*VB G RAM G ಕಾಯ್ದೆಯನ್ನ ವಿರೋಧಿಸಿ MGNREGA ಕಾರ್ಮಿಕರ ಬೃಹತ್ ಪ್ರತಿಭಟನಾ ಮೆರವಣಿಗೆ*

ಪ್ರಗತಿವಾಹಿನಿ ಸುದ್ದಿ: ವಿಬಿ-ಜಿ ರಾಮ್‌ಜಿ ಕಾಯಿದೆಯನ್ನು ಕೂಡಲೇ ಹಿಂತೆಗೆದುಕೊಳ್ಲುವಮ್ತೆ ಆಗ್ರಹಿಸಿ ಬೆಳಗಾವಿಯಲ್ಲಿ ಕೂಲಿ ಕಾರ್ಮಿಕರು ಪ್ರತಿಭಟನಾ ಮೆರವಣಿಗೆ ನಡೆಸಿದರು.
ಇಂದು ಬೆಳಗಾವಿ ನಗರದಲ್ಲಿ ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯೂನಿಸ್ಟ್ ಪಕ್ಷ, ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆ ವತಿಯಿಂದ ಕೇಂದ್ರ ಸರ್ಕಾರದ ವಿಬಿ- ಜಿ ರಾಮ್ ಜಿ ಕಾಯ್ದೆಯನ್ನು ವಾಪಸ್ ತೆಗೆದುಕೊಳ್ಳಬೇಕೆಂದು ಬೃಹತ್ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಳ್ಳಲಾಯಿತು.
ಅಂಬೇಡ್ಕರ ಗಾರ್ಡನ್ ನಲ್ಲಿ ನೂರರು ರೈತ ಕೃಷಿ ಕಾರ್ಮಿಕರು ಜಮಾವಣೆಗೊಂಡು ರ್ಯಾಲಿ ಮುಖಾಂತರ ಡಿಸಿ ಕಚೇರಿಗೆ ಧಾವಿಸಿ, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಅಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಯವರಿಗೆ ಮನವಿಯನ್ನ ಸಲ್ಲಿಸಿದರು.

ಪ್ರತಿಭಟನಾ ಸಭೆಯನ್ನ ಉದ್ದೇಶಿಸಿ ಕಮ್ಯುನಿಸ್ಟ್ ಪಕ್ಷದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಕಾಂಬ್ರೇಡ್ ರಾಮಾಂಜನಪ್ಪ ಆಲ್ದಲ್ಲಿ ಮಾತನಾಡಿ ನರೇಗಾ ಕಾಯ್ದೆಯು ಹಸಿವಿನಿಂದ ಸಾಯುವ, ಗುಳೆ ಹೋಗುವಿಕೆ ತಡೆಗಟ್ಟಲು, ಉದ್ಯೋಗದ ಹಕ್ಕಿಗಾಗಿ ನಡೆದ ದುಡಿಯುವ ಜನಗಳ ಹೋರಾಟದ ಫಲವಾಗಿ ಜಾರಿ ಬಂದಿತು. ಇಂದು ಕೇಂದ್ರ ಸರ್ಕಾರ ಸಂಸತ್ತಿನ್ನಲ್ಲಿ ಸೂಕ್ತ ಚರ್ಚೆ ಇಲ್ಲದೆ ನರೇಗಾ ಕಾಯ್ದೆಯನ್ನು ತಿದ್ದುಪಡಿ ಮಾಡಿ ಇನ್ನೊಂದು ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ತಂದು ಉದ್ಯೋಗದ ಹಕ್ಕನ್ನು ಮೊಟಕುಗೊಳಿಸಿದೆ. ಜನ ಕಲ್ಯಾಣ ಯೋಜನೆಗಳನ್ನು ಸರಿಸಿ, ಅದಕ್ಕೆ ಮೀಸಲಿಡುವ ಹಣವನ್ನು ಕಡಿತಗೊಳಿಸುತ್ತಿದ್ದಾರೆ. ಹಾಗಾಗಿ ಈ ಕಾಯಿದೆಯನ್ನು ವಾಪಸ್ ಆಗುವರೆಗೂ ಕೂಲಿ ಕಾರ್ಮಿಕರು ನಿರಂತರ ಸಂಘಟಿತ ಹೋರಾಟ ಮುಂದುವರೆಸಬೇಕೆಂದು ಕರೆ ನೀಡಿದರು.
ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆ ರಾಜ್ಯ ನಾಯಕರಾದ ಲಕ್ಷ್ಮಣ ಜಡಗಣ್ಣವರ್ ಮಾತನಾಡಿ, “ಸರ್ಕಾರಿ ಕೆಲಸವನ್ನು ಹಕ್ಕಿನಿಂದ ಪಡೆಯುವ ಆಯ್ಕೆಯಿದ್ದ ನರೇಗಾ ಕಾಯ್ದೆಯನ್ನು ರದ್ದು ಮಾಡಿ ಹೊಸ ಕಾಯ್ದೆಯನ್ನು ಏಕಾಏಕಿ ತಂದಿರುವುದು ಬಡವರ ಸ್ವಾಭಿಮಾನಕ್ಕೆ ಹಾಕಿದ ಕೊಡಲಿ ಪೆಟ್ಟಾಗಿದೆ. ಈ ಹೊಸ ಕಾಯ್ದೆಯಲ್ಲಿ ಅನೇಕ ತೊಡಕುಗಳಿವೆ. ಕೇಂದ್ರ ಸರ್ಕಾರ ತನ್ನ ಪಾಲನ್ನು ಶೇ ೯೦ ರಿಂದ ಶೇ ೬೦ ಕ್ಕೆ ಇಳಿಸಿ ರಾಜ್ಯ ಸರ್ಕಾರದ ಮೇಲೇ ಶೇ ೪೦ ರಷ್ಟು ಹೊರೆ ಹಾಕಿರಿರುವುದು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ. ಕಾರಣ ಈ ಕಾಯ್ದೆಯನ್ನು ನಾವು ಖಡಾಖಂಡಿತವಾಗಿ ವಿರೋಧಿಸುತ್ತೇವೆ. ನರೇಗಾ ಕಾಯಿದೆಯನ್ನು ಹೆಚ್ಚು ಜನಸ್ನೇಹಿಯಾಗಿ ರೂಪಿಸಿ, ಮಾನವ ದಿನಗಳನ್ನು ೨೦೦ ಕ್ಕೆ ಏರಿಸಬೇಕೆಂದು, ಕೂಲಿ ದರವನ್ನು ೬೦೦ ಕ್ಕೆ ಏರಿಸಿ ಮರು ಜಾರಿಗೆ ಮಾಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಂಘಟಕರು ಲಕ್ಕಪ್ಪ ಬಿಜ್ಜನ್ನವರ್, ರಾಜು ಗಾಣಗಿ, ಜ್ಯೋತಿಬಾ ಮಾನ್ವಾಡಕರ್, ಭರಮಪ್ಪ ಮಾಶೇನಟ್ಟಿ, ರೇಣುಕಾ ಹಳ್ಳಿಕಾರ್, ಜ್ಯೋತಿ ಪವಾರ್ ನೂರಾರು ಕೂಲಿ ಕಾರ್ಮಿಕರು ಭಾಗವಹಿಸಿದ್ದರು.




