Belagavi NewsBelgaum NewsKannada NewsKarnataka NewsLatest

*ಬೆಳಗಾವಿ : 22 ಪೊಲೀಸ್ ಪ್ರಶಿಕ್ಷಣಾರ್ಥಿಗಳು ಆಸ್ಪತ್ರೆಗೆ*

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ವಿಷಪೂರಿತ ಆಹಾರ ಸೇವಿಸಿದ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸ್ ತರಬೇತಿ ಶಾಲೆಯ 22 ಪ್ರಶಿಕ್ಷಣಾರ್ಥಿಗಳ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ರಾಜ್ಯದ ವಿವಿಧ ಜಿಲ್ಲೆಗಳಿಂದ 9 ತಿಂಗಳ ಬುನಾದಿ ತರಬೇತಿ ಪಡೆಯಲು ಪಟ್ಟಣದ ಕರ್ನಾಟಕ ರಾಜ್ಯ ಪೊಲೀಸ್ ತರಬೇತಿ ಶಾಲೆಗೆ ಆಗಮಿಸಿದ ಪ್ರಶಿಕ್ಷಣಾರ್ಥಿಗಳ ಪೈಕಿ ಭಾನುವಾರ ರಾತ್ರಿ ಆಹಾರ ಸೇವಿಸಿದ 22 ಪ್ರಶಿಕ್ಷಣಾರ್ಥಿಗಳಿಗೆ ವಾಂತಿ ಬೇಧಿ, ಜ್ವರ ಮತ್ತು ಸುಸ್ತು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಸೋಮವಾರ ಬೆಳಗ್ಗೆ ಪಟ್ಟಣದ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

Home add -Advt
ಖಾನಾಪುರ ಪಟ್ಟಣದ ತಾಲ್ಲೂಕು ಆಸ್ಪತ್ರೆಯಲ್ಲಿ ದಾಖಲಾಗಿರುವ ಪೊಲೀಸ್ ತರಬೇತಿ ಶಾಲೆಯ ಪ್ರಶಿಕ್ಷಣಾರ್ಥಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ 

ಭಾನುವಾರ ಸಂಜೆ ತರಬೇತಿ ಶಾಲೆಯ ಅಡುಗೆ ಮನೆಗೆ ರಜೆ ನೀಡಲಾಗಿತ್ತು. ಪ್ರಶಿಕ್ಷಣಾರ್ಥಿಗಳು ಪಟ್ಟಣದ ವಿವಿಧ ಹೋಟೆಲ್ ಗಳಿಗೆ ತೆರಳಿ ರಾತ್ರಿ ಊಟ ಮಾಡಿ ತರಬೇತಿ ಶಾಲೆಗೆ ಹಿಂದಿರುಗಿದ್ದರು. ಬಳಿಕ ರಾತ್ರಿಯಿಡೀ ಆರೋಗ್ಯ ಸಮಸ್ಯೆ ಅನುಭವಿಸಿದ್ದರಿಂದ ಸೋಮವಾರ ಮುಂಜಾನೆ ನಿತ್ರಾಣಗೊಂಡ 22 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅವರು ಭಾನುವಾರ ರಾತ್ರಿ ಸ್ವೀಕರಿಸಿದ ಆಹಾರದ ಬಗ್ಗೆ ತನಿಖೆ ನಡೆದಿದ್ದು, ವಿಷಪೂರಿತ ಆಹಾರ ನೀಡಿದವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ದೂರು ದಾಖಲಿಸಿಕೊಂಡಿರುವ ಖಾನಾಪುರ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ಲಭ್ಯವಾಗುತ್ತಲೇ ಶಾಸಕ ವಿಠ್ಠಲ ಹಲಗೇಕರ, ಕಾಂಗ್ರೆಸ್ ಮುಖಂಡ ಸುರೇಶ ಜಾಧವ, ಖಾನಾಪುರ ಠಾಣೆಯ ಇನ್ಸಪೆಕ್ಟರ್ ಲಾಲಸಾಬ ಗೌಂಡಿ, ಗಡಿನಾಡು ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ರಾಜು ಖಾತೇದಾರ ಮತ್ತಿತರರು ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿ ಪ್ರಶಿಕ್ಷಾರ್ಥಿಗಳ ಆರೋಗ್ಯ ವಿಚಾರಿಸಿದರು.

ಸಂಜೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ, ಸಂಗೀತ ನಿರ್ದೇಶಕ ಗುರುಕಿರಣ ಮೊದಲಾದವರು ಆಸ್ಪತ್ರೆಗೆ ಭೇಟಿ ನೀಡಿದ್ದರು.

‘ಸೋಮವಾರ ಮುಂಜಾನೆ ಆಸ್ಪತ್ರೆಗೆ ದಾಖಲಾದ ತರಬೇತಿ ಶಾಲೆಯ ಪ್ರಶಿಕ್ಷಣಾರ್ಥಿಗಳನ್ನು ಒಳರೋಗಿಗಳನ್ನಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ’ ಎಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ನಾರಾಯಣ ವಡ್ಡೀನ ಮಾಹಿತಿ ನೀಡಿದ್ದಾರೆ.

Related Articles

Back to top button