ಪ್ರಗತಿವಾಹಿನಿ ಸುದ್ದಿ: ಆತ್ಮಹತ್ಯೆ ಮಾಡಿಕೊಳ್ಳಲು ಇಚ್ಛಿಸುವರು ನೋವಿಲ್ಲದೆ ಒಂದೇ ಒಂದು ನಿಮಿಷದಲ್ಲಿ ತಮ್ಮ ಪ್ರಾಣ ಬಿಡಬಹುದಾದ ಯಂತ್ರವನ್ನು ಆವಿಷ್ಕರಿಸಲಾಗಿದೆ. ಶೀಘ್ರದಲ್ಲೇ ಈ ಯಂತ್ರ ಬಳಕೆಗೆ ಬರುವ ಸಾಧ್ಯತೆಯಿದೆ.
ಸ್ವಿಟ್ಸರ್ಲೆಂಡ್ ಸರ್ಕಾರ ಆತ್ಮಹತ್ಯೆ ಯಂತ್ರ ಬಳಕೆಗೆ ಕಾನೂನು ಅನುಮೋದನೆ ನೀಡಿದ್ದು, ಒಬ್ಬ ವ್ಯಕ್ತಿಯು ಕೇವಲ ಒಂದು ನಿಮಿಷದಲ್ಲಿ ಈ ಯಂತ್ರವನ್ನು ಬಳಸಿ ಪ್ರಾಣ ತ್ಯಾಗ ಮಾಡಬಹುದು. ಈ ಯಂತ್ರದ ಪ್ರಮುಖ ವಿಷಯವೆಂದರೆ, ಈ ಯಂತ್ರವನ್ನು ಬಳಸಿ ಆತ್ಮಹತ್ಯೆ ಮಾಡಿಕೊಂಡವರು ಯಾವುದೇ ನೋವು ಅನುಭವಿಸದೇ ಸಾಯುತ್ತಾರೆ.
ಈ ಯಂತ್ರವು ಆತ್ಮಹತ್ಯೆ ಮಾಡಿಕೊಳ್ಳಬಯಸುವ ವ್ಯಕ್ತಿ ಬಟನ್ ಒತ್ತಿದ ಕೂಡಲೇ ಆತನಿಗೆ ಆಕ್ಸಿಜನ್ ಬದಲಿಗೆ ನೈಟ್ರೋಜನ್ ಬಿಡುಗಡೆ ಮಾಡುತ್ತದೆ. ಇದರಿಂದ ವ್ಯಕ್ತಿ ಆಕ್ಸಿಜನ್ ಸಿಗದೇ ಹೈಪೋಕ್ಸಿಯಾದಿಂದ ಕೇವಲ ಒಂದೇ ನಿಮಿಷದಲ್ಲಿ ಪ್ರಾಣಬಿಡುತ್ತಾನೆ ಎಂದು ಹೇಳಲಾಗಿದೆ.
ಈ ಆತ್ಮಹತ್ಯಾ ಪಾಡ್ ಅನ್ನು ಸ್ವಿಟ್ಟರ್ಲೆಂಡ್‌ನ “ದಿ ಲಾಸ್ಟ್ ರೆಸಾರ್ಟ್” ಸಂಸ್ಥೆ ಆವಿಷ್ಕರಿಸಿದೆ. ಸ್ವಿಟ್ಸರ್ಲೆಂಡ್‌ನಲ್ಲಿ ಆತ್ಮಹತ್ಯೆಗೆ ಕಾನೂನುಬದ್ಧ ಮಾನ್ಯತೆ ನೀಡಿರುವುದರಿಂದ ಈವರೆಗೂ ಈ ಸಂಸ್ಥೆ ಸೇವೆಗೆ ಯಾವುದೇ ರೀತಿಯ ಕಾನೂನು ತೊಡಕು ಉಂಟಾಗಿಲ್ಲ.
ಸ್ವಿಟ್ಸರ್ಲೆಂಡ್‌ನಲ್ಲಿ ವ್ಯಕ್ತಿ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಸೂಕ್ತ ಕಾರಣ ನೀಡಿದರೆ ಅಥವಾ ಆತನ ಸಾವಿಗೆ ಪೂರಕವಾದ ಅಂಶವನ್ನು ಸಾಬೀತುಪಡಿಸಿದರೆ ಆತನ ಆತ್ಮಹತ್ಯೆಗೆ ಕಾನೂನಿನಲ್ಲಿ ಅವಕಾಶವಿದೆ. ಕಾನೂನು ಆತನ ಆತ್ಮಹತ್ಯೆಗೆ ಅನುಮತಿಸುತ್ತದೆ ಎಂದು ಹೇಳಲಾಗಿದೆ.
ಈ ಕುರಿತು ಮಾತನಾಡಿರುವ ಆತ್ಮಹತ್ಯಾ ಪಾಡ್ ಯಂತ್ರದ ತಯಾರಕಾ ಸಂಸ್ಥೆ “ದಿ ಲಾಸ್ಟ್ ರೆಸಾರ್ಟ್” ಮುಖ್ಯ ಕಾರ್ಯನಿರ್ವಾಹಕ ಫ್ಲೋರಿಯನ್ ವಿಲೆಟ್, ‘ನಮ್ಮಲ್ಲಿ ಜನರು ಆತ್ಮಹತ್ಯೆ ಮಾಡಿಕೊಳ್ಳಲು ಸರತಿ ಸಾಲಲ್ಲಿ ನಿಂತಿದ್ದಾರೆ. ನಮ್ಮ ಸಾರ್ಕೋ ಯಂತ್ರದ ಬಳಕೆಗಾಗಿ ಕಾಯುತ್ತಿದ್ದಾರೆ. ಇಲ್ಲಿ ಸಾವು ಬಹಳ ಬೇಗ ನಡೆದುಹೋಗುತ್ತದೆ. ನಿಮ್ಮ ಸಾವು ನೋವುರಹಿತವಾಗಿರುತ್ತದೆ ಎಂದು ನಾನು ಖಚಿತವಾಗಿ ಹೇಳಬಲ್ಲೆ ಎಂದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ