5 ಕೋಟಿ ರೂ. ವೆಚ್ಚದಲ್ಲಿ ಕಂಗ್ರಾಳಿ ಖುರ್ದ್ ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ – ಲಕ್ಷ್ಮೀ ಹೆಬ್ಬಾಳಕರ್ ಭರವಸೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕುಸ್ತಿ ಆಖಾಡ ಸೇರಿದಂತೆ ಕಂಗ್ರಾಳಿ ಕೆಎಚ್ ಗ್ರಾಮದಲ್ಲಿ 5 ಕೋಟಿ ರೂ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭರವಸೆ ನೀಡಿದ್ದಾರೆ.
ಕಂಗ್ರಾಳಿ ಕೆ ಎಚ್ ಗ್ರಾಮದ ಜ್ಯೋತಿ ನಗರದ ಜನಲೋಕ ಸೇವಾ ಸಂಘಟನೆ ಹಾಗೂ ಜನಲೋಕ ಸೇವಾ ಸೊಸೈಟಿಯ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಸತ್ಕಾರ ಸಮಾರಂಭದಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ನಾನು ರಾಜ್ಯದ ಸಚಿವೆಯಾಗಿ ಎಲ್ಲೇ ಇದ್ದರೂ ನನ್ನ ಗ್ರಾಮೀಣ ಕ್ಷೇತ್ರದ ಕೆಲಸ ನಿಲ್ಲುವುದಿಲ್ಲ. ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ನಿರಂತರವಾಗಿ ನಡೆಯಲಿವೆ. ಕ್ಷೇತ್ರವನ್ನು ರಾಜ್ಯದಲ್ಲೇ ನಂಬರ್ 1 ಮಾಡಬೇಕೆನ್ನುವ ನನ್ನ ಉದ್ದೇಶವನ್ನು ಈಡೇರಿಸುವೆ. ಸ್ಮಾರ್ಟ್ ಸಿಟಿ ರೀತಿಯಲ್ಲಿ ರಸ್ತೆ, ಚರಂಡಿ ಮತ್ತಿತರ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಸಲಾಗುವುದು ಎಂದು ಅವರು ತಿಳಿಸಿದರು.
ಚುನಾವಣೆಗೆ ಮೊದಲು ರಾಜಕೀಯ ಏನೇ ಇರಲಿ. ಈಗ ಎಲ್ಲರೂ ಒಂದೇ. ನಾನು ನಿಮ್ಮೆಲ್ಲರ ಲಕ್ಷ್ಮೀ ಹೆಬ್ಬಾಳಕರ್. ಎಲ್ಲರೂ ಸೇರಿ ಗ್ರಾಮದ ಅಭಿವೃದ್ಧಿ ಮಾಡೋಣ. ಆದಷ್ಟು ಬೇಗ ಹಣ ಬಿಡುಗಡೆ ಮಾಡಿಸಿ ಫೂಜೆ ಕೈಗೊಳ್ಳಲಾಗುವುದು ಎಂದು ಹೆಬ್ಬಾಳಕರ್ ಭರವಸೆ ನೀಡಿದರು.
ನಾನು ಈ ಕ್ಷೇತ್ರದ ಮನೆ ಮಗಳಾಗಿ ಈಗ ರಾಜ್ಯದ ಮಂತ್ರಿಯಾಗಿದ್ದೇನೆ. ಚುನಾವಣೆಗೆ ಮುನ್ನ ಬಹಳಷ್ಟು ಜನರು ನಾನಾ ರೀತಿಯಲ್ಲಿ ಮಾತನಾಡಿದ್ದರು. ಆರೋಪಗಳನ್ನು ಮಾಡಿದ್ದರು. ಅದಕ್ಕೆಲ್ಲ ನಾನು ಉತ್ತರ ಕೊಟ್ಟಿಲ್ಲ, ಬದಲಾಗಿ ನೀವೇ ಮತ ನೀಡುವ ಮೂಲಕ ಉತ್ತರ ಕೊಟ್ಟಿದ್ದೀರಿ. ನನ್ನ ಯೋಗಾ ಯೋಗ ಕಾಂಗ್ರೆಸ್ ಪಕ್ಷ, ಸರಕಾರ, ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಹಳ್ಳಿಯಿಂದ ಬಂದ ನನಗೆ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ನನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲು ನಿಮ್ಮೆಲ್ಲರ ಸಹಕಾರ ಅಗತ್ಯ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಮಾಳಗಿ, ಉಪಾಧ್ಯಕ್ಷ ಕಲ್ಲಪ್ಪ ಪಾಟೀಲ, ಯುವರಾಜ ಕದಂ, ಸತೀಶ್ ಬಾಂದವಾಡ್ಕರ್, ಟಿ. ಡಿ. ಪಾಟೀಲ, ವಿನೋದ ಮಚ್ಚೆ, ಗಂಗಾರಾಮ ಕಂಗ್ರಾಳ್ಕರ್, ಕೆಂಪಣ್ಣ ಸನದಿ, ಮೋಹನ್ ಕಾಂಬಳೆ, ವಿನಾಯಕ ರಾಜಗೋಳ್ಕರ್, ಶಿಂಧೆ ಮುಂತಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ