*ಬೆಳಗಾವಿ ಪಾಲಿಕೆ ಸಭೆಯಲ್ಲಿ ವಂದೇ ಮಾತರಂ ವಿವಾದ: ಮೇಯರ್ ಪುಲ್ ಗರಂ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ಆರಂಭದಲ್ಲೇ ವಂದೇ ಮಾತರಂ ವಿಚಾರವಾಗಿ ಗದ್ದಲಕ್ಕೆ ಸಾಕ್ಷಿಯಾಯಿತು.
ಸಭೆಯ ಆರಂಭದಲ್ಲಿ ನಾಡಗೀತೆ ಪ್ರಸಾರಗೊಂಡ ಬಳಿಕ ವಂದೇ ಮಾತರಂ ಹಾಡಿಸಲಾಯಿತು. ರಾಜ್ಯ ಸರ್ಕಾರದ ಸೂಚನೆಯಂತೆ ಎರಡು ಚರಣಗಳನ್ನು ಮಾತ್ರ ಪ್ಲೇ ಮಾಡಲಾಗಿದ್ದು, ಬಳಿಕ ಬಿಜೆಪಿ ಸದಸ್ಯರು ವಂದೇ ಮಾತರಂನ ಉಳಿದ ಭಾಗವನ್ನು ಸಾಮೂಹಿಕವಾಗಿ ಹಾಡಿದರು.
ಇದಕ್ಕೆ ವಿಪಕ್ಷ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸಭಾಂಗಣದಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ವಾಗ್ವಾದ ನಡೆಯಿತು.
ಘಟನೆಯಿಂದ ಗರಂ ಆದ ಮೇಯರ್ ಪ್ರೀತಿ ಕಾಮಕಾರ, ವಂದೇ ಮಾತರಂನ ಎರಡು ಚರಣಗಳನ್ನು ಮಾತ್ರ ಪ್ಲೇ ಮಾಡಿದ್ದ ಆಪರೇಟರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಅವರನ್ನು ಕೆಲಸದಿಂದ ತೆಗೆದುಹಾಕುವಂತೆ ಸೂಚಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಉಪ ಮೇಯರ್ ಹನುಮಂತ ಕೊಂಗಾಳಿ, ವಂದೇ ಮಾತರಂ ಪೂರ್ಣವಾಗಿ ಹಾಡಿಸುವಂತೆ ಶ್ರೇಯಸ್ ನಾಯಕ ಅವರು ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿದ್ದರು. ಆದರೆ ಸರ್ಕಾರದ ಆದೇಶದಂತೆ ಎರಡು ಚರಣಗಳನ್ನು ಮಾತ್ರ ಪ್ಲೇ ಮಾಡುವುದಾಗಿ ಆಯುಕ್ತರು ಲಿಖಿತವಾಗಿ ಉತ್ತರಿಸಿದ್ದರು ಎಂದು ಸ್ಪಷ್ಟಪಡಿಸಿದರು.
ಹೀಗಾಗಿ ಸರ್ಕಾರದ ಆದೇಶದಂತೆ ಎರಡು ಚರಣಗಳನ್ನು ಪ್ಲೇ ಮಾಡಲಾಗಿದ್ದು, ಬಳಿಕ ಪಾಲಿಕೆ ಸದಸ್ಯರು ವಂದೇ ಮಾತರಂನ ಉಳಿದ ಚರಣಗಳನ್ನು ಹಾಡಿದ್ದಾರೆ ಎಂದು ಉಪ ಮೇಯರ್ ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




