ಮಹಿಳೆಯರನ್ನು ಸಮಾಜ ಲಘುವಾಗಿ ಪರಿಗಣಿಸುವ ಸ್ಥಿತಿ ಇಲ್ಲ -ಸ್ವಪ್ನಾಲಿ ಗಣೇಶ ಹುಕ್ಕೇರಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ತೊಟ್ಟಿಲು ತೂಗುವ ಕೈ ದೇಶವನ್ನೇ ಆಳಬಲ್ಲದು ಎನ್ನುವುದನ್ನು ಮಾಡಿ ತೋರಿಸುತ್ತಿದ್ದಾರೆ ಎಂದು ಸ್ವಪ್ನಾಲಿ ಗಣೇಶ ಹುಕ್ಕೇರಿ ಹೇಳಿದರು.
ಅನ್ನಪೂರ್ಣೇಶ್ವರಿ ಫೌಂಡೇಶನ್ ವತಿಯಿಂದ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕ್ರೀಡೆ, ವಿಜ್ಞಾನ, ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆ ತನ್ನ ಛಾಪನ್ನು ಮೂಡಿಸಿದ್ದಾಳೆ. ಪೈಲೆಟ್ ಕೂಡ ಆಗಿದ್ದಾಳೆ, ಚಂದ್ರಯಾನದವರೆಗೂ ಹೋಗಿಬಂದಿದ್ದಾಳೆ. ಹಾಗಾಗಿ ಮಹಿಳೆಯರನ್ನು ಸಮಾಜ ಲಘುವಾಗಿ ಪರಿಗಣಿಸುವ ಸ್ಥಿತಿ ಇಲ್ಲ ಎಂದು ಅವರು ಹೇಳಿದರು.
ಮೀಸಲಾತಿ ಇಲ್ಲದೆಯೂ ಪುರುಷನ ಸಮಾನವಾಗಿ ನಿಲ್ಲುವ ಹಂತಕ್ಕೆ ಮಹಿಳೆಯರು ಬೆಳೆಯುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಾಗಿದೆ. ನಾವು ಯಾವುದಕ್ಕೂ, ಯಾರಿಗೂ ಅಂಜಬೇಕಾಗಿಲ್ಲ. ಪ್ರತಿಭೆಯಿಂದಲೇ ನಮ್ಮ ಗುರಿಯನ್ನು ಮುಟ್ಟಲು ಸಾಧ್ಯವಿದೆ ಎಂದೂ ಸ್ವಪ್ನಾಲಿ ಹುಕ್ಕೇರಿ ಹೇಳಿದರು.
ಇದೇ ವೇಳೆ ಸ್ವಪ್ನಾಲಿ ಗಣೇಶ ಹುಕ್ಕೇರಿ ಮಹಿಳೆಯರಿಗಾಗಿ ಅಡುಗೆ ಸ್ಪರ್ಧೆ, ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಿದ್ದರು. ಮಹಿಳೆಯರು ಸದಾ ಮನೆಯಲ್ಲಿ ಏಕತಾನತೆ ಅನುಭವಿಸುತ್ತಾರೆ. ಇದರಿಂದ ಪಾರಾಗಲು ಇಂತಹ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು. ನೂರಾರು ಮಹಿಳೆಯರು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
ನೀಲಾಂಬಿಕಾ ಪ್ರಕಾಶ ಹುಕ್ಕೇರಿ ಕಾರ್ಯಕ್ರಮ ಉದ್ಘಾಟಿಸಿದರು. ವಿಜೇತರಿಗೆ ಅವರು ಬಹುಮಾನಗಳನ್ನು ವಿತರಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯರು, ತಾಲೂಕು ಪಂಚಾಯಿತಿ ಸದಸ್ಯರು, ಸದಲಗಾ ಪುರಸಭೆ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ