*ಪ್ರವಾಸೋದ್ಯಮ ನೀತಿಯಿಂದ 1.5 ಲಕ್ಷ ಉದ್ಯೋಗ ಸೃಷ್ಟಿ : ಡಿಸಿಎಂ ಡಿ.ಕೆ. ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: “ಮಂಡ್ಯ ಜಿಲ್ಲೆಗೆ ನೀರಾವರಿ ಇಲಾಖೆಯಿಂದ ₹1970 ಕೋಟಿ ಮೊತ್ತದ ಕಾಮಗಾರಿಗಳನ್ನು ಮಂಜೂರು ಮಾಡಲಾಗಿದೆ. ಕರ್ನಾಟಕದ ಇತಿಹಾಸದಲ್ಲಿಯೇ ಮಂಡ್ಯ ಜಿಲ್ಲೆಗೆ ಇಷ್ಟು ದೊಡ್ಡ ಮೊತ್ತದ ಅನುದಾನ ನೀಡಿದ ಉದಾಹರಣೆಯೇ ಇಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.

ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ಭಾನುವಾರ ನಡೆದ ಗಗನಚುಕ್ಕಿ ಜಲಪಾತೋತ್ಸವದ ಸಮಾರೋಪ ಸಮಾರಂಭದಲ್ಲಿ ಜಲಸಂಪನ್ಮೂಲ ಸಚಿವರೂ ಆದ ಶಿವಕುಮಾರ್ ಅವರು ಮಾತನಾಡಿದರು.
“ಅನುದಾನದ ವಿಚಾರದಲ್ಲಿ ಡಿ.ಕೆ. ಶಿವಕುಮಾರ್ ಸುಳ್ಳು ಹೇಳಿದ್ದರೇ ವಿರೋಧ ಪಕ್ಷದವರು ಚರ್ಚೆ ಮಾಡಬಹುದು. ಜಿಲ್ಲೆಯ ಅಭಿವೃದ್ಧಿಗೆ ನಾನು ಬದ್ಧನಾಗಿದ್ದೇನೆ. ಮಂಡ್ಯ ಜಿಲ್ಲೆಯ ರೈತರ ಬದುಕಿನ ಉನ್ನತಿ ಸೇರಿದಂತೆ ಎಲ್ಲರ ಸರ್ವತೋಮುಖ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಲು ಸಿದ್ದರಾಮಯ್ಯ ಅವರ ಸರ್ಕಾರ ಪಣತೊಟ್ಟಿದೆ” ಎಂದರು.
“ಮಳವಳ್ಳಿಯ ಜನಪ್ರಿಯ ಶಾಸಕರಾದ ನರೇಂದ್ರ ಸ್ವಾಮಿ ಅವರು ತಮ್ಮ ಕ್ಷೇತ್ರದ ಅಭಿವೃದ್ಧಿಗೆ ₹300 ಕೋಟಿ ರೂ. ಅನುದಾನ ತಂದಿದ್ದಾರೆ. ಮಂಡ್ಯ ಜನತೆಯ ಸೇವೆಗೆ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ. ನಾವು ನಿಮ್ಮ ನಂಬಿಕೆ ಉಳಿಸಿಕೊಳ್ಳುವ ಕೆಲಸ ಮಾಡುತ್ತಿದ್ದೇವೆ. ಅಧಿಕಾರಿಗಳು ಸಹ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಕೆಲವೊಬ್ಬರು ಜಿಲ್ಲೆಯಲ್ಲಿ ಶಾಂತಿಭಂಗ ಮಾಡುವ ಕೆಲಸ ಮಾಡುತ್ತಿದ್ದಾರೆ” ಎಂದರು.
“ನಗುವು ಸಹಜದ ಧರ್ಮ, ನಗಿಸುವುದು ಪರಧರ್ಮ, ನಗುವ ಕೇಳುತ ನಗುವುದತಿಶಯದ ಧರ್ಮ, ನಗುವ ನಗಿಸುವ ನಗಿಸಿ ನಗುತ ಬಾಳುವ ವರವಮಿಗೆ ನೀನು ಬೇಡಿಕೊಳೊ ಮಂಕುತಿಮ್ಮ ಎಂದು ಡಿವಿಜಿ ಹೇಳಿದ್ದಾರೆ. ಏನೇ ಬಂದರೂ ಎಲ್ಲರೂ ನಗುತಾ ಒಟ್ಟಾಗಿ ಬಾಳಬೇಕು” ಎಂದು ಕರೆ ನೀಡಿದರು.
*ಪ್ರವಾಸೋದ್ಯಮ ನೀತಿಯಿಂದ 1.5 ಲಕ್ಷ ಉದ್ಯೋಗ ಸೃಷ್ಟಿ ಗುರಿ

“ನಮ್ಮ ಕರ್ನಾಟಕ ಸಾಹಿತ್ಯ, ಸಂಗೀತ, ಚಿತ್ರಕಲೆ, ಶಿಲ್ಪಕಲೆ, ಧಾರ್ಮಿಕ, ಶೈಕ್ಷಣಿಕ ಹೀಗೆ ಅನೇಕ ರಂಗಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ರಾಜ್ಯ ಪ್ರವಾಸೋದ್ಯಮ ನೀತಿಯನ್ನು ರೂಪಿಸಿ ನಾವು ಇತರರಿಗೆ ಮಾದರಿಯಾಗಿದ್ದೇವೆ. ಇದರಿಂದ 1.5 ಲಕ್ಷ ಉದ್ಯೋಗ ಸೃಷ್ಟಿಗೆ ನಾವು ಮುಂದಡಿಯಿಟ್ಟಿದ್ದೇವೆ” ಎಂದರು.
“ಕಾವೇರಿ ಆರತಿ ಮೂಲಕ ತಾಯಿಗೆ ನಮನ ಸಲ್ಲಿಸಲು ಹೊರಟಿದ್ದೆವು. ಕೋರ್ಟ್ ನಿರ್ಬಂಧ ಹಾಗೂ ರೈತ ಸಂಘದವರ ಅಡಚಣೆಯಿಂದ ನಿಧಾನವಾಗುತ್ತಿದೆ. ಪ್ರಾರ್ಥನೆ ಸಲ್ಲಿಸಲು, ಆರತಿ ಮಾಡಲು ಯಾರೂ ಸಹ ನಿರ್ಬಂಧ ಮಾಡಲು ಸಾಧ್ಯವಿಲ್ಲ” ಎಂದರು.
“ಈ ಭಾಗದಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಸಂಬಂಧಪಟ್ಟ ಸಚಿವರು, ಜನಪ್ರತಿನಿಧಿಗಳ ಜೊತೆ ಚರ್ಚೆ ನಡೆಸಲಾಗುವುದು. ಪ್ರವಾಸೋದ್ಯಮದಿಂದ ಯುವಕರ ಬದುಕಿನಲ್ಲಿ ಬದಲಾವಣೆಯಾಗಲಿದೆ. ಉದ್ಯೋಗ ಸೃಷ್ಟಿಯಾಗಲಿದೆ. ಕಬಿನಿ ಭಾಗದಲ್ಲಿನ ಪ್ರಾಕೃತಿಕ ಸಂಪತ್ತು ದೇಶದಲ್ಲಿಯೇ ಅಪರೂಪ. ಕರ್ನಾಟಕ ಜಲಪಾತಗಳ ತವರೂರು. ನಮ್ಮ ರಾಜ್ಯದಲ್ಲಿ ಸುಮಾರು 544 ಕ್ಕೂ ಹೆಚ್ಚು ಜಲಪಾತಗಳಿವೆ” ಎಂದರು.
“ಪ್ರವಾಸೋದ್ಯಮದಿಂದ ಸಾಕಷ್ಟು ಅಭಿವೃದ್ಧಿ ಸಾಧ್ಯ. ಕಳೆದ ವರ್ಷ ಸುಮಾರು 10 ಲಕ್ಷ ಜನರು ದಸರಾ ವೀಕ್ಷಣೆ ಮಾಡಿದರು. ಶಕ್ತಿ ಯೋಜನೆಯ ಪರಿಣಾಮ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ದಸರಾದಲ್ಲಿ ಭಾಗವಹಿಸಿದರು” ಎಂದರು.
“ಹೆಚ್ಚುವರಿ ಕಾವೇರಿ ನೀರಿನ ಸಂಗ್ರಹಕ್ಕಾಗಿ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ನಾನು ಹೋರಾಟ ಪ್ರಾರಂಭ ಮಾಡಿದೆ. ನಮ್ಮ ನೀರು ನಮ್ಮ ಹಕ್ಕು ಎಂದು ಮೇಕೆದಾಟಿನಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಮಾಡಲಾಯಿತು. ಪ್ರಕೃತಿಯನ್ನು ಪೂಜಿಸುವುದು ನಮ್ಮ ಸಂಸ್ಕೃತಿ. ಜೂನ್ ತಿಂಗಳಿನಲ್ಲಿಯೇ ಕನ್ನಂಬಾಡಿ ಅಣೆಕಟ್ಟು ತುಂಬಿ ಇತಿಹಾಸ ನಿರ್ಮಾಣವಾಗಿದೆ. ಈ ವರ್ಷ 125 ಟಿಎಂಸಿ ಹೆಚ್ಚುವರಿ ನೀರು ತಮಿಳುನಾಡಿಗೆ ಹರಿದು ಹೋಗಿದೆ. ತೀರ್ಪಿನ ಪ್ರಕಾರ 177 ಟಿಎಂಸಿ ನೀರು ಹರಿಸಬೇಕಿತ್ತು” ಎಂದರು.
“ಕಾವೇರಿ ತಾಯಿ ನಮಗೆ ಬದುಕು, ಅನ್ನ, ಜನ್ಮ ನೀಡಿದ್ದಾಳೆ. ಈಕೆ ಪುಣ್ಯದಾತೆ. ಕೊಡಗಿನಲ್ಲಿ ಜನಿಸಿ ಅರಬ್ಬಿ ಸಮುದ್ರ ಸೇರುವ ತನಕ ಲಕ್ಷಾಂತರ ಜನರಿಗೆ ಜೀವನ ನೀಡಿದ್ದಾಳೆ. ಕಾವೇರಿ ಹರಿಯುವ ಭೂಮಿ ಪವಿತ್ರ ಭೂಮಿ. ಕುಡಿಯುವ ನೀರಿಗೆ, ಕೈಗಾರಿಕೆಗೆ, ವಿದ್ಯುತ್ ಉತ್ಪಾದನೆಗೆ, ಪ್ರಮುಖವಾಗಿ ಕೃಷಿಗೆ, ಮೀನುಗಾರಿಕೆಗೆ ಹೀಗೆ ಪ್ರತಿ ಹಂತದಲ್ಲಿಯೂ ತಾಯಿ ಜೊತೆಯಾಗಿ ನಿಂತಿದ್ದಾಳೆ” ಎಂದರು.
“ಗಗನಚುಕ್ಕಿ ಜಲಪಾತವಿರುವ ಜಾಗ ಐತಿಹಾಸಿಕ ಸ್ಥಳ. ಏಷ್ಯಾದಲ್ಲಿಯೇ ಮೊಟ್ಟಮೊದಲು ಜಲವಿದ್ಯುತ್ ಉತ್ಪಾದನೆ ಮಾಡಿದ ಸ್ಥಳವಿದು. ಶಾಲಾ ದಿನಗಳಲ್ಲಿ ಇಲ್ಲಿಗೆ ಪ್ರವಾಸ ಬಂದಿದ್ದೆ. ಆನಂತರ ವಿದ್ಯುತ್ ಸಚಿವನಾಗಿದ್ದಾಗ ಭೇಟಿ ನೀಡಿದ್ದೆ. ಇಂದು ಮತ್ತೊಮ್ಮೆ ನೋಡುವ ಸೌಭಾಗ್ಯ ದೊರೆತಿದೆ. ಕೆಜಿಎಫ್ ಗೆ ವಿದ್ಯುತ್ ನೀಡಲು 1904 ರಲ್ಲಿ ಇಲ್ಲಿಂದ ವಿದ್ಯುತ್ ಉತ್ಪಾದನೆ ಮಾಡಿ ನೀಡಲಾಯಿತು. ಇಲ್ಲಿಂದ ವಿದ್ಯುತ್ ನೀಡದೇ ಇದ್ದಿದ್ದರೆ ಅಭಿವೃದ್ಧಿಯೇ ಇಲ್ಲವಾಗುತ್ತಿತ್ತು. ಇದರಿಂದ ನಮ್ಮೆಲ್ಲರ ಬದುಕಿಗೆ ಬೆಳಕು ಬಂದಿದೆ” ಎಂದರು.
“ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಜನರ ಬದುಕಿನಲ್ಲಿ ಬೆಳಕು ಬಂದಿದೆ. ಈ ಹಸ್ತ ರೈತರ, ಬಡವರ, ಕೂಲಿಕಾರ್ಮಿಕರ, ಮಹಿಳೆಯರ ಬದುಕನ್ನು ಭದ್ರ ಮಾಡಿದೆ” ಎಂದರು.