*ಎಐಟಿಎಂ–ರಷ್ಯಾದ ಕರೇಲಿಯನ್ ರಿಸರ್ಚ್ ಸೆಂಟರ್ ನಡುವೆ ಮಹತ್ವದ ಒಡಂಬಡಿಕೆ*

ಅಂತಾರಾಷ್ಟ್ರೀಯ ಶೈಕ್ಷಣಿಕ ಹಾಗೂ ಸಂಶೋಧನಾ ಸಹಕಾರಕ್ಕೆ ಹೊಸ ಹೆಜ್ಜೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಂಗಡಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ (AITM), ಬೆಳಗಾವಿ ಹಾಗೂ ರಷ್ಯಾದ ರಷ್ಯನ್ ಅಕಾಡೆಮಿ ಆಫ್ ಸೈನ್ಸಸ್‌ನ ಕರೇಲಿಯನ್ ರಿಸರ್ಚ್ ಸೆಂಟರ್ (KarRC RAS) ನಡುವೆ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಸಂಶೋಧನಾ ಸಹಕಾರವನ್ನು ಬಲಪಡಿಸುವ ಮಹತ್ವದ ತಿಳುವಳಿಕೆ ಒಪ್ಪಂದ (MoU)ಕ್ಕೆ ಸಹಿ ಮಾಡಲಾಗಿದೆ.
ರಷ್ಯಾದ ಕರೇಲಿಯಾ ಗಣರಾಜ್ಯದ ಪೆಟ್ರೋಜಾವೊಡ್ಸ್ಕ್‌ನಲ್ಲಿರುವ ಕರೇಲಿಯನ್ ರಿಸರ್ಚ್ ಸೆಂಟರ್‌ನಲ್ಲಿ ಸೆಪ್ಟೆಂಬರ್ 15ರಂದು ನಡೆದ ಕಾರ್ಯಕ್ರಮದಲ್ಲಿ ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಹಾಕಲಾಯಿತು. AITM ಪರವಾಗಿ ಸಂಸ್ಥೆಯ ಪ್ರಾಂಶುಪಾಲರು ಹಾಗೂ ನಿರ್ದೇಶಕರಾದ ಡಾ. ಆನಂದ್ ಬಿ. ದೇಶಪಾಂಡೆ ಮತ್ತು KarRC RAS ಪರವಾಗಿ ಮಹಾನಿರ್ದೇಶಕರಾದ ಡಾ. ಬಖ್ಮೆತ್ ಓಲ್ಗಾ ನಿಕೋಲಾಯೆವ್ನಾ ಅವರು ಒಪ್ಪಂದಕ್ಕೆ ಸಹಿ ಹಾಕಿದರು.
ಈ ಒಡಂಬಡಿಕೆಯು ಭಾರತ ಮತ್ತು ರಷ್ಯಾ ನಡುವಿನ ಶೈಕ್ಷಣಿಕ ಹಾಗೂ ವೈಜ್ಞಾನಿಕ ಸಹಕಾರಕ್ಕೆ ಮತ್ತಷ್ಟು ಉತ್ತೇಜನ ನೀಡುವ ಜೊತೆಗೆ, ಎರಡೂ ಸಂಸ್ಥೆಗಳ ಸಂಶೋಧನಾ ಸಾಮರ್ಥ್ಯಗಳನ್ನು ಪರಸ್ಪರ ಹಂಚಿಕೊಳ್ಳಲು ಅವಕಾಶ ಕಲ್ಪಿಸಲಿದೆ.
ಒಪ್ಪಂದದಡಿ ಜಂಟಿ ಸಂಶೋಧನಾ ಯೋಜನೆಗಳು, ಶೈಕ್ಷಣಿಕ ವಿನಿಮಯ ಕಾರ್ಯಕ್ರಮಗಳು, ಬೋಧಕ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪಿಎಚ್.ಡಿ. ಸಂಶೋಧಕರ ವಿನಿಮಯಕ್ಕೆ ಆದ್ಯತೆ ನೀಡಲಾಗುತ್ತದೆ. ಅಲ್ಲದೆ, ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಇಂಟರ್ನ್‌ಶಿಪ್‌ಗಳ ಅವಕಾಶ, ಜಂಟಿ ಸಂಶೋಧನಾ ಪ್ರಕಟಣೆಗಳು ಹಾಗೂ ಪೇಟೆಂಟ್‌ಗಳ ಅಭಿವೃದ್ಧಿಗೆ ಸಹಕಾರ ನೀಡಲು ಉದ್ದೇಶಿಸಲಾಗಿದೆ.
ಇದರ ಭಾಗವಾಗಿ ಎರಡೂ ಸಂಸ್ಥೆಗಳ ಸಹಭಾಗಿತ್ವದಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನಗಳು, ಕಾರ್ಯಾಗಾರಗಳು, ವಿಚಾರ ಸಂಕಿರಣಗಳು ಹಾಗೂ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಸಂಶೋಧನಾ ಕ್ಷೇತ್ರದಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಂಶೋಧನಾ ಅನುದಾನಗಳಿಗಾಗಿ ಜಂಟಿಯಾಗಿ ಅರ್ಜಿ ಸಲ್ಲಿಸುವ ಉದ್ದೇಶವೂ ಒಡಂಬಡಿಕೆಯಲ್ಲಿದೆ.
ಈ ಸಹಯೋಗದ ಮೂಲಕ AITMನ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಸಂಶೋಧಕರಿಗೆ ಅಂತಾರಾಷ್ಟ್ರೀಯ ಮಟ್ಟದ ಸಂಶೋಧನಾ ಅನುಭವ ಮತ್ತು ಶೈಕ್ಷಣಿಕ ವಿನಿಮಯದ ಅವಕಾಶಗಳು ಲಭ್ಯವಾಗಲಿದ್ದು, ಎರಡೂ ಸಂಸ್ಥೆಗಳ ನಡುವಿನ ದೀರ್ಘಕಾಲೀನ ಶೈಕ್ಷಣಿಕ ಹಾಗೂ ವೈಜ್ಞಾನಿಕ ಬಾಂಧವ್ಯ ಮತ್ತಷ್ಟು ಬಲಪಡಲಿದೆ.




