Kannada News

ಕಬ್ಬಿನ ಕೃಷಿಯಲ್ಲಿ ಡ್ರೋನ್ ತಂತ್ರಜ್ಞಾನ ಅಳವಡಿಕೆ

ಕಬ್ಬಿನ ಕೃಷಿಯಲ್ಲಿ ಡ್ರೋನ್ ತಂತ್ರಜ್ಞಾನ ಅಳವಡಿಕೆ

ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಬೆಳಗಾವಿಯು ದಿನಾಂಕ 24.07.2019 ರಂದು ಕರ್ನಾಟಕದ ಸಕ್ಕರೆ ಕಾರ್ಖಾನೆಗಳ ಕಬ್ಬು ವಿಭಾಗದ ಅಧಿಕಾರಿ/ಸಿಬ್ಬಂದಿಯವರಿಗೆ ಕಬ್ಬು ಬೇಸಾಯದಲ್ಲಿ ಡ್ರೋನ್ ತಂತ್ರಜ್ಞಾನ ಅಳವಡಿಕೆ ಕುರಿತು ವಿಚಾರ ಸಂಕಿರಣವನ್ನು ಸಂಸ್ಥೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಡಾ|| ಎಂ. ಬಿ. ಚೆಟ್ಟಿ, ಕುಲಪತಿಗಳು, ಕೃಷಿ ವಿಶ್ವವಿದ್ಯಾಲಯ, ಧಾರವಾಡ ಇವರು ವಿಚಾರ ಸಂಕಿರಣದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಸದರಿಯವರು ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತ್ತ, ಕಬ್ಬು ಬೆಳೆಯು ಹೆಚ್ಚು ಅವಧಿಯ ಬೆಳೆಯಾಗಿದ್ದು, ದಿನಂಪ್ರತಿ ಬದಲಾಗುತ್ತಿರುವ ಹೊಸ ಹೊಸ ತಂತ್ರಜ್ಞಾನಗಳನ್ನು ತಿಳಿದುಕೊಂಡು ರೈತರು ತಮ್ಮ ಜಮೀನಿನಲ್ಲಿ ಅಳವಡಿಸಿ, ಕ್ಷೇತ್ರವಾರು ಅಧಿಕ ಇಳುವರಿ ಮತ್ತು ಆದಾಯ ಪಡೆದುಕೊಳ್ಳುವುದು ಅವಶ್ಯವಿದೆ ಎಂದು ಹೇಳಿದರು.

ಡ್ರೋನ್ ತಂತ್ರಜ್ಞಾನದ ಉಪಯೋಗ ಮತ್ತು ನಿರ್ಬಂಧಗಳನ್ನು ತಿಳಿದುಕೊಂಡು ಈ ದಿಶೆಯಲ್ಲಿ ನಮ್ಮ ದೇಶದ ಪರಿಸ್ಥಿತಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೈಗೊಂಡು ಕ್ಷೇತ್ರದಲ್ಲಿ ಅಳವಡಿಕೆಗೆ ಅವಶ್ಯವಿದೆ ಎಂದು ತಿಳಿಸಿದರು.

ಕಬ್ಬು ಒಂದು ವಾರ್ಷಿಕ ಬೆಳೆಯಾಗಿದ್ದರಿಂದ ಇದರ ಕಾಲಾವಧಿಯನ್ನು ಕಡಿಮೆಗೊಳಿಸಲು ಅಲ್ಪಾವಧಿಯಲ್ಲಿ ಮಾಗುವಿಕೆಗಾಗಿ ರಸಾಯನಿಕಗಳನ್ನು ಉಪಯೋಗಿಸಲು ಡ್ರೋನ್ ಉಪಯೋಗಿಸುವುದು ಸೂಕ್ತವಾಗುವ ನಿಟ್ಟಿನಲ್ಲಿ ಅಧ್ಯಯನ ಮತ್ತು ಅಳವಡಿಕೆ ಕೈಗೊಳ್ಳಬೇಕಾಗಿದೆ. ಯಾವುದೇ ತಂತ್ರಜ್ಞಾನ ಉಪಯೋಗಿಸಿದ್ದಲ್ಲಿ ಈಗಿರುವ ಆದಾಯಕ್ಕಿಂತ ಹೆಚ್ಚಿಗೆ ಆದಾಯ ಪಡೆದುಕೊಂಡಾಗ ಅವುಗಳ ಉಪಯೋಗ ಮತ್ತು ವಿಸ್ತರಣಾ ಕಾರ್ಯ ಶೀಘ್ರವಾಗಿ ಕ್ಷೇತ್ರ ಅಳವಡಿಕೆ ಹೆಚ್ಚು ಉಪಯುಕ್ತವಿದೆ ಎಂದು ತಿಳಿಸಿದರು.

ಕೃಷಿ ವಿಶ್ವವಿದ್ಯಾಲಯವು ರೈತರ ಮತ್ತು ವಿದ್ಯಾರ್ಥಿಗಳ ಏಳಿಗೆಗೆ ಹೆಚ್ಚು ಒತ್ತು ಕೊಟ್ಟು ಅಧ್ಯಯನ ಕಾರ್ಯವನ್ನು ಕೈಗೊಂಡಿರುತ್ತದೆ ಎಂದು ಹೇಳಿದರು. ವಿಶ್ವವಿದ್ಯಾಲಯವು ಪ್ರತಿ ವರ್ಷ ಕೈಗೊಳ್ಳುವ ಕೃಷಿ ಮೇಳವು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕರ್ನಾಟಕವಲ್ಲದೆ ಭಾರತದಾದ್ಯಂತ ಹೆಸರು ವಾಸಿಯಾಗಿದೆ. ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಸಕ್ಕರೆ ಕಾರ್ಖಾನೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಡಾ|| ಆರ್. ಬಿ. ಖಾಂಡಗಾವೆ ನಿರ್ದೇಶಕರು ಇವರು ಅಧ್ಯಕ್ಷತೆಯನ್ನು ವಹಿಸಿದ್ದರು. ಮುಂದುವರೆದು, ಪ್ರಾಸ್ತಾವಿಕವಾಗಿ ಮಾತನಾಡುತ್ತ, ಸಂಸ್ಥೆಯು ರೈತರಿಗೆ ಮತ್ತು ಸಕ್ಕರೆ ಕಾರ್ಖಾನೆಗಳಿಗೆ ಬೇಕಾಗುವ ತಂತ್ರಜ್ಞಾನ ಮತ್ತು ವಿಸ್ತರಣಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಬಗ್ಗೆ, ಸಂಸ್ಥೆಯಿಂದ ಕೈಗೊಳ್ಳುವ ವಿವಿಧ ಚಟುವಟಿಕೆಗಳ ಬಗ್ಗೆ ವಿವರಿಸಿದರು.

ಭಾರತದಲ್ಲಿ ಡ್ರೋನ್ ತಾಂತ್ರಿಕತೆಯು ಹೊಸದಾಗಿದ್ದು, ಬೇರೆ ದೇಶಗಳಲ್ಲಿ ಅವಳಡಿಸಿದಂತೆ ನಮ್ಮ ಕ್ಷೇತ್ರದಲ್ಲಿ ಅಳವಡಿಸಲು ಹೆಚ್ಚಿನ ಅಧ್ಯಯನದ ಅವಶ್ಯಕತೆವಿದೆ ಹಾಗೂ ಕಬ್ಬಿನ ಬೆಳೆಯಲ್ಲಿ ಕಳೆ ನಿರ್ವಹಣೆ, ಕೀಟ ಮತ್ತು ರೋಗಗಳ ನಿರ್ವಹಣೆ, ಮಾಗುವಿಕೆಗಾಗಿ ರಸಾಯನಿಕಗಳ ಸಿಂಪರಣೆ ಹಾಗೂ ಇನ್ನಿತರ ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಡ್ರೊಡ್ರೋನ್ ತಂತ್ರಜ್ಞಾನ ಉಪಯೋಗಿಸಬಹುದಾಗಿದೆ ಎಂದು ತಿಳಿಸಿದರು.

ಡಾ|| ಆರುಮುಗನಾಥನ್, ವಿಜ್ಞಾನಿ, ಕಬ್ಬು ಸಂವರ್ಧನಾ ಸಂಸ್ಥೆ, ಕೊಯಿಮುತ್ತೂರು ಇವರು “ಕಬ್ಬು ಬೇಸಾಯದಲ್ಲಿ ಡ್ರೋನ್ ತಂತ್ರಜ್ಞಾನ ಅಳವಡಿಕೆ” ಕುರಿತು ಉಪನ್ಯಾಸ ನೀಡುತ್ತಾ ಅದರ ಉಪಯೋಗ ಮತ್ತು ತೊಂದರೆಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು.

ಈ ವಿಚಾರ ಸಂಕಿರಣದಲ್ಲಿ ಕರ್ನಾಟಕದ ಸಕ್ಕರೆ ಕಾರ್ಖಾನೆಗಳ 80 ಕ್ಕೂ ಹೆಚ್ಚು ಕಬ್ಬು ವಿಭಾಗದ ಅಧಿಕಾರಿ/ಸಿಬ್ಬಂದಿಯವರು ಭಾಗವಹಿಸಿದ್ದರು. ಸದರಿ ಕಾರ್ಯಕ್ರಮವನ್ನು ಸಂಸ್ಥೆಯ ಆರ್.ಬಿ.ಸುತಗುಂಡಿ, ಸಹಾಯಕ ಪ್ರಾಧ್ಯಾಪಕ (ಬೇಸಾಯಶಾಸ್ತ್ರ) ಇವರು ನಿರೂಪಿಸಿದರು, ಎನ್. ಆರ್. ಯಕ್ಕೇಲಿ, ಮುಖ್ಯಸ್ಥರು ಕೃಷಿ ವಿಭಾಗ ಇವರು ಸ್ವಾಗತಿಸಿದರು. ಡಾ||ಮಂಜುನಾಥ ಚೌರಡ್ಡಿ, ಸಹಾಯಕ ಪ್ರಾಧ್ಯಾಪಕರು (ಕೀಟಶಾಸ್ತ್ರ) ಇವರು ವಂದಿಸಿದರು////

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button