*ಸರ್ಕಾರಿ ಹಾಸ್ಟೆಲ್‌ಗಳಿಗೆ ಪ್ರತ್ಯೇಕ ಆಹಾರ ಸುರಕ್ಷತಾ ಮಾರ್ಗಸೂಚಿ: ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ*

ರಾಜ್ಯದ ಸರ್ಕಾರಿ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಪೂರೈಸಲಾಗುವ ಆಹಾರದ ಗುಣಮಟ್ಟ ಮತ್ತು ನೈರ್ಮಲ್ಯದ ಕುರಿತು ದೂರುಗಳು ಬಂದಿರುವ ಬೆನ್ನಲ್ಲೇ, ರಾಜ್ಯ ಆರೋಗ್ಯ ಇಲಾಖೆ ಈಗ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
ವಿದ್ಯಾರ್ಥಿಗಳ ಉತ್ತಮ ಗುಣಮಟ್ಟದ ಆಹಾರ ನೀಡಬೇಕು ಎಂಬ ನಿಟ್ಟಿನಲ್ಲಿ ಶೀಘ್ರದಲ್ಲೇ ಸರ್ಕಾರಿ ಹಾಸ್ಟೆಲ್‌ಗಳಿಗಾಗಿಯೇ ಪ್ರತ್ಯೇಕ ‘ಆಹಾರ ಸುರಕ್ಷತಾ ಮಾರ್ಗಸೂಚಿ’ ಹೊರಡಿಸಲು ಸರ್ಕಾರ ಸಿದ್ಧತೆ ನಡೆಸಿದೆ.
ಕಳೆದ ಕೆಲವು ದಿನಗಳಿಂದ ಹಲವು ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಕಳಪೆ ಗುಣಮಟ್ಟದ ಆಹಾರ ಹಾಗೂ ಅಶುಚಿತ್ವದ ಬಗ್ಗೆ ಸಾರ್ವಜನಿಕವಾಗಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ದೂರುಗಳ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ (FSSAI) ಅಧಿಕಾರಿಗಳು ರಾಜ್ಯದ ಹಲವು ಹಾಸ್ಟೆಲ್‌ಗಳ ಮೇಲೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು.
ಈ ತಪಾಸಣೆ ವೇಳೆ ಅಡುಗೆ ಮನೆಗಳಲ್ಲಿ ನೈರ್ಮಲ್ಯದ ತೀವ್ರ ಕೊರತೆ, ಕಳಪೆ ಮಟ್ಟದ ಸಾಮಗ್ರಿಗಳ ಬಳಕೆ ಹಾಗೂ ಹಲವೆಡೆ ದಿನಾಂಕ ಮುಗಿದ (Expired) ಆಹಾರ ಪದಾರ್ಥಗಳನ್ನು ಬಳಸಿ ವಿದ್ಯಾರ್ಥಿಗಳಿಗೆ ಅಡುಗೆ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು. ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ಇಲಾಖೆ, ಈಗ ಹೊಸ ಕಟ್ಟುನಿಟ್ಟಿನ ನಿಯಮಾವಳಿ ರೂಪಿಸಲು ಮುಂದಾಗಿದೆ.
ಆಹಾರ ಸುರಕ್ಷತಾ ಮಾರ್ಗಸೂಚಿಯಲ್ಲಿ?
ಆಹಾರ ಧಾನ್ಯ ಸಂಗ್ರಹಣೆಗೆ ಮಿತಿ: ಹಾಸ್ಟೆಲ್‌ಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಪದಾರ್ಥಗಳನ್ನು ತಂದು ದಾಸ್ತಾನು ಮಾಡುವಂತಿಲ್ಲ. ಗರಿಷ್ಠ 3 ತಿಂಗಳ ಅವಧಿಗೆ ಬೇಕಾಗುವಷ್ಟು ಆಹಾರ ಸಾಮಗ್ರಿಗಳನ್ನು ಮಾತ್ರ ಖರೀದಿ ಮಾಡಲು ಅವಕಾಶವಿರುತ್ತದೆ.
ಅಡುಗೆ ಮನೆ ಸ್ವಚ್ಛತೆ ಕಡ್ಡಾಯ: ಆಹಾರ ತಯಾರಿಸುವ ಸ್ಥಳ, ತರಕಾರಿ ತೊಳೆಯುವ ಜಾಗ ಹಾಗೂ ಧಾನ್ಯ ಸಂಗ್ರಹಿಸುವ ಉಗ್ರಾಣಗಳಲ್ಲಿ ನೈರ್ಮಲ್ಯ ಕಾಪಾಡುವುದು ಕಡ್ಡಾಯ.
ಎಕ್ಸ್‌ಪೈರಿ ಪದಾರ್ಥಗಳಿಗೆ ಕಂಪ್ಲೀಟ್ ಬ್ರೇಕ್: ಅವಧಿ ಮೀರಿದ (Expired) ಯಾವುದೇ ಆಹಾರ ಪದಾರ್ಥಗಳನ್ನು ಬಳಸುವಂತಿಲ್ಲ. ನಿಯಮ ಮೀರಿ ಎಕ್ಸ್‌ಪೈರಿ ಸಾಮಗ್ರಿ ಬಳಸಿ ಅಡುಗೆ ಮಾಡಿದರೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.
ಪೌಷ್ಟಿಕಾಂಶ ಭರಿತ ಸಮತೋಲಿತ ಆಹಾರ: ವಿದ್ಯಾರ್ಥಿಗಳ ವಯಸ್ಸು ಮತ್ತು ಆರೋಗ್ಯದ ಅಗತ್ಯಗಳಿಗೆ ಅನುಗುಣವಾಗಿ ಸಮತೋಲಿತ (Nutritional balance) ಆಹಾರ ಮೆನು ಸಿದ್ಧಪಡಿಸಲು ಸ್ಪಷ್ಟ ನಿರ್ದೇಶನ ನೀಡಲಾಗುತ್ತದೆ.
ಹಾಸ್ಟೆಲ್‌ಗಳು, ಪಿಜಿಗಳು ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಆಹಾರದ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ನೈರ್ಮಲ್ಯ ಕಾಪಾಡದ ಮತ್ತು ಕಳಪೆ ಆಹಾರ ನೀಡುವ ಕೇಂದ್ರಗಳ ವಿರುದ್ಧ ದಾಳಿ ಮುಂದುವರಿಯಲಿದ್ದು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ ಖಾದರ್ ಎಚ್ಚರಿಕೆ ನೀಡಿದ್ದಾರೆ.



