
ಪ್ರಗತಿವಾಹಿನಿ ಸುದ್ದಿ: ತನ್ನ ಅವಳಿ ಮಕ್ಕಳನ್ನು ತಂದೆಯೇ ಬರ್ಬರವಾಗಿ ಹತ್ಯೆ ಮಾಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ಉತ್ತರ ಪ್ರದೇಶದ ಕಾನ್ಪುರದಲ್ಲಿ ಈ ಘಟನೆ ನಡೆದಿದ್ದು, 48 ವರ್ಷದ ಮೆಡಿಕಲ್ ರೆಪ್ ಶಶಿ ರಂಜನ್ ಮಿಶ್ರಾ ತನ್ನ 11 ವರ್ಷದ ಇಬ್ಬರು ಹೆಣ್ಣುಮಕ್ಕಳನ್ನು ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಕೃತ್ಯದ ಬಳಿಕ ಪೊಲೀಸರಿಗೆ ಕರೆ ಮಾಡಿ ಮಕ್ಕಳಿಬರನ್ನು ತಾನು ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ. ಬಿಹಾರ ಮೂಲದ ನಿವಾಸಿ ಶಶಿ ರಂಜನ್ ತನ್ನ ಪತ್ನಿ ರೇಷ್ಮಾ, ಅವಳಿ ಹೆಣ್ಣುಮಕ್ಕಳಾದ ರಿದ್ಧಿ ಮತ್ತು ಸಿದ್ಧಿ ಮತ್ತು ಆರು ವರ್ಷದ ಮಗನೊಂದಿಗೆ ವಾಸಿಸುತ್ತಿದ್ದ. ಪತ್ನಿಗೆ ಅನೈತಿಕ ಸಂಬಂಧವಿದೆ ಎಂದು ಶಶಿ ರಂಜನ್ ಮಿಶ್ರಾ ಅನುಮಾನಿಸಿದ್ದ. ಆಕೆ ತನ್ನ ಮಗನೊಂದಿಗೆ ವಾಸಿಸಬೇಕು ಮತ್ತು ಹೆಣ್ಣುಮಕ್ಕಳನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಪದೇ ಪದೇ ಜಗಳವಾಡುತ್ತಿದ್ದ.
ಪತ್ನಿ ರೇಷ್ಮಾ ಹೇಳುವ ಪ್ರಕಾರ, ನನ್ನ ಪತಿ ಖಿನ್ನತೆಯಿಂದ ಬಳಲುತ್ತಿದ್ದಾನೆ, ಮನೆಯೊಳಗೆ ಹಲವಾರು ಸಿಸಿಟಿವಿ ಕ್ಯಾಮೆರಾಗಳನ್ನು ಹಾಕಿದ್ದಾನೆ. ಅಲ್ಲದೇ ನನ್ನನ್ನು ಹೆಣ್ಣುಮಕ್ಕಳಿದ್ದ ಕೋಣೆಗೆ ಹೋಗಲು ಬಿಡುತ್ತಿರಲಿಲ್ಲ ಎಂದು ಪತ್ನಿ ರೇಷ್ಮಾ ಆರೋಪಿಸಿದ್ದಾರೆ. ಶನಿವಾರ ರಾತ್ರಿ ಊಟ ಮಾಡಿದ ನಂತರ, ಪತಿ ಹೆಣ್ಣುಮಕ್ಕಳನ್ನು ಮಲಗಿಸಲು ಕರೆದೊಯ್ದಿದ್ದಾನೆ. ತಡರಾತ್ರಿ 2:30ರ ಸುಮಾರಿಗೆ ಒಬ್ಬ ಮಗಳನ್ನು ಶೌಚಾಲಯಕ್ಕೆ ಕರೆದೊಯ್ದ ನಂತರ ಇಬ್ಬರೂ ಕೋಣೆಗೆ ಹಿಂತಿರುಗಿದ್ದಾರೆ. ಬಳಿಕ ಲೈಟ್ ಆಫ್ ಮಾಡಲಾಯಿತು. ಇದಾಗಿ ಎರಡು ಗಂಟೆಗಳ ನಂತರ, ಶಶಿ ರಂಜನ್ ಪೊಲೀಸರಿಗೆ ಕರೆ ಮಾಡಿ ಮಕ್ಕಳನ್ನು ಕೊಲೆ ಮಾಡಿರುವುದಾಗಿ ವಿಷಯ ತಿಳಿಸಿದ್ದಾನೆ. ಕೂಡಲೇ ಪೊಲೀಸರು ಸ್ಥಳಕ್ಕೆ ಬಂದು ನೋಡಿದಾಗ ಇಬ್ಬರು ಹೆಣ್ಣಮಕ್ಕಳು ಕತ್ತು ಸೀಳಿ ರಕ್ತದ ಮಡುವಿನಲ್ಲಿ ಹೆಣವಾಗಿ ಬಿದ್ದಿದ್ದರು ಎಂದು ತಿಳಿಸಿದ್ದಾರೆ.
ಸದ್ಯ ಆರೋಪಿ ತಂದೆಯನ್ನು ಬಂಧಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.



