*ವಿವಿಧ ಯೋಜನೆ ಅಡಿ ಪ್ರೋತ್ಸಾಹ ಧನ ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್*
ಪ್ರಗತಿವಾಹಿನಿ ಸುದ್ದಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ವಿವಾಹ ಪ್ರೋತ್ಸಾಹ ಧನ ಯೋಜನೆಯಡಿ ವಿಕಲಚೇತನ ಯುವಕ ಅಥವಾ ಯುವತಿಯನ್ನು ವಿವಾಹವಾದ ವ್ಯಕ್ತಿಗೆ ನೀಡಲಾಗುವ ಪ್ರೋತ್ಸಾಹಧನವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬುಧವಾರ ಬೆಳಗಾವಿಯ ತಮ್ಮ ಗೃಹ ಕಚೇರಿಯಲ್ಲಿ ವಿತರಿಸಿದರು.
ವಿಕಲಚೇತನ ಯುವಕ ಅಥವಾ ಯುವತಿಯನ್ನು ವಿವಾಹವಾದ ಸಾಮಾನ್ಯ ವ್ಯಕ್ತಿಗೆ 50 ಸಾವಿರ ರೂ.ಗಳ ಪ್ರೋತ್ಸಾಹ ಧನ ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ 2023-24 ನೇ ಸಾಲಿನಲ್ಲಿ ಬೆಳಗಾವಿ ಜಿಲ್ಲೆಯ ಮೂರು ಜನ ಫಲಾನುಭವಿಗಳಿಗೆ ತಲಾ 50 ಸಾವಿರ ವಿವಾಹ ಪ್ರೋತ್ಸಾಹ ಧನದ ಆದೇಶ ಪತ್ರಗಳನ್ನು ವಿತರಿಸಲಾಯಿತು. ಪ್ರೋತ್ಸಾಹ ಧನವನ್ನು ಫಲಾನುಭವಿಗಳ ಜಂಟಿ ಬ್ಯಾಂಕ್ ಖಾತೆಯಲ್ಲಿ 5 ವರ್ಷಗಳ ಅವಧಿಯವರೆಗೆ ಭದ್ರತಾ ಠೇವಣಿ ಮಾಡಲಾಗುತ್ತದೆ.
ಇದೇ ಸಮಯದಲ್ಲಿ, ಅಂಗವಿಕಲತೆ ನಿವಾರಣಾ ಶಸ್ತ್ರ ಚಿಕಿತ್ಸೆಗಾಗಿ ಪರಿಹಾರ ಧನ ಯೋಜನೆಯಡಿ ಕುಮಾರಿ ಪ್ರೇಮಾ ಮಹಾಂತೇಶ ಗೌಳಿ ಇವಳ ಶಸ್ತ್ರ ಚಿಕಿತ್ಸೆಗಾಗಿ 1 ಲಕ್ಷ ರೂ. ಗಳನ್ನು ಮಂಜೂರು ಮಾಡಿ ಕೆ.ಎಲ್.ಇ ಆಸ್ಪತ್ರೆಗೆ ಸಂದಾಯ ಮಾಡಿದ ಆದೇಶ ಪತ್ರವನ್ನು ನೀಡಲಾಯಿತು.
ಬಳಿಕ ಹೊಲಿಗೆ ಯಂತ್ರದ ಯೋಜನೆಯಡಿ ಆಯ್ಕೆಯಾದ ಮುತಗಾ ಗ್ರಾಮದ ಪ್ರಜ್ಞಾ ಎಸ್.ಕೆ ಇವರಿಗೆ ಹೊಲಿಗೆ ಯಂತ್ರವನ್ನು ವಿತರಿಸಲಾಯಿತು.
ಈ ಸಮಯದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಬಸವರಾಜ ಎ.ಎಂ, ಜಿಲ್ಲಾ ವಿಕಲ ಚೇತನರ ಕಲ್ಯಾಣಾಧಿಕಾರಿ ನಾಮದೇವ್ ಬಿಳಕಿ ಹಾಗೂ ಗ್ರಾಮೀಣ ಪುನರ್ವಸತಿಯ ಸದಸ್ಯರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ