ಪಡಿತರ ಚೀಟಿದಾರರ ಗಮನಕ್ಕೆ
ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ಕಾರದಿಂದ ನೀಡುವ ಪಡಿತರ ಪದಾರ್ಥಗಳನ್ನು ಹೊರತುಪಡಿಸಿ, ಇತರೆ ಮುಕ್ತ ಮಾರುಕಟ್ಟೆಯ ಪದಾರ್ಥಗಳನ್ನು ಖರೀದಿಸುವುದು ಕಡ್ಡಾಯವಿಲ್ಲ.
ಯಾವುದೇ ನ್ಯಾಯಬೆಲೆ ಅಂಗಡಿಕಾರರು ಕಡ್ಡಾಯವಾಗಿ ಖರಿದಿಸುವಂತೆ ಒತ್ತಾಯಿಸಿದಲ್ಲಿ ಆಯಾ ತಾಲ್ಲೂಕಿನ ತಹಶೀಲ್ದಾರ ಕಾರ್ಯಾಲಯಕ್ಕೆ ಅಥವಾ ಉಪನಿರ್ದೇಶಕರು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಬೆಳಗಾವಿ ಇವರ ಕಚೇರಿ ದೂರವಾಣಿ ಸಂಖ್ಯೆ 0831-2407282ಕ್ಕೆ ಅಥವಾ ಇಲಾಖಾ ನಿಯಂತ್ರಣ ಕೊಠಡಿಯ ಸಹಾಯವಾಣಿ ಸಂಖ್ಯೆ 1967 ದೂರನ್ನು ಸಲ್ಲಿಸುವಂತೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುನ್ಸಿಪಲ್ ನೌಕರರ ಪಿಂಚಣಿದಾರರ ಗಮನಕ್ಕೆ
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಸೇವೆ ಸಲ್ಲಿಸಿ 2019ರ ಜೂನ್ 30ರವರೆಗೆ ನಿವೃತ್ತರಾದ ನೌಕರರಿಗೆ ಪಿಂಚಣಿ ಸೌಲಭ್ಯಗಳು ಲಭಿಸದೇ ಇದ್ದಲ್ಲಿ ವಿವರಗಳೊಂದಿಗೆ ಪಿಂಚಣಿ. ಸಣ್ಣ ಉಳಿತಾಯ ಮತ್ತು ಆಸ್ತಿ-ಋಣ ನಿರ್ವಹಣೆ ಇಲಾಖೆಗೆ ನೇರವಾಗಿ ಲಿಖಿತ ರೂಪದಲ್ಲಿ ತಿಳಿಸುವಂತೆ ಬೆಳಗಾವಿ ಪಿಂಚಣಿ. ಸಣ್ಣ ಉಳಿತಾಯ ಮತ್ತು ಆಸ್ತಿ-ಋಣ ನಿರ್ವಹಣೆ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿಭಾ ಪುರಸ್ಕಾರ ಆಗಸ್ಟ್ ಮೊದಲ ವಾರ
ದಾನಿಗಳ ಮೂಲಕ ನಗದು ಪುರಸ್ಕಾರ – ಡಾ.ಬೊಮ್ಮನಹಳ್ಳಿ
ಜಿಲ್ಲೆಯ ಜಾಣ-ಜಾಣೆಯರನ್ನು ಸನ್ಮಾನಿಸಿ, ದಾನಿಗಳ ಮೂಲಕ ನಗದು ಬಹುಮಾನ ಕೊಡಿಸುವ ಸತ್ಸಂಪ್ರದಾಯವನ್ನು ಈ ವರ್ಷವೂ ಪ್ರತಿಭಾ ಪುರಸ್ಕಾರ ಸಮಾರಂಭ ಆಯೋಜಿಸಲು ಜಿಲ್ಲಾಡಳಿತ ನಿರ್ಧರಿಸಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದರು.
ಪ್ರತಿಭಾ ಪುರಸ್ಕಾರ ಸಮಾರಂಭಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ(ಜು.24) ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆ, ವಸತಿಶಾಲೆಗಳಲ್ಲಿ ಕಲಿತು ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.92ಕ್ಕೂ ಅಧಿಕ ಅಂಕಗಳನ್ನು ಗಳಿಸಿದ ಜಾಣ-ಜಾಣೆಯರನ್ನು ಸನ್ಮಾನಿಸುವ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಈ ವರ್ಷ ಅಗಸ್ಟ್ ಮೊದಲ ವಾರದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಶೇ. 92 ಕ್ಕಿಂತ ಹೆಚ್ಚು ಅಂಕ ಗಳಿಸಿದ ಮಕ್ಕಳಿಗೆ ಹತ್ತು ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿಪತ್ರಗಳನ್ನು ನೀಡುವ ಸಂಪ್ರದಾಯವನ್ನು ಜಿಲ್ಲಾಡಳಿತವು ಪ್ರತಿವರ್ಷ ಪಾಲಿಸಿಕೊಂಡು ಬಂದಿದೆ. ಅದೇ ರೀತಿ ಈ ಸಲ ಕೂಡ ಸಮಾರಂಭವನ್ನು ಅಚ್ಚುಕಟ್ಟಾಗಿ ನಡೆಸಲು ಅಧಿಕಾರಿಗಳು ಶ್ರಮಿಸಬೇಕು ಎಂದು ತಿಳಿಸಿದರು.
ಕಳೆದ ಬಾರಿ ಶೇ.90 ಕ್ಕಿಂತ ಅಧಿಕ ಅಂಕ ಗಳಿಸಿದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗಿತ್ತು. ಈ ಬಾರಿ ಮಕ್ಕಳ ಸಂಖ್ಯೆಯನ್ನು ಆಧರಿಸಿ ಶೇ.92ಕ್ಕಿಂತ ಹೆಚ್ಚು ಅಂಕ ಗಳಿಸಿದ ಮಕ್ಕಳನ್ನು ಪುರಸ್ಕಾರಕ್ಕೆ ಪರಿಗಣಿಸುವ ಬಗ್ಗೆ ನಂತರ ನಿರ್ಧರಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲೆಯಲ್ಲಿರುವ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಅವರ ಸಂಖ್ಯೆಗೆ ಅನುಗುಣವಾಗಿ ದಾನಿಗಳನ್ನು ಗುರುತಿಸಿ, ಅವರ ಮೂಲಕವೇ ಮಕ್ಕಳಿಗೆ ಚೆಕ್ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಶೇ.92 ಕ್ಕೂ ಅಧಿಕ ಅಂಕ ಗಳಿಸಿರುವ ಮಕ್ಕಳ ಪಟ್ಟಿಯನ್ನು ತಯಾರಿಸಿ, ಅವರ ಸಂಖ್ಯೆಗೆ ಅನುಗುಣವಾಗಿ ದಾನಿಗಳನ್ನು ಗುರುತಿಸಿ ಸಮನ್ವಯತೆ ಸಾಧಿಸುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಡಾ.ಬೊಮ್ಮನಹಳ್ಳಿ ಸೂಚನೆ ನೀಡಿದರು.
ಬೆಳಗಾವಿ ಮಹಾನಗರ ಪೊಲೀಸ್ ಆಯುಕ್ತ ಡಾ.ಬಿ.ಎಸ್.ಲೋಕೇಶ್ ಕುಮಾರ್, ಅಪರ ಜಿಲ್ಲಾಧಿಕಾರಿ ಡಾ.ಬೂದೆಪ್ಪ ಹೆಚ್.ಬಿ. ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರತಿ ಸೋಮವಾರ ಸಾರಿಗೆ ಅದಾಲತ್
ಬೆಳಗಾವಿ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಪ್ರತಿ ಸೋಮವಾರ ಮಧ್ಯಾಹ್ನ 3 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸಾರಿಗೆ ಅದಾಲತ್ ನಡೆಸಲಾಗುವುದು ಎಂದು ಪ್ರಾದೇಶಿಕ ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಗಾವಿ ಮತ್ತು ಖಾನಾಪೂರ ತಾಲ್ಲೂಕು ವ್ಯಾಪ್ತಿಯ ವಾಹನ ಮಾಲೀಕರು ಹಾಗೂ ಸಾರ್ವಜನಿಕರು ತಮ್ಮ ವಾಹನಗಳಿಗೆ ಸಂಬಂಧಿಸಿದ ಹಾಗೂ ಚಾಲನಾ ಅನುಜ್ಞಾ ಪತ್ರಗಳಿಗೆ ಸಂಬಂಧಿಸಿದ ಕುಂದುಕೊರತೆಗಳು ಇದ್ದಲ್ಲಿ ನೇರವಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿಗಳನ್ನು ಭೇಟಿ ಮಾಡಿ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಬೆಳಗಾವಿ ಪ್ರಾದೇಶಿಕ ಸಾರಿಗೆ ಕಚೇರಿಯ ದೂರವಾಣಿ ಸಂಖ್ಯೆ 0831-2465503 ಗೆ ಸಂಪರ್ಕಿಸಬೇಕೆಂದು ಬೆಳಗಾವಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲೋಕಾಯುಕ್ತ ಅಹವಾಲು ಸ್ವೀಕಾರ
ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರು ಬೆಳಗಾವಿ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವರು.
ಜಿಲ್ಲೆಯಲ್ಲಿ ಯಾರಿಗಾದರೂ ಸರ್ಕಾರಿ ಅಧಿಕಾರಿಗಳಿಂದ ತಮಗೆ ಆಗಬೇಕಾದ ಕೆಲಸದಲ್ಲಿ ವಿಳಂಬವೇನಾದರೂ ಆಗಿದ್ದರೆ ಅಥವಾ ಅಧಿಕಾರಿಗಳು ನ್ಯಾಯಯುತವಾಗಿ ಮಾಡಿಕೊಡಬೇಕಾದ ಕೆಲಸಗಳಲ್ಲಿ ವ್ಯಥಾ ತೊಂದರೆ ಕೊಡುವುದು ಅಥವಾ ಲಂಚ ಕೇಳುವುದು ಇತ್ಯಾದಿ ದುರಾಡಳಿತದಲ್ಲಿ ತೊಡಗಿದ್ದರೆ, ಅದರಿಂದ ತೊಂದರೆಗೊಳಗಾದವರು ಅಗಸ್ಟ್ 13 ರ ಒಳಗೆ ಲೋಕಾಯುಕ್ತ ಪೊಲೀಸ್ ಅಧೀಕ್ಷಕರ ಕಚೇರಿಗೆ ಸಹಿ ಮಾಡಿದ ದೂರು ಅರ್ಜಿಗಳನ್ನು ಹಾಗೂ ನಿಗದಿತ ನಮೂನೆಯ ಫಾರ್ಮ ನಂ.1 & 2 ಗಳನ್ನು ಭರ್ತಿ ಮಾಡಿ ನೋಟರಿಯಿಂದ ಅಫಿಡೆವಿಟ್ ಮಾಡಿಸಿದ ಅರ್ಜಿಗಳನ್ನು ಸಲ್ಲಿಸಬಹುದು.
ಅನಾಮಧೇಯ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಅರ್ಜಿ ಕೊಡಬೇಕಾದ ಅಂತಿಮ ದಿನಾಂಕದಿಂದ ಸುಮಾರು 10 ರಿಂದ 20 ದಿನಗಳಾದ ಮೇಲೆ ಒಂದು ನಿಗದಿತ ದಿನಾಂಕದಂದು ಅರ್ಜಿ ಕೊಟ್ಟಿರುವವರೆಲ್ಲರೂ ತಮ್ಮ ಅರ್ಜಿಯಲ್ಲಿನ ಅಹವಾಲುಗಳನ್ನು ಗೌರವಾನ್ವಿತ ಲೋಕಾಯುಕ್ತರ ಮುಂದೆ ಹೇಳಿಕೊಳ್ಳಬಹುದು. ಆ ನಿಗದಿತ ದಿನಾಂಕವನ್ನು ಮುಂದೆ ತಿಳಿಸಲಾಗುವುದು. ಆ ದಿನಾಂಕದಂದು ಜಿಲ್ಲೆಯ ಕೇಂದ್ರದಲ್ಲಿ ಒಂದು ನಿಗದಿತ ಸ್ಥಳದಲ್ಲಿ ಗೌರವಾನ್ವಿತ ಲೋಕಾಯುಕ್ತರವರೇ ಖುದ್ದು ಅಹವಾಲುಸ್ವೀಕರಿಸುವರು.
ಜನತೆಯ ಕುಂದು ಕೊರತೆಗಳನ್ನು ನಿವಾರಿಸುವುದೇ ಈ ಸಭೆಯ ಉದ್ದೇಶವಾದುದರಿಂದ ದುರುದ್ದೇಶದಿಂದ ಕೂಡಿದ ದೂರುಗಳನ್ನಾಗಲೀ ಅಥವಾ ವ್ಯರ್ಥ ವಾಗ್ವಾದಗಳನ್ನಾಗಲೀ ಮಾನ್ಯ ಮಾಡುವುದಿಲ್ಲ. ಆಡಳಿತದಲ್ಲಿ ಪಾರದರ್ಶಕತೆ ತರುವುದು ಲೋಕಾಯುಕ್ತ ಸಂಸ್ಥೆಯ ಮುಖ್ಯ ಗುರಿಯಾಗಿರುವುದರಿಂದ ಈ ವಿಷಯದಲ್ಲಿ ಸಾರ್ವಜನಿಕ ಬಾಂಧವರು ಸಹಕರಿಸಬೇಕಾಗಿ ಎಂದು ಬೆಳಗಾವಿ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುರಕ್ಷತಾ ಸಲಹೆಗಳ ಬಗ್ಗೆ ಗ್ರಾಹಕರಲ್ಲಿ ಜಾಗೃತಿ
ಕ.ವಿ.ಪ್ರ.ನಿ.ನಿ. ವತಿಯಿಂದ ಗ್ರಾಮೀಣ ಉಪ ವಿಭಾಗ-2 ರ ಯಮನಾಪೂರ ಶಾಖೆ ವ್ಯಾಪ್ತಿಗೆ ಬರುವ ಗ್ರಾಮಗಳ ಗ್ರಾಹಕರ ಸಭೆಯನ್ನು ಆಗಸ್ಟ್ 26 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1. ಗಂಟೆ ವರಗೆ ಕಾಕತಿ ಸಿದ್ದೇಶ್ವರ ಮಂದಿರದಲ್ಲಿ ವಿದ್ಯುತ್ ಬಳಕೆಯಲ್ಲಿ ಸುರಕ್ಷತಾ ಸಲಹೆಗಳು, ಎಲ್.ಇ.ಡಿ ಬಳಕೆಯ ಪ್ರಯೋಜನ ಹಾಗೂ ಸೌರಶಕ್ತಿ ಬಳಸುವುದರ ಬಗ್ಗೆ ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಸಭೆಯನ್ನು ಆಯೋಜಿಸಲಾಗಿದೆ.
ಸದರಿ ಸಭೆಗೆ ಕಾಕತಿ, ಕಂಗ್ರಾಳಿ ಬಿ.ಕೆ, ಗೊಂಡವಾಡ ಹಾಗೂ ಹೊನಗಾ ಕೈಗಾರಿಕೆ ಪ್ರದೇಶದ ಗ್ರಾಹಕರು ಈ ಸಭೆಗೆ ಹಾಜರಾಗಿ ಸಾರ್ವಜನಿಕರು ಪ್ರಯೋಜನ ಪಡೆದುಕೊಳ್ಳಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೋಟಾ ವೈರಸ್ ಲಸಿಕಾ ಪರಿಚಯ ಕಾರ್ಯಾಗಾರ
ಬೆಳಗಾವಿ ಜಿಲ್ಲೆಯಲ್ಲಿ ಪೋಲಿಯೋ, ಬಾಲಕ್ಷಯ, ಮಿಜಲ್ಸ್ ರೂಬೆಲ್ಲಾ (ಗೋಬ್ಬರ), ನಾಯಿಕೆಮ್ಮು, ಗಂಟಲು ಮಾರಿ, ಧರ್ನುವಾಯು, ಇನ್‌ಪ್ಲೊಯಂಜಯಾ, ಕಾಮಾಲೆ, 9 ರೋಗಗಳ ವಿರುದ್ದ ಲಸಿಕೆಯನ್ನು ನೀಡಲಾಗುತ್ತಿದ್ದು ಈಗ ಹೊಸದಾಗಿ 10ನೇಯ ಲಸಿಕೆಯಾಗಿ ರೋಟಾ ವೈರಸ್ ಲಸಿಕೆಯನ್ನು ಅಗಷ್ಟ ತಿಂಗಳಲ್ಲಿ ಪ್ರಾರಂಭಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕು.ಕ ಅಧಿಕಾರಿಗಳಾದ ಡಾ: ಶಶಿಕಾಂತ ವ್ಹಿ ಮುನ್ಯಾಳ ಅವರು ಹೇಳಿದರು.
ಇಂದು (ಜು.24) ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ರೋಟಾ ವೈರಸ್ ಲಸಿಕೆಯನ್ನು ಅಳವಡಿಸುವ ಕುರಿತು ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ನಡೆದು ಬಂದ ದಾರಿಯ ಕುರಿತು ಮಾತನಾಡುತ್ತಾ ಈಗಾಗಲೇ ಮಕ್ಕಳಲ್ಲಿ ಉಂಟಾಗುವ ಗಂಭೀರ ಸ್ವರೊಪದ ಬೇದಿಯಿಂದ ರಕ್ಷಣೆ ಪಡೆಯಲು ಈ ಲಸಿಕೆಯು ಉಪಯೋಗಕಾರಿಯಾಗಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಡಾ.ಸಿದ್ದಲಿಂಗಯ್ಯಾ ಎಸ್.ಎಮ್ ಓ ಬೆಳಗಾವಿ, ಡಾ.ಪ್ರವೀಣಸ್ವಾಮಿ ಯು.ಎನ್.ಡಿ.ಪಿ ಬೆಳಗಾವಿ, ಡಾ.ಶಿವಾನಂದ ಮಾಸ್ತಿಹೊಳಿ ಮುಖ್ಯ ವೈದ್ಯಾಧಿಕಾರಿಗಳು ಸಮುದಾಯ ಆರೋಗ್ಯ ಕೇಂದ್ರ ಕಿತ್ತೂರ, ಡಾ.ಸಾವಿತ್ರಿ ಬೆಂಡಿಗೇರಿ ಕುಟುಂಬ ಕಲ್ಯಾಣ ಅಧಿಕಾರಿಗಳು ಬೆಳಗಾವಿ, ಡಾ.ಬಿ.ಎನ್‌ತುಕ್ಕಾರ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು, ಡಾ. ಅನಿಲ ಕೊರಬು ಜಿಲ್ಲಾ ಕ್ಷಯರೋಗ ಅಧಿಕಾರಿಗಳು ಮತ್ತು ಡಾ.ಎಮ್.ಎಸ್.ಪಲ್ಲೆದ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಾಗಾರದಲ್ಲಿ ತಾಲೂಕಾ ಆರೋಗ್ಯಾಧಿಕಾರಿಗಳು, ವೈದ್ಯಾಧಿಕಾರಿಗಳು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು, ಹಿರಿಯ ಆರೋಗ್ಯ ಸಹಾಯಕರು. ಪಾರ್ಮಾಸಿಸ್ಟ ಮತ್ತು ಇಲಾಖೆಯ ಸಿಬ್ಬಂಧಿಗಳು ಹಾಜರಿದ್ದರು.
ಪ್ರಾರಂಭದಲ್ಲಿ ಡಾ.ಐ.ಪಿ ಗಡಾದ ಜಿಲ್ಲಾ ತಾಯಿ ಮಕ್ಕಳ ಆರೋಗ್ಯ ಅಧಿಕಾರಿಗಳು ಬೆಳಗಾವಿ ಇವರು ಎಲ್ಲರಿಗೂ ಸ್ವಾಗತ ಕೋರಿ ರೋಟಾ ವೈರಸ್ ಲಸಿಕೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಪಿ ಯಲಿಗಾರ ಪ್ರಬಾರಿ ಜಿಲ್ಲಾ ಆರೊಗ್ಯ ಶಿಕ್ಷಣಾಧಿಕಾರಿಗಳು ಬೆಳಗಾವಿ ಇವರು ವಂದಿಸಿದರು. ಸಿ.ಜಿ ಅಗ್ನಿಹೋತ್ರಿ ಕಾರ್ಯಕ್ರಮ ನಿರೂಪಿಸಿದರು. ///
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ