Kannada NewsKarnataka NewsLatest

ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ದಿನಕ್ಕೊಂದಲ್ಲ, ಕ್ಷಣಕ್ಕೊಂದು ತಿರುವು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಕ್ಷಣಕ್ಕೊಂದು ತಿರುವು ಸಿಗುತ್ತಿದೆ. ಯುವತಿ ವಿಡಿಯೋ ಬಿಡುಗಡೆಯ ನಂತರ ಇದೀಗ ಆಕೆಯ ಪಾಲಕರು ಬೆಳಗಾವಿಯಲ್ಲಿ ದೂರು ದಾಖಲಿಸಿದ್ದಲ್ಲದೆ, ಸೆಲ್ಫ್ ವಿಡೀಯೋ ಬಿಡುಗಡೆ ಮಾಡಿದ್ದಾರೆ.

ಇದಕ್ಕಿಂತ ಕುತೂಹಲದ ಸಂಗತಿ ಎಂದರೆ ಯುವತಿ ಬೆಳಗಾವಿಯವಳು ಎನ್ನುವುದು ಇದೀಗ ಬಹಿರಂಗವಾಗಿದೆ. ಯುವತಿ ವಿಜಯಪುರದವಳು ಎಂದು ಪೊಲೀಸರು ಅಲ್ಲಿಗೆ ನೋಟೀಸ್ ಕಳಿಸಿದ್ದರು. ಇದೀಗ ಆಕೆಯ ಪಾಲಕರು ಬೆಳಗಾವಿಯ ಹನುಮಾನ್ ನಗರದ ವಿಳಾಸ ನೀಡಿ ತಮ್ಮ ಮಗಳು ಕಿಡ್ನ್ಯಾಪ್ ಆಗಿದ್ದಾಳೆ ಎಂದು ದೂರು ಸಲ್ಲಿಸಿದ್ದಾರೆ.

ಸಿಡಿ ಪ್ರಕರಣ ಸಂಬಂಧ ರಮೇಶ ಜಾರಕಿಹೊಳಿ ದೂರು ನೀಡಿದ ನಂತರ ಯುವತಿ ರಮೇಶ ಜಾರಕಿಹೊಳಿ ವಿರುದ್ಧವೇ ಹೇಳಿಕೆ ನೀಡುವ ವಿಡೀಯೋ ಬಿಡುಗಡೆ ಮಾಡಿದ್ದಳು. ರಮೇಶ್ ಜಾರಕಿಹೊಳಿಯೇ ಸಿಡಿ ಬಿಡುಗಡೆ ಮಾಡಿದ್ದಾರೆ – ಸಂತ್ರಸ್ತೆ ಎನ್ನಲಾದ ಯುವತಿಯ ಹೇಳಿಕೆ

ಇದಾದ ನಂತರ ಯುವತಿ ಸಂಚುಕೋರರೊಂದಿಗೆ ಸೇರಿಕೊಂಡು ವಿಡೀಯೋ ಬಿಡುಗಡೆ ಮಾಡಿದ್ದಾಳೆ ಎಂದು ರಮೇಶ ಜಾರಕಿಹೊಳಿ ಹೇಳಿಕೆ ನೀಡಿದ್ದರು. ಸಂಚುಕೋರರೊಂದಿಗೆ ಸೇರಿ ಯುವತಿ ವಿಡೀಯೋ ಬಿಡುಗಡೆ -ರಮೇಶ ಜಾರಕಿಹೊಳಿ

ಇದೀಗ ಯುವತಿಯ ಪಾಲಕರು ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಾ.2ರಂದು ನಮ್ಮ ಮಗಳ ಅಪಹರಣವಾಗಿದೆ. ಅವಳಿಗೆ ಲೈಂಗಿಕ ಕಿರುಕುಳ ಮತ್ತು ಕೊಲೆ ಬೆದರಿಕೆ ಹಾಕಲಾಗಿದೆ ಎಂದೂ ದೂರಲಾಗಿದೆ.

ಮಾಧ್ಯಮಗಳಲ್ಲಿ ಮಗಳನ್ನು ಹೋಲಿಕೆಯಾಗುವ ರೀತಿಯ ವಿಡೀಯೋ ನೋಡಿ ನಾವು ಅವಳಿಗೆ ಫೋನ್ ಮಾಡಿದ್ದೆವು. ಆದರೆ ಅದು ನಕಲಿ ವಿಡೀಯೋ, ಅದರಲ್ಲಿರುವುದು ನಾನಲ್ಲ ಎಂದು ಆಕೆ ತಿಳಿಸಿದ್ದಳು. ನಂತರದಲ್ಲಿ ಅವಳು ಸರಿಯಾಗಿ ಮಾತನಾಡುತ್ತಿರಲಿಲ್ಲ. ಮನೆಗೆ ಬರುವ ಸ್ಥಿತಿಯಲ್ಲಿ ನಾನಿಲ್ಲ ಎಂದು ಹೇಳಿದ್ದಳು. ನಂತರದಲ್ಲಿ ನಮಗೆ ಸಂಪರ್ಕವೇ ಇಲ್ಲ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಇದೀಗ ಬೆಳಗಾವಿ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣ ಎಸ್ಐಟಿಗೆ ಹಸ್ತಾಂತರವಾಗುವ ಸಾಧ್ಯತೆ ಇದೆ.

ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಭಾರಿ ಟ್ವಿಸ್ಟ್ : ಬೆಳಗಾವಿಯಲ್ಲಿ ಯುವತಿಯ ತಂದೆ ಕಿಡ್ನ್ಯಾಪ್ ದೂರು

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button