯಕ್ತಿಯಾಗಿದ್ದರು ಎಂದು ಬೊಮ್ಮಾಯಿ ಸ್ಮರಿಸಿದ್ದಾರೆ.

ಬಡವರು ಹಾಗೂ ಅಗತ್ಯವಿರುವವರಿಗೆ ಸದಾ ನೆರವಿನ ಹಸ್ತ ಚಾಚುತ್ತಿದ್ದ ಅವರ ಸೇವೆ ಉತ್ತರ ಕರ್ನಾಟಕದ ಜನರ ಮನದಲ್ಲಿ ಸದಾ ಅಚ್ಚಳಿಯದೆ ಉಳಿಯಲಿದೆ ಎಂದು ಅವರು ಹೇಳಿದ್ದಾರೆ.

ಗದಗದ ತೋಂಟದಾರ್ಯ ಮಠದ ಪರಮ ಭಕ್ತರಾಗಿದ್ದ ಡಾ. ಆನಂದ ಪಾಂಡುರಂಗಿ ಅವರು ತಮ್ಮ ವೈದ್ಯಕೀಯ ಹಾಗೂ ಸಮಾಜಮುಖಿ ಸೇವೆಯ ಮೂಲಕ ವಿಶಿಷ್ಟ ಛಾಪು ಮೂಡಿಸಿದ್ದರು. ಅವರ ಸಾಧನೆ ಮತ್ತು ಸೇವೆ ಮುಂದಿನ ಪೀಳಿಗೆಗಳಿಗೂ ಪ್ರೇರಣೆಯಾಗಲಿದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.

ಡಾ. ಆನಂದ ಪಾಂಡುರಂಗಿ ಅವರ ಅಗಲಿಕೆಯಿಂದ ವೈದ್ಯಕೀಯ ಕ್ಷೇತ್ರಕ್ಕೆ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಹಾಗೂ ಕುಟುಂಬದವರು, ಬಂಧುಗಳು, ಹಿತೈಷಿಗಳು ಮತ್ತು ಅಪಾರ ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿ ದೊರೆಯಲಿ ಎಂದು ಬೊಮ್ಮಾಯಿ ಪ್ರಾರ್ಥಿಸಿದ್ದಾರೆ.

ಡಾ. ಆನಂದ ಪಾಂಡುರಂಗಿ ಅವರು ಪತ್ನಿ ಅನುಪಮಾ, ಪುತ್ರ ಡಾ. ಆದಿತ್ಯ ಪಾಂಡುರಂಗಿ ಹಾಗೂ ಸೊಸೆ ಡಾ. ಸ್ವಪ್ನಾ ಅವರನ್ನು ಅಗಲಿದ್ದಾರೆ.

Related Articles

Back to top button