*ನಾಲ್ಕು ವರ್ಷಗಳ ಪ್ರೀತಿ ದುರಂತ ಅಂತ್ಯ*: *ಪ್ರೇಯಸಿಯನ್ನು ಉಸಿರುಗಟ್ಟಿಸಿ ಕೊಂದ ಪೇದೆ*

ಪ್ರಗತಿವಾಹಿನಿ ಸುದ್ದಿ: ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿಯನ್ನೇ ಪ್ರಿಯಕರ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಸುತ್ತಾಡಲು ಹೋಗೋಣ ಎಂದು ನಂಬಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಕೊಲೆ ಬಳಿಕ ಏನೂ ನಡೆದೇ ಇಲ್ಲ ಎಂಬಂತೆ ಯುವತಿಯ ಕುಟುಂಬದವರ ಜೊತೆ ಸೇರಿ ಹುಡುಕಾಟ ನಡೆಸಿದ್ದ ಆರೋಪಿಯ ಕೃತ್ಯ ಇದೀಗ ಬೆಳಕಿಗೆ ಬಂದಿದೆ.
ಮೃತ ಯುವತಿಯನ್ನು 23 ವರ್ಷದ ರಕ್ಷಿತಾ ಸರಿಕರ್ ಎಂದು ಗುರುತಿಸಲಾಗಿದೆ. ಕೇಂದ್ರ ಸಶಸ್ತ್ರ ಸೀಮಾ ಬಲದ ಪೇದೆ ಬಸಪ್ಪ ಸಾತನ್ನವಣ್ಣರ್ ಮತ್ತು ರಕ್ಷಿತಾ ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು. ಅಕ್ಟೋಬರ್ 28ರಂದು ಸುತ್ತಾಡಲು ಕರೆದೊಯ್ದ ಬಸಪ್ಪ, ನಿರ್ಜನ ಪ್ರದೇಶದಲ್ಲಿ ರಕ್ಷಿತಾಳನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ಕೊಲೆ ಬಳಿಕ ಬಸಪ್ಪ ವಾಪಸ್ ಊರಿಗೆ ಬಂದಿದ್ದಾನೆ. ಅಷ್ಟೇ ಅಲ್ಲ, ರಕ್ಷಿತಾಳ ಸಹೋದರನ ಜೊತೆ ಸೇರಿ ಆಕೆಯ ಹುಡುಕಾಟಕ್ಕೂ ಮುಂದಾಗಿದ್ದಾನೆ. ಬಳಿಕ ರಕ್ಷಿತಾ ನಾಪತ್ತೆಯಾಗಿರುವ ಬಗ್ಗೆ ಸಹೋದರ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.
ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು ಬಸಪ್ಪನನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ರಕ್ಷಿತಾಳನ್ನು ಕೊಲೆ ಮಾಡಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಘಟನೆ ಸಂಬಂಧ ಗೋಕಾಕ್ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.




