CrimeKannada NewsKarnataka NewsLatest

ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಹೆರಿಗೆಯಾದ ಬಳಿಕ ಕೃತ್ಯ ಬೆಳಕಿಗೆ : ಪೋಕ್ಸೋ ಕೇಸ್‌ ದಾಖಲು

ಪ್ರಗತಿವಾಹಿನಿ ಸುದ್ದಿ: ಮೊಬೈಲ್‌ ಮೂಲಕ ಪರಿಚಯವಾಗಿದ್ದ ಕೇರಳ ಮೂಲದ ಬಾಲಕನೊಬ್ಬ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದ್ದು, ಬಾಲಕಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ ಬಳಿಕ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಪೊಲೀಸ್‌ ಪ್ರಕಟಣೆ ಪ್ರಕಾರ, ಸಂತ್ರಸ್ತ ಅಪ್ರಾಪ್ತ ಬಾಲಕಿಗೆ ಕೇರಳ ರಾಜ್ಯದ ನಿವಾಸಿಯಾಗಿರುವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನ ಪರಿಚಯವಾಗಿತ್ತು. ಇಬ್ಬರೂ ಮೊಬೈಲ್‌ ಮೂಲಕ ನಿರಂತರವಾಗಿ ಸಂಪರ್ಕದಲ್ಲಿದ್ದರು. 2025ರ ಡಿಸೆಂಬರ್‌ 21ರಂದು ಬಾಲಕಿಯನ್ನು ತನ್ನ ಮನೆಗೆ ಕರೆಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದ್ದು ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಎಫ್‌ಐಆರ್‌ ದಾಖಲಾಗಿದೆ.

2026ರ ಸೆಪ್ಟೆಂಬರ್‌ 8ರಂದು ಅಪ್ರಾಪ್ತ ಬಾಲಕಿಯ ಆರೋಗ್ಯದಲ್ಲಿ ದಿಢೀರ್‌ ಏರುಪೇರು ಉಂಟಾಗಿದ್ದು, ಕುಟುಂಬಸ್ಥರು ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದರು. ಮರುದಿನ ಸೆಪ್ಟೆಂಬರ್‌ 9ರಂದು ಬಾಲಕಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ಈ ವೇಳೆ ಬಾಲಕಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಶೂನ್ಯ ಅ.ಕ್ರ. 01/2026ರಂತೆ ಪೋಕ್ಸೋ ಕಾಯ್ದೆ 2012ರ ಕಲಂ 4, 5(J)(ii), 5(L), 6 ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 64(2)(m) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಘಟನೆ ನಡೆದ ಸ್ಥಳ ಕೇರಳ ರಾಜ್ಯದ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುವುದರಿಂದ, ಮುಂದಿನ ಕಾನೂನು ಕ್ರಮ ಹಾಗೂ ತನಿಖೆಗಾಗಿ ಪ್ರಕರಣವನ್ನು ಸಂಬಂಧಪಟ್ಟ ಸ್ಥಳೀಯ ಪೊಲೀಸ್ ಠಾಣೆಗೆ ವರ್ಗಾಯಿಸಲಾಗುವುದು ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Related Articles

Back to top button