Kannada NewsKarnataka News

ರಾತ್ರಿಯೇ ಬೆಂಗಳೂರಿಗೆ; ನಾಳೆ ಬಿಜೆಪಿ, ಎಂಎಲ್ಸಿಗೆ ರಾಜಿನಾಮೆ; ಕಾಂಗ್ರೆಸ್ ಸೇರ್ಪಡೆ ಖಚಿತ

ಪ್ರಗತಿವಾಹಿನಿ ಸುದ್ದಿ, ಅಥಣಿ: ಅಥಣಿಯಲ್ಲಿ ಬೆಂಬಲಿಗರ ಬೃಹತ್ ಸಮಾವೇಶ ನಡೆಸಿರುವ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಇಂದು ರಾತ್ರಿಯೇ ಬೆಂಗಳೂರಿಗೆ ತೆರಳುವುದಾಗಿ ಘೋಷಿಸಿದ್ದಾರೆ. ನಾಳೆ ಬೆಳಗ್ಗೆ ಬಿಜೆಪಿಗೆ ಹಾಗೂ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜಿನಾಮೆ ನೀಡುವುದಾಗಿ ಅವರು ತಿಳಿಸಿದ್ದಾರೆ.

ಬಹುತೇಕ ನಾಳೆಯೇ ಲಕ್ಷ್ಮಣ ಸವದಿ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಗೆ ಅಧಿಕೃತವಾಗಿ ಸೇರಲಿದ್ದಾರೆ.

ಬಿಜೆಪಿ ಟಿಕೆಟ್ ವಂಚಿತರಾಗಿರುವುದರಿಂದ ತೀವ್ರ ಆಕ್ರೋಶಗೊಂಡಿರುವ ಲಕ್ಷ್ಮಣ ಸವದಿ ತಮ್ಮ ಮುಂದಿನ ನಡೆ ಕುರಿತು ಜನರ ಅಭಿಪ್ರಾಯ ಕೇಳಲು ಇದೀಗ ಅಥಣಿಯ ಶಿವಯೋಗಿಗಳ ಮಠದ ಆವರಣದಲ್ಲಿ ಬೃಹತ್ ಸಮಾವೇಶ ನಡೆಸಿದ್ದಾರೆ. ಅದರಲ್ಲಿ ಬೆಂಬಲಿಗರಿಂದ ಅಭಿಪ್ರಾಯ ಆಲಿಸುತ್ತಿದ್ದಾರೆ. ಸಮಾವೇಶದಲ್ಲಿ ಭಾವುಕರಾದ ಲಕ್ಷ್ಮಣ ಸವದಿ ತಮ್ಮ ಕೈ ಬಿಡದಂತೆ ಜನರಲ್ಲಿ ಮನವಿ ಮಾಡಿದರು. ಜನರ ಅಭಿಪ್ರಾಯದಂತೆ ಮುಂದಿನ ಹೆಜ್ಜಿ ಇಡುವುದಾಗಿ ತಿಳಿಸಿದರು.

ಕಳೆದ ಉಪಚುನಾವಣೆಯಲ್ಲಿ ಮಹೇಶ ಕುಮಟಳ್ಳಿ ಗೆಲ್ಲಿಸಿಕೊಂಡು ಬನ್ನಿ, 2023ರ ಚುನಾವಣೆಯಲ್ಲಿ ಲಕ್ಷ್ಮಣ ಸವದಿಗೇ ಟಿಕೆಟ್ ಕೊಡುತ್ತೇವೆ ಎಂದು ಯಡಿಯೂರಪ್ಪ ವಚನ ಕೊಟ್ಟಿದ್ದರು. ಧರ್ಮಸ್ಥಳ ಮಂಜುನಾಥೇಶ್ವರನ ಎದುರಲ್ಲಿ ಇದು ಸುಳ್ಳು ಎಂದು ಹೇಳಿದರೆ ನಾನು ರಾಜಕೀಯದಿಂದಲೇ ನಿವೃತ್ತಿಯಾಗುವುದಾಗಿ ಲಕ್ಷ್ಮಣ ಸವದಿ ಘೋಷಿಸಿದರು.

ನಾನು ಈ ಚುನಾವಣೆಯಲ್ಲಿ ಸ್ಪರ್ದಿಸುತ್ತೇನೆ ಎಂದು ಹೇಳಿರಲಿಲ್ಲ. ಆಗಲೇ ಒಬ್ಬ ಮಹಾನುಭಾವ ಅಥಣಿಗೆ ಬಂದು ನನ್ನ ವಿರುದ್ಧ ಹೇಳಿಕೆ ನೀಡುತ್ತಾನೆ. ಕಳೆದ 4 ವರ್ಷದಲ್ಲಿ ನಾನು ಉಂಡ ಕಹಿ, ನನಗೆ ಆಗಿರುವ ಅವಮಾನವನ್ನು ಮದುವೆಯಾದ ಹೆಣ್ಣು ಮಗಳು ಗಂಡನ ಮನೆಯ ಕಿರುಕುಳ ಸಹಿಸಿಕೊಳ್ಳುವ ಹೆಣ್ಮಉ ಮಗಳಂತೆ ಸಿಹಿಸಿಕೊಂಡಿದ್ದೇನೆ ಎಂದು ಸವದಿ ಹೇಳಿದರು.

ಬಸವಕಲ್ಯಾಣದಲ್ಲಿ ನಡೆದ ಸಮಾವೇಶದಲ್ಲಿ ವೇದಿಕೆಯಲ್ಲಿ ನಿಮಗೆ ಅವಕಾಶವಿಲ್ಲ ಎಂದು ಅವಮಾನ ಮಾಡಿದ ಸನ್ನಿವೇಶ, ದಾವಣಗೆರೆಯಲ್ಲಿ ನಡೆದ ಸಮಾವೇಶದಲ್ಲಿ ಆದ ಅವಮಾನಗಳನ್ನು ಬಿಚ್ಚಿಟ್ಟರು.

ನಾನು ಪಕ್ಷ ಬಿಟ್ಟು ಹೊರಟಿಲ್ಲ. ಕುತ್ತಿಗೆ ಹಿಡಿದು ಹೊರದಬ್ಬಿದವರು ನೀವು ಎಂದು ಬಿಜೆಪಿ ಮುಖಂಡರ ವಿರುದ್ಧ ಕಿಡಿಕಾರಿದರು.

ಇಂದು ರಾತ್ರಿಯೇ ಬೆಳಗಾವಿ ಮೂಲಕ ಬೆಂಗಳೂರಿಗೆ ತೆರಳುವುದಾಗಿ ತಿಳಿಸಿದ ಲಕ್ಷ್ಮಣ ಸವದಿ ನಾಳೆ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ಹಾಗೂ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜಿನಾಮೆ ನೀಡುವುದಾಗಿ ತಿಳಿಸಿದ್ದಾರೆ. ನಂತರ ಮುಂದಿನ ಹೆಜ್ಜೆ ಕುರಿತು ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ.

ಉನ್ನತ ಮೂಲಗಳ ಪ್ರಕಾರ ನಾಳೆಯೇ ಲಕ್ಷ್ಮಣ ಸವದಿ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಎಐಸಿಸಿ ಕರ್ನಾಟಕ ಉಸ್ತುವಾರಿ ರಣದೀಪ ಸಿಂಗ್ ಸುರ್ಜೇವಾಲ ಮೊದಲಾದವರ ಉಪಸ್ಥಿತಿಯಲ್ಲಿ ಕಾಂಗ್ರೆಸ್ ಸೇರಲಿದ್ದಾರೆ.

ಇದಕ್ಕೂ ಮುನ್ನ ಸವದಿ ಅವರನ್ನು ಬಿಜೆಪಿಯಲ್ಲೇ ಉಳಿಸಿಕೊಳ್ಳಲು ಸಂಸದ ಅಣ್ಣಾ ಸಾಹೇಬ ಜೊಲ್ಲೆ, ಬಿಜೆಪಿ ಚಿಕ್ಕೋಡಿ ಜಿಲ್ಲಾಧ್ಯಕ್ಷ ರಾಜೇಶ್ ನೇರ್ಲಿ ಪ್ರಯತ್ನಿಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಲಿಲ್ಲ.

https://pragati.taskdun.com/supporters-of-lakshman-savadi-are-outraged-against-the-bjp-district-president/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button