Kannada NewsKarnataka NewsLatest

ಉಮೇಶ್ ಕತ್ತಿ ಈಗ ಬಹಿರಂಗ ಬಂಡಾಯ; ಮೋದಿ, ಯಡಿಯೂರಪ್ಪ ವಿರುದ್ಧ ಕಿಡಿ; ಪ್ರತ್ಯೇಕ ರಾಜ್ಯಕ್ಕೆ ಒತ್ತಾಯ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮಂತ್ರಿಸ್ಥಾನ ವಂಚಿತ ಹಿರಿಯ ಬಿಜೆಪಿ ನಾಯಕ ಉಮೇಶ ಕತ್ತಿ ಈಗ ಬಹಿರಂಗವಾಗಿ ಕಿಡಿಕಾರಿದ್ದಾರೆ. ನೀರು ಬಿಡುವ ಸಂಬಂಧ ಯಡಿಯೂರಪ್ಪ ಹೇಳಿಕೆಯನ್ನೇ ನೆಪವಾಗಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ನೇರವಾಗಿ ಆಕ್ರೋಶ ವ್ಯಕ್ತಪಡಿಸಿರುವ ಕತ್ತಿ, ನಮಗೆ ಪ್ರತ್ಯೇಕ ರಾಜ್ಯ ಕೊಟ್ಟುಬಿಡಿ ಎಂದಿದ್ದಾರೆ.

ರಾಜ್ಯದಲ್ಲಿ ಯಡಿಯೂರಪ್ಪ ಸರಕಾರದ ಅಸ್ತಿತ್ವಕ್ಕೆ ಬಂದು, ಮಂತ್ರಿಮಂಡಳ ರಚನೆಯಾದಾಗಿನಿಂದಲೂ ಒಳಗೊಳಗೆ ಕುದಿಯುತ್ತಿದ್ದ ಉಮೇಶ ಕತ್ತಿ ಈಗ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ರಾಜ್ಯದ ಬಿಜೆಪಿ ಸರಕಾರಕ್ಕೆ ನೇರವಾಗಿ ಎಚ್ಚರಿಕೆ ನೀಡಿದ್ದಾರೆ. ನಿಮಗೆ ಹೇಗೆ ಬುದ್ದಿಕಲಿಸಬೇಕೆಂದು ಜನರಿಗೆ ಗೊತ್ತಿದೆ ಎನ್ನುವ ದಾಟಿಯಲ್ಲಿ ಮಾತನಾಡಿದ್ದಾರೆ.

ಸಂಕೇಶ್ವರದ ಹೀರಾ ಶುಗರ್ಸ್ ಕಾರ್ಖಾನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉಮೇಶ ಕತ್ತಿ ಮಹಾರಾಷ್ಟ್ರದ 3 ಜಿಲ್ಲೆ ಹಾಗೂ ಕರ್ನಾಟಕದ 4 -5 ಜಿಲ್ಲೆ ಸೇರಿಸಿ ನಮಗೆ ಪ್ರತ್ಯೇಕ ರಾಜ್ಯ ಕೊಟ್ಟುಬಿಡಿ ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿ.ಎಸ್.ಯ ಡಿಯೂರಪ್ಪ ಇಬ್ಬರಿಗೂ ಎಚ್ಚರಿಕೆ ನೀಡಿರುವ ಅವರು, ಹಿಂದಿನ ಕಾಂಗ್ರೆಸ್ ಸರಕಾರದಂತೆ ಮಾಡಬೇಡಿ. ನೀರಾವರಿ ವಿಷಯದಲ್ಲಿ ಕರ್ನಾಟಕದ ಪರವಾಗಿ ಸರಿಯಾದ ನಿರ್ಣಯ ತೆಗೆದುಕೊಳ್ಳಿ ಎಂದು ಒತ್ತಾಯಿಸಿದರು.

ಪ್ರವಾಹ ಪರಿಹಾರ ವಿಷಯದಲ್ಲಿ, ಜನರಿಗೆ ಮನೆ ಕಟ್ಟಿಕೊಡುವ ವಿಷಯದಲ್ಲಿ ಸರಿಯಾದ ರೀತಿಯ ಕ್ರಮ ತೆಗೆದುಕೊಳ್ಳಬೇಕು.

ನನ್ನ ಹೋರಾಟ ಅಛಲ

  ಕೃಷ್ಣಾ ಬಚಾವೋ ಯೋಜನೆಯಲ್ಲಿ ೭೪೦ ಟಿ ಎಂ ಸಿ ನೀರಿನ ಸದ್ಭಳಕೆ ಆಗುತ್ತಿಲ್ಲ.ಅದಕ್ಕಾಗಿ ಜಗದೀಶ ಶೆಟ್ಟರ್ ಸರ್ಕಾರ ೧೭೦೦ ಕೋಟಿ ರೂಪಾಯಿ ಮೀಸಲಿಟ್ಟಿತ್ತು. ಕರ್ನಾಟಕದ ೪೨ ತಾಲೂಕುಗಳಿಗೆ ಮಹದಾಯಿ ನೀರು ವರದಾನವಾಗಬೇಕಿದೆ. ಮಹದಾಯಿ ನದಿಯಲ್ಲಿ ನಮಗೆ ಬಂದಿರುವ ೪೦ ಟಿ ಎಂ ಸಿ ನೀರು ಸದ್ಭಳಕೆ ಆಗಬೇಕಿದೆ ಎಂದು ಅವರು ಹೇಳಿದರು.
ಚುನಾವಣೆಗೆ ಬಂದಾಗ ಮಹಾರಾಷ್ಟ್ರಕ್ಕೆ ನೀರು ಬಿಡುತ್ತೇವೆ ಎಂದು ಹೇಳುವುದು ತುಂಬಾ ಹಗುರವಾದ ಮಾತು. ನಮಗೆ ಅವರು ನೀರು ಬಿಡಿ ಎಂದು ಹೇಳಿದರೆ ನೀರು ಬಿಟ್ಟಿಲ್ಲ. ಅದು ಎರಡು ರಾಜ್ಯದವರು ಕುಳಿತು ಮಾತನಾಡಿದಾಗ ಮಾತ್ರ ಸಾಧ್ಯ ಎಂದು ಯಡಿಯೂರಪ್ಪಗೆ ಟಾಂಗ್ ನೀಡಿದರು.
ಮಹದಾಯಿ ಯೋಜನೆ ಅಲಾಟಮೆಂಟ್ ಆಗಿ ೭ ವರ್ಷವಾದರೂ ಸಹ ಕೆಲಸ ಮಾಡಲು ಆಗಿಲ್ಲ.
ಕೆಲಸ ಮಾಡದೆ ಮಹಾರಾಷ್ಟ್ರಕ್ಕೆ ನೀರು ಕೊಡುತ್ತೇವೆ ಎಂಬ ಸಿ ಎಂ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ನಮ್ಮ ಭಾಗಕ್ಕೆ ಸರಿಯಾಗಿ ನೀರು ಕೊಡದೇ ಇದ್ದರೆ ನಮಗೆ ಪ್ರತ್ಯೇಕ ರಾಜ್ಯವನ್ನು ನೀಡಲಿ. ಈ ಭಾಗಕ್ಕೆ ಅನ್ಯಾಯವಾಗಿದೆ. ನಾನು ಸಾಯೋವರೆಗೂ ಸಹ  ನನ್ನ ಹೋರಾಟ ಅಛಲ.
ಕೊಲ್ಹಾಪುರ, ಸಾಂಗ್ಲಿ,ಕರಾಡ, ಸೋಲ್ಹಾಪುರ ಉತ್ತರ ಕರ್ನಾಟಕ ಜಿಲ್ಲೆಗಳನ್ನು ಸೇರಿಸಿ ಪ್ರತ್ಯೇಕ ರಾಜ್ಯ ಮಾಡಬೇಕು ಎಂದು ಆಗ್ರಹಿಸಿದರು.

ಅಖಂಡ ಕರ್ನಾಟಕಕ್ಕೆ ಸಿಎಂ ಆಗುತ್ತೇನೆ

ನಮಗೆ ಮೊದಲು ನೀರು ಕೊಡಿ. ಓಟ ಗಿಟ್ಟಿಸಿಕೊಳ್ಳಲು ಎನೇನೋ ಮಾತನಾಡುವುದು ಸರಿಯಲ್ಲ.
ಅದು ಚುನಾವಣೆಯಲ್ಲಿ ಓಟು ಗಿಟ್ಟಿಸಿಕೊಳ್ಳಲು ಮಾಡಿದ ಭಾಷಣವಷ್ಟೆ. ಸುವರ್ಣ ಸೌಧ ಕಟ್ಟಿದ್ದಾರೆ ಆದರೆ ಅಲ್ಲಿ ಅಧಿವೇಶನವನ್ನೆ ನಡೆಸುತ್ತಿಲ್ಲ. ೪೦೦ ಕೋಟಿ ರೂಪಾಯಿ ಖರ್ಚು ಮಾಡಿ ಸುವರ್ಣ ಸೌಧ ನಿರ್ಮಾಣ ಮಾಡಿದ್ದಾರೆ. ಆದರೆ ಅದೂ ಸಹ ಬಳಕೆ ಆಗುತ್ತಿಲ್ಲ. ಡಿ ಸಿ ಎಂ ಹುದ್ದೆ ನಾಮ್ಕೆ ವಾಸ್ತೆ ಅಷ್ಟೆ. ನಾನು ಆದರೆ ಅಖಂಡ ಕರ್ನಾಟಕದ ಮುಖ್ಯಂಮತ್ರಿಯಾಗುತ್ತೇನೆ ಎಂದೂ ಉಮೇಶ ಕತ್ತಿ ಹೇಳಿದರು.

ಕತ್ತಿಗೆ ಕಾಗೆಯೂ ಬೆಂಬಲ 

ಚಿಕ್ಕೋಡಿ ಪಟ್ಟಣದಲ್ಲಿ ಮಾದ್ಯಮಗಳಿಗೆ ಹೇಳಿಕೆ ನೀಡಿದ ಮಾಜಿ ಶಾಸಕ ರಾಜು ಕಾಗೆ, ನಾನೂ ಮುಖ್ಯಮಂತ್ರಿ ಆಕಾಂಕ್ಷಿ, ನನಗೂ ಮುಖ್ಯಮಂತ್ರಿ ಆಗೊ ಆಸೆಯಿದೆ ಎಂದರು.
ಡಿಸಿಎಂ ಬೇಡ, ನಿಗಮ ಮಂಡಳಿಯೂ ಬೇಡ, ಮುಖ್ಯಮಂತ್ರಿ ಸ್ಥಾನ ಕೊಟ್ರೆ ಸಮಾಧಾನ,. ಇಲ್ಲಾಂದ್ರೆ ಸಾಮನ್ಯ ಕಾರ್ಯಕರ್ತನಂತೆ ಇರುತ್ತೇನೆ ಎಂದು ಅವರು ಹೇಳಿದರು.
 ಉಮೇಶ ಕತ್ತಿಯವರ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕೂಗಿಗೆ ರಾಜು ಕಾಗೆ ಬೆಂಬಲ ಸೂಚಿಸಿದರು.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಲೇಬೇಕು, ಎಲ್ಲ ಜನರ ಆಸೆ ಇದು. ಕೇವಲ ಕತ್ತಿ  ಹಾಗೂ ಕಾಗೆ ಅಷ್ಟೆ ಅಲ್ಲ, ಎಲ್ಲ ಜನರಿಗೆ ಒಳ್ಳೆಯದಾಗುತ್ತೆ. ತೆಲಂಗಾಣ, ಚತ್ತಿಸಗಡದಲ್ಲಿ ಪ್ರತ್ಯೇಕ ರಾಜ್ಯಗಳಾಗಿವೆ, ನಮ್ಮಲ್ಲಿ ಏಕೆ ಬೇಡ ಎಂದು ಪ್ರಶ್ನಿಸಿದರು.
 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button