Kannada NewsKarnataka NewsLatest

*ಅರಮನೆ ಖಾಸಗಿ ಸ್ವತ್ತು, ಸರ್ಕಾರದ ಔದಾರ್ಯದಿಂದ ವಾಸವಿಲ್ಲ*: *ಪ್ರಮೋದಾ ದೇವಿ ಒಡೆಯರ್ ಸ್ಪಷ್ಟನೆ*

ಪ್ರಗತಿವಾಹಿನಿ ಸುದ್ದಿ: ಮೈಸೂರು ಅರಮನೆಯ ಮಾಲೀಕತ್ವ, ಅಂಬಾರಿಯ ಬಳಕೆ ಮತ್ತು ದಸರಾ ಸಂದರ್ಭದಲ್ಲಿ ಉಂಟಾದ ಗೊಂದಲಗಳ ಬಗ್ಗೆ ಪ್ರಮೋದಾ ದೇವಿ ಒಡೆಯರ್ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಅರಮನೆ ವಿಚಾರದಲ್ಲಿ ತಮ್ಮ ಕುಟುಂಬದ ಹಕ್ಕುಗಳನ್ನು ಪ್ರತಿಪಾದಿಸಿರುವ ಅವರು, ಅಂಬಾರಿ ಬಳಕೆಗೆ ಸಂಬಂಧಿಸಿದಂತೆ ಸರ್ಕಾರದೊಂದಿಗೆ ಇರುವ ಭಿನ್ನಾಭಿಪ್ರಾಯಗಳ ಬಗ್ಗೆಯೂ ಮಾತನಾಡಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಪ್ರಮೋದಾ ದೇವಿ ಒಡೆಯರ್, ಮೈಸೂರು ಅರಮನೆ ಖಾಸಗಿ ಸ್ವತ್ತು. ಅರಮನೆ ಕಟ್ಟಿಸಿದ್ದು ಸರ್ಕಾರವಲ್ಲ. ಸರ್ಕಾರದ ಔದಾರ್ಯದಿಂದ ನಾವು ಅರಮನೆಯಲ್ಲಿ ವಾಸಿಸುತ್ತಿಲ್ಲ. ನ್ಯಾಯಾಲಯದ ನಿರ್ದೇಶನದಂತೆ ಇಲ್ಲಿದ್ದೇವೆ ಎಂದು ಸ್ಪಷ್ಟಪಡಿಸಿದರು. ಅರಮನೆ ನಿರ್ವಹಣೆಗಾಗಿ ರಚಿಸಿರುವ ಆಡಳಿತ ಮಂಡಳಿಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದ್ದು, ಪ್ರಕರಣ ಇನ್ನೂ ವಿಚಾರಣೆಯಲ್ಲಿದೆ ಎಂದರು.

ಇನ್ನು ಅಂಬಾರಿ ವಿಚಾರವಾಗಿ ಮಾತನಾಡಿದ ಅವರು, ಅಂಬಾರಿಗೆ ಬಾಡಿಗೆ ನೀಡುತ್ತಿಲ್ಲ. ಅಂಬಾರಿಯನ್ನು ಇಟ್ಟುಕೊಂಡು ಟಿಕೆಟ್ ಮಾರಾಟ ಮಾಡುತ್ತಾರೆ, ಪ್ರಚಾರ ಮಾಡುತ್ತಾರೆ ಮತ್ತು ಹಣ ಸಂಪಾದಿಸುತ್ತಾರೆ. ಅದಕ್ಕಾಗಿ ನೀಡುವ ಹಣವನ್ನು ಬಾಡಿಗೆ ಎನ್ನಲು ಸಾಧ್ಯವಿಲ್ಲ ಎಂದು ಹೇಳಿದರು. ಅಂಬಾರಿ ಮತ್ತು ಸಿಂಹಾಸನ ಎರಡೂ ತಮ್ಮ ಕುಟುಂಬದ ವಶದಲ್ಲಿದ್ದು, ಹಿಂದೆಯೂ ನಮ್ಮ ಬಳಿಯೇ ಇದ್ದವು. ಮುಂದೆಯೂ ನಮ್ಮ ವಶದಲ್ಲೇ ಇರುತ್ತವೆ ಎಂದು ತಿಳಿಸಿದರು.

ಅಂಬಾರಿಗೆ ಎಷ್ಟು ಗೌರವಧನ ನೀಡಲಾಗಿದೆ ಎಂಬುದನ್ನು ತಾವು ಬಹಿರಂಗಪಡಿಸುವುದಿಲ್ಲ. ಸರ್ಕಾರವೇ ಬೇಕಾದರೆ ಎಷ್ಟು ಹಣ ನೀಡಿದೆ ಎಂಬುದನ್ನು ಬಹಿರಂಗಪಡಿಸಲಿ ಎಂದರು. ಅಂಬಾರಿಯನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿರುವುದರಿಂದ ಹಣ ಕೇಳಲಾಗುತ್ತಿದೆ. ಸರ್ಕಾರಕ್ಕೆ ಬೇಕಿದ್ದರೆ ಹೊಸ ಅಂಬಾರಿ ಮಾಡಿಸಿಕೊಳ್ಳಬಹುದು. ಅದಕ್ಕೆ ತಮ್ಮ ಅಭ್ಯಂತರವಿಲ್ಲ. ಸರ್ಕಾರದ ಬಳಿ ಸಂಪನ್ಮೂಲವಿದ್ದರೂ ಹೊಸ ಅಂಬಾರಿ ಮಾಡಿಸಿಕೊಳ್ಳಲಿಲ್ಲ ಅಷ್ಟೇ ಎಂದು ಹೇಳಿದರು.

ಅಂಬಾರಿ ಹೊರುವ ಆನೆಯ ಬಗ್ಗೆ ತಿಳಿದುಕೊಳ್ಳುವ ಸಂಪೂರ್ಣ ಹಕ್ಕು ತನಗಿದೆ ಎಂದೂ ಪ್ರಮೋದಾ ದೇವಿ ಒಡೆಯರ್ ಪ್ರತಿಪಾದಿಸಿದರು. ಅಂಬಾರಿಯ ಮಾಲೀಕರಾಗಿ ಅದನ್ನು ಹೊರುವ ಆನೆ ಯಾವುದು ಎಂಬುದನ್ನು ತಿಳಿದುಕೊಳ್ಳುವುದು ತಮ್ಮ ಹಕ್ಕು. ಇದಕ್ಕೆ ಶಿಷ್ಟಾಚಾರದ ಪ್ರಶ್ನೆಯಿಲ್ಲ ಎಂಬುದು ತಮಗೂ ಗೊತ್ತಿದೆ. ಆದರೆ ಪರಸ್ಪರ ನಂಬಿಕೆ ಮತ್ತು ಸಹಕಾರದಿಂದ ಹಲವು ವಿಚಾರಗಳು ನಡೆಯುತ್ತವೆ. ಅಂಬಾರಿ ಹೊರುವ ಆನೆಯನ್ನು ಮೊದಲೇ ನಿರ್ಧರಿಸಬಹುದಿತ್ತು. ಕೇವಲ ಐದು ದಿನಗಳ ಮುಂಚಿತವಾಗಿ ತಿಳಿಸಿದರೆ ಅಂಬಾರಿಯನ್ನು ನೀಡುವಾಗ ತಮಗೆ ಹೇಗೆ ಭರವಸೆ ಮೂಡುತ್ತದೆ ಎಂದು ಪ್ರಶ್ನಿಸಿದರು.

ಇದೇ ವೇಳೆ, ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸುವುದಾಗಿ ಮುಖ್ಯಮಂತ್ರಿ ಹೇಳಿರುವುದಕ್ಕೆ ಧನ್ಯವಾದ ತಿಳಿಸಿದರು. ಈ ವಿಚಾರವನ್ನು ದೊಡ್ಡದು ಮಾಡಲು ಇಷ್ಟವಿಲ್ಲ ಎಂದ ಅವರು, ಪೊಲೀಸರ ಭದ್ರತಾ ವ್ಯವಸ್ಥೆಯ ಹೆಸರಿನಲ್ಲಿ ತೊಂದರೆಯಾಗಿದೆ ಎಂದು ಹೇಳಿದರು. ಜಟ್ಟಿ ಕಾಳಗ ನಡೆಸುವವರನ್ನು ಒಳಗೆ ಬಿಡದಿರುವುದರಿಂದ ಸಮಸ್ಯೆಯಾಯಿತು. ಆಯುಧ ಪೂಜೆ ಮತ್ತು ವಿಜಯಯಾತ್ರೆ ಸಂದರ್ಭದಲ್ಲೂ ಪ್ರತಿವರ್ಷ ತೊಂದರೆ ಎದುರಾಗುತ್ತಿದೆ ಎಂದು ತಿಳಿಸಿದರು.

ತಾವು ಎಲ್ಲಿಯೂ ರಾಜ್ಯ ಸರ್ಕಾರವನ್ನು ದೂಷಿಸಿಲ್ಲ. ಏಳು ದಿನ ನವರಾತ್ರಿ ಆಚರಿಸಿ ಎಂದು ಹೇಳಿಲ್ಲ. ಏಳು ದಿನಗಳಲ್ಲಿ ಅರ್ಧದಷ್ಟು ಕಾರ್ಯಕ್ರಮಗಳನ್ನು ಮುಗಿಸಿ, ನಂತರ ಮುಂದುವರಿಸಿ ಎಂದು ಸಲಹೆ ನೀಡಿದ್ದೇನೆ ಅಷ್ಟೇ. ಸರ್ಕಾರಕ್ಕೆ ಯಾವುದೇ ನಿರ್ದೇಶನ ನೀಡಿಲ್ಲ, ಪತ್ರವನ್ನೂ ಬರೆದಿಲ್ಲ. ಮಾಧ್ಯಮಗಳಿಗೆ ಪತ್ರ ಬರೆದು ಸಾರ್ವಜನಿಕರ ಸಹಕಾರ ಕೋರಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಮುಂದಿನ ದಸರಾವರೆಗೂ ಈ ಸಮಸ್ಯೆ ಮತ್ತು ಗೊಂದಲ ಮುಂದುವರಿಯಲು ಬಿಡುವುದಿಲ್ಲ ಎಂದ ಅವರು, ದಸರಾ ಪ್ರಾಧಿಕಾರ ರಚನೆಯಿಂದಲೇ ಎಲ್ಲ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ತಾವು ಹೇಳಿಲ್ಲ. ಈ ವಿಚಾರವನ್ನು ಇನ್ನು ಮುಂದೆ ಮುಂದುವರಿಸುವುದು ಬೇಡ ಎಂದು ತಿಳಿಸಿದರು.

ಕೊನೆಗೆ, ಅಂಬಾರಿಯ ತೂಕ ಎಷ್ಟು ಅಥವಾ ಅದರಲ್ಲಿ ಎಷ್ಟು ಚಿನ್ನವಿದೆ ಎಂಬುದನ್ನು ತಾವು ತೂಕ ಹಾಕಿಲ್ಲ. ಮುಂದೆಯೂ ತೂಕ ಹಾಕುವುದಿಲ್ಲ. ಈ ಬಗ್ಗೆ ಯಾರಿಗೆ ಏನು ಅನಿಸುತ್ತದೆಯೋ ಅದನ್ನು ಮಾತನಾಡಲಿ ಅಥವಾ ಬರೆದುಕೊಳ್ಳಲಿ. ಅದಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಪ್ರಮೋದಾ ದೇವಿ ಒಡೆಯರ್ ಹೇಳಿದರು.

Related Articles

Back to top button