Latest

ವೈದ್ಯರ ನಿರ್ಲಕ್ಷ್ಯಕ್ಕೆ ತಾಯಿ ಹಾಗೂ ಅವಳಿ ಮಕ್ಕಳು ಬಲಿ

ಪ್ರಗತಿವಾಹಿನಿ ಸುದ್ದಿ; ತುಮಕೂರು: ಜಿಲ್ಲಾಸ್ಪತ್ರೆ ವೈದ್ಯರ ನಿರ್ಲಕ್ಷಕ್ಕೆ ಬಾಣಂತಿ ಹಾಗೂ ಅವಳಿ ಗಂಡು ಮಕ್ಕಳು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ತುಮಕೂರಿನಲ್ಲಿ ನಡೆದಿದೆ.

ಕಸ್ತೂರಿ (30) ಎಂಬ ಮಹಿಳೆ ತುಮಕೂರಿನ ಭಾರತಿನಗರದ ಆಂಜನೇಯ ದೇವಸ್ಥಾನದ ಬಳಿ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿ ಕೊನೆಯುಸಿಳೆದಿದ್ದಾರೆ. ಕೆಲ ಸಮಯದಲ್ಲೇ ಎರಡೂ ಕಂದಮ್ಮಗಳು ಸಾವನ್ನಪ್ಪಿವೆ. ಪ್ರಕರಣ ಸಂಬಂಧ ಜಿಲ್ಲಾಸ್ಪತ್ರೆ ವೈದ್ಯೆ ಹಾಗೂ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

ತುಮಕೂರಿನ ಭಾರತಿ ನಗರದಲ್ಲಿ ಗರ್ಭಿಣಿ ಕಸ್ತೂರಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ನಿನ್ನೆ ಸಂಜೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯರು ಆಟೋದಲ್ಲಿ ಮಹಿಳೆಯನ್ನು ತುಮಕೂರು ಜಿಲ್ಲಾಸ್ಪತ್ರೆಗೆ ಕರೆತಂದಿದ್ದರು. ಮಹಿಳೆ ಬಳಿ ತಾಯಿ ಕಾರ್ಡ್, ಆರ್ಧಾರ್ ಕಾರ್ಡ್ ಇಲ್ಲ ಎಂದು ಜಿಲ್ಲಾಸ್ಪತ್ರೆ ವೈದ್ಯರು ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ. ಮಹಿಳಾ ವೈದ್ಯರು ಕೂಡ ನಾವು ಚಿಕಿತ್ಸೆ ನೀಡಲ್ಲ. ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯುವಂತೆ ಹೇಳಿದ್ದಾರೆ.

ಮಹಿಳೆ ಅಷ್ಟು ದೂರ ಹೋಗಲು ತನ್ನ ಬಳಿ ಹಣವಿಲ್ಲ. ಅಲ್ಲದೇ ಹೆರಿಗೆ ನೋವು ಹೆಚ್ಚುತ್ತಿರುವುದರಿಂದ ಇಲ್ಲಿಯೇ ದಾಖಲಿಸಿಕೊಳ್ಳುವಂತೆ ಕಣ್ಣಿರಿಟ್ಟಿದ್ದಾಳೆ. ಆಕೆಯೊಂದಿಗೆ ಬಂದ ಸ್ಥಳೀಯರು ಕೂಡ ಹೆರಿಗೆ ನೋವು ಆರಂಭವಾಗಿರುವುದರಿಂದ ಮಹಿಳೆಯನ್ನು ದಾಖಲಿಸಿಕೊಳ್ಳವಂತೆ ಪರಿ ಪರಿಯಾಗಿ ಕೇಳಿದ್ದಾರೆ. ಹೆರಿಗೆ ನೋವಿನಿಂದ ಮಹಿಳೆ ನರಳುತ್ತಿದ್ದರೂ ಮಹಿಳಾ ವೈದ್ಯರ ಕಲ್ಲುಹೃದಯ ಕರಗಿಲ್ಲ. ದಾಖಲಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕಳುಹಿಸಿದ್ದಾರೆ.

ಮಹಿಳೆ ಕಸ್ತೂರಿ ಇಂದು ಬೆಳಿಗ್ಗೆ ಭಾರತಿ ನಗರದ ಆಂಜನೇಯ ದೇಗುಲ ಬಳಿ ಒಂದು ಗಂಡುಮಗುವಿಗೆ ಜನ್ಮ ನೀಡಿದ್ದಾರೆ. ಈ ವೇಳೆಯೇ ರಕ್ತಸ್ರಾವ ಹೆಚ್ಚಾಗಿದೆ. ಬಳಿಕ ಮಧ್ಯಾಹ್ನದ ವೇಳೆ ಮತ್ತೊಂದು ಗಂಡು ಮಗುವಿಗೆ ಜನ್ಮ ನೀಡಿ ಬಾಣಂತಿ ಸಾವನ್ನಪ್ಪಿದ್ದಾರೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೇ ಅವಳಿ ಮಕ್ಕಳು ಕೂಡ ಉಸಿರು ನಿಲ್ಲಿಸಿವೆ.

ತಾಯಿ ಹಾಗೂ ಅವಳಿ ಮಕ್ಕಳ ಸಾವಿಗೆ ತುಮಕೂರು ಜಿಲ್ಲಾಸ್ಪತ್ರೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಜಿಲ್ಲಾಸ್ಪತ್ರೆ ಬಳಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ಎನ್ ಇ ಪಿ ಎಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಜುನಾಥ್, ವೈದ್ಯರು ಹಾಗೂ ಸಿಬ್ಬಂದಿ ಕರ್ತವ್ಯಲೋಪವೆಸಗಿದ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ದಾಂಡೇಲಿಯಲ್ಲಿ ವ್ಯಕ್ತಿಯನ್ನು ಎಳೆದೊಯ್ದ ಮೊಸಳೆಗಳು

https://pragati.taskdun.com/%e0%b2%b0%e0%b2%be%e0%b2%9c%e0%b3%8d%e0%b2%af/crocodile-attacked-man-in-dandeli/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button