
ಪ್ರಗತಿವಾಹಿನಿ ಸುದ್ದಿ: ಕಾರ್ ನಲ್ಲಿ ಶವ ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧನಕ್ಕೊಳಪಡಿಸಿರುವ ಘಟನೆ ಕೊಡಗು ಜಿಲ್ಲೆಯ ಮಾಲ್ದಾರೆ ಲಿಂಗಾಪುರ ಚೆಕ್ ಪೋಸ್ಟ್ನಲ್ಲಿ ನಡೆದಿದೆ.
ಕೊಡಗು ಜಿಲ್ಲೆಯ ಮಾಲ್ದಾರೆ ಲಿಂಗಾಪುರ ಚೆಕ್ ಪೋಸ್ಟ್ನಲ್ಲಿರುವ ಅರಣ್ಯ ಇಲಾಖೆ ಸಿಬ್ಬಂದಿ ನಿಯಮಿತ ವಾಹನ ತಪಾಸಣೆಯ ಸಮಯದಲ್ಲಿ ಅನುಮಾನಗೊಂಡು ಕಾರೊಂದನ್ನು ತಪಾಸಣೆ ನಡೆಸಿದ್ದಾರೆ. ಈ ವೇಳೆ ಕಾರಿನಲ್ಲಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಮೃತ ಮಹಿಳೆಯನ್ನು ನಾಂಕಿ ದೇವಿ (45) ಎಂದು ಗುರುತಿಸಲಾಗಿದ್ದು, ಇವರು ಹರಿಯಾಣ ಮೂಲದವರಾಗಿದ್ದು, ಮೈಸೂರಿನಲ್ಲಿ ತಮ್ಮ ಪತಿಯೊಂದಿಗೆ ವಾಸಿಸುತ್ತಿದ್ದರು ಎನ್ನಲಾಗಿದೆ.
ಮಾಹಿತಿ ತಿಳಿದ ಕೂಡಲೆ ಸಿದ್ದಾಪುರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿದ್ದು, ಕಾರಿನಲ್ಲಿದ್ದ ಮೂವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಸಂಬಂಧ ಸಿದ್ದಾಪುರ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.


